Advertisement

ಕೊರೊನಾ ಮುಕ್ತ ಜಿಲ್ಲೆಗೆ ಕೈಜೋಡಿಸಿ

09:18 PM May 23, 2021 | Team Udayavani |

ಬೀದರ: ರಾಜ್ಯದಲ್ಲಿ ಲಾಕ್‌ ಡೌನ್‌ನಿಂದಾಗಿ ಸೋಂಕಿತರ ಸಂಖ್ಯೆ ಇಳಿಮುಖವಾಗಿದೆ. ತಜ್ಞರ ಸಲಹೆಯಂತೆ ಮುಖ್ಯಮಂತ್ರಿಗಳು ಜೂನ್‌ 7ರವರೆಗೆ ಮತ್ತೆ ಲಾಕ್‌ಡೌನ್‌ ವಿಸ್ತರಿಸಿದ್ದು, ಈ ಹಿಂದಿನಂತೆ ಜನರು ಲಾಕ್‌ಡೌನ್‌ಗೆ ಸಹಕರಿಸಿ ಜಿಲ್ಲೆಯನ್ನು ಕೊರೊನಾದಿಂದ ಮುಕ್ತಗೊಳಿಸಲು ಕೈಜೋಡಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಮನವಿ ಮಾಡಿದರು. ಶನಿವಾರ ಸುದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್‌-19 ಸೋಂಕನ್ನು ಸಂಪೂರ್ಣ ನಿಯಂತ್ರಣಕ್ಕೆ ತರಲು ಪರೀಕ್ಷೆ ಪ್ರಮಾಣವನ್ನು ಹೆಚ್ಚಿಸುವುದು ಅನಿವಾರ್ಯವಾಗಿದೆ.

Advertisement

ಹಾಗಾಗಿ ಜಿಲ್ಲೆಗೆ ಪ್ರತಿದಿನ 3 ಸಾವಿರ ಟಾರ್ಗೆಟ್‌ ನೀಡಲಾಗಿದೆ. ಹೋಮ್‌ ಐಸೋಲೇಷನ್‌ನಲ್ಲಿರುವ ಕೊರೊನಾ ಸೋಂಕಿತರ ಮೇಲೆ ತೀವ್ರ ನಿಗಾ ವಹಿಸುವಂತೆ ಅ ಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು. ಜಿಲ್ಲೆಯ ಎಲ್ಲ ಗ್ರಾಮಗಳಿಗೆ ಆರೋಗ್ಯ ಕಾರ್ಯಕರ್ತರು ಆರೋಗ್ಯ ಸರ್ವೇ ಮಾಡಲು ಬರುತ್ತಿದ್ದಾರೆ. ಅವರಿಗೆ ಸಾರ್ವಜನಿಕರು ಸಹಕರಿಸಬೇಕು. ರೋಗ ಲಕ್ಷಣಗಳು ಇದ್ದಲ್ಲಿ ಯಾವುದೇ ಮುಚ್ಚುಮರೆ ಇಲ್ಲದೇ ತಿಳಿಸಿ, ಪರೀಕ್ಷೆಗೆ ಒಳಪಡಬೇಕು.

ಸೋಂಕಿತರು ಸಮಯಕ್ಕೆ ಚಿಕಿತ್ಸೆ ಪಡೆಯದೇ ಇದ್ದಲ್ಲಿ ತೀವ್ರ ಸಮಸ್ಯೆಗೆ ಒಳಗಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಕೆಮ್ಮು, ನೆಗಡಿ, ಜ್ವರ ಇಂತಹ ರೋಗ ಲಕ್ಷಣಗಳಿದ್ದವರು ತಕ್ಷಣ ಪರೀಕ್ಷೆಗೆ ಒಳಪಡಬೇಕೆಂದು ತಾವುಗಳು ಸಾರ್ವಜನಿಕರಲ್ಲಿ ಮತ್ತೂಮ್ಮೆ ಮನವಿ ಮಾಡುವುದಾಗಿ ಸಚಿವರು ತಿಳಿಸಿದರು. ಮೇ 22ರಂದು ಒಟ್ಟು 59 ಜನರಿಗೆ ಕೋವಿಡ್‌ ಸೋಂಕು ದೃಢಪಟ್ಟಿದೆ. ನಾಲ್ವರು ನಿಧನರಾಗಿದ್ದಾರೆ.

297 ಜನರು ಕೋವಿಡ್‌ನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಹೊಸದಾಗಿ 18 ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದುವರೆಗೆ ಬೀದರ ಜಿಲ್ಲೆಯಲ್ಲಿ 23,403 ಜನರಿಗೆ ಕೋವಿಡ್‌ ಬಾಧಿಸಿದೆ. 542 ಜನರು ಹೋಮ್‌ ಐಸೋಲೇಶನದಲ್ಲಿದ್ದಾರೆ. 2,16,463 ಜನರು ಮೊದಲನೇ ಡೋಸ್‌ ಮತ್ತು 69,115 ಜನರು ಎರಡನೇ ಡೋಸ್‌ ಪಡೆದುಕೊಂಡಿದ್ದಾರೆ ಎಂದು ಹೇಳಿದರು. ಮೇ 22ರಿಂದ ಬೀದರ ಜಿಲ್ಲೆಯಲ್ಲಿ 18ರಿಂದ 44 ವರ್ಷ ವಯೋಮಾನದವರಿಗೆ ಆದ್ಯತೆಗನುಸಾರವಾಗಿ ಕೋವಿಡ್‌-19 ಲಸಿಕಾಕರಣಕ್ಕೆ ಚಾಲನೆ ನೀಡಲಾಗಿದೆ. ಆದ್ದರಿಂದ ಅರ್ಹ ಪ್ರತಿಯೊಬ್ಬರು ಲಸಿಕೆ ಪಡೆದು ಕೋವಿಡ್‌ ಸೋಂಕು ಬಾರದಂತೆ ಎಚ್ಚರ ವಹಿಸುವ ಅಗತ್ಯವಿದೆ.

ಜಿಲ್ಲೆಯ ಜನತೆ ಉತ್ತಮ ಸಹಕಾರ ನೀಡುತ್ತಾರೆಂಬ ವಿಶ್ವಾಸವಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಧಿಕಾರಿ ರಾಮಚಂದ್ರನ್‌ ಆರ್‌., ಜಿಪಂ ಸಿಇಒ ಜಹೀರಾ ನಸೀಮ್‌, ಎಸ್‌ಪಿ ನಾಗೇಶ ಡಿ.ಎಲ್‌., ಸಹಾಯಕ ಆಯುಕ್ತರಾದ ಗರೀಮಾ ಪನ್ವಾರ್‌ ಮತ್ತು ಭುವನೇಶ ಪಾಟೀಲ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next