Advertisement

ಇಲಾಖೆ ಯೋಜನೆಗಳ ಕುರಿತು ಕೇಂದ್ರ ಸಚಿವರೊಂದಿಗೆ  ಸಚಿವ ಪ್ರಭು ಚವ್ಹಾಣ್ ಸಭೆ

09:26 PM Feb 12, 2021 | Team Udayavani |

ದೆಹಲಿ: ಇಲ್ಲಿನ ಕೃಷಿ ಭವನದಲ್ಲಿ ಕೇಂದ್ರ ಪಶುಸಂಗೋಪನೆ ಸಚಿವ ಗಿರಿರಾಜ್ ಸಿಂಗ್ ಹಾಗೂ ಕೇಂದ್ರದ ರಾಜ್ಯ ಖಾತೆ ಸಚಿವ ಸಂಜೀವಕುಮಾರ್ ಬಲ್ಯಾನ್ ಅವರೊಂದಿಗೆ ನಡೆದ ಸಭೆಯಲ್ಲಿ ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ಕರ್ನಾಟಕದಲ್ಲಿ ಇಲಾಖೆ ಜಾರಿಗೊಳಿಸಿದ ವಿವಿಧ ಯೋಜನೆಗಳ ಬಗ್ಗೆ ವಿಸ್ತೃತವಾಗಿ ಚರ್ಚೆ ನಡೆಸಿದರು. ಇಲಾಖೆಯ ಮಹತ್ವಾಕಾಂಕ್ಷಿ ಯೋಜನೆಯಾದ ಪಶುಸಂಜೀವಿನಿ ಬಗ್ಗೆಯೂ ವಿವರಣೆ ನೀಡಿದ್ದು, ಈ ಸಂದರ್ಭದಲ್ಲಿ ಕೇಂದ್ರ ಸಚಿವರು ಕರ್ನಾಟಕ ಸರ್ಕಾರ ಹಾಗೂ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ರೈತಪರ ಯೋಜನೆ ರೂಪಿಸಿದ್ದು, ಜಾನುವಾರುಗಳ ಆರೋಗ್ಯಕ್ಕೆ ಆದ್ಯತೆ ನೀಡುತ್ತಿರುವುದನ್ನು ಶ್ಲಾಘಿಸಿದ್ದಾರೆ.

Advertisement

ಸದ್ಯ ಪಶುಗಳಿಗಿರುವ ವಿಮಾ ಸೌಲಭ್ಯ ಮಿತಿಯನ್ನು  ರೂ.14,೦೦೦ ಸಾವಿರದಿಂದ ರೂ.2 ಲಕ್ಷಕ್ಕೆ ಹೆಚ್ಚಿಸಲು ಈ ಸಂದರ್ಭದಲ್ಲಿ ಸಚಿವ ಪ್ರಭು ಚವ್ಹಾಣ್ ಕೇಂದ್ರ ಸಚಿವರಿಗೆ ಮನವಿ ಮಾಡಿದರು. ಆದರೆ ಸದ್ಯ ಇರುವ ವಿಮಾ ಸೌಲಭ್ಯವನ್ನು ದ್ವಿಗುಣಗೊಳಿಸುವುದಾಗಿ ಕೇಂದ್ರ ಸಚಿವರು ಭರವಸೆ ನೀಡಿದ್ದಾರೆ.

ರಾಷ್ಟ್ರೀಯ ಕೃತಕ ಗರ್ಭಧಾರಣಾ ಕಾರ್ಯಕ್ರಮದ ಅಡಿಯಲ್ಲಿ ಹೆಣ್ಣು ಕರುಗಳ ಜನನಕ್ಕೆ ಹೆಚ್ಚು ಒತ್ತು ನೀಡಲು ಕೇಂದ್ರ ಪಶುಸಂಗೋಪನೆ ಸಚಿವರು ತಿಳಿಸಿದ್ದು, ಈ ಉದ್ದೇಶಕ್ಕಾಗಿ ಲಿಂಗ ನಿರ್ಧಾರಿತ ವೀರ್ಯ ನಳಿಕೆಗಳನ್ನು ಪ್ರತಿ ಜಿಲ್ಲೆಯಲ್ಲಿ ಅಂದಾಜು 5೦೦ ಹಳ್ಳಿಗಳನ್ನು ಆಯ್ದುಕೊಂಡು ಉಚಿತವಾಗಿ ನಳಿಕೆಗಳನ್ನು ನೀಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದ್ದು, ಈ ಯೋಜನೆಯು  ಮಿಶ್ರತಳಿಯಲ್ಲಿ ಹೆಣ್ಣು ಕರುಗಳ ಜನನಕ್ಕೆ ಹೆಚ್ಚು ಒತ್ತು ನೀಡಲಿದೆ. ರಾಜ್ಯದಲ್ಲಿ ಭ್ರೂಣ ವರ್ಗಾವಣೆ ತಂತ್ರಜ್ಞಾನದ ಮೂಲಕ 2 ಲಕ್ಷ ಹೆಣ್ಣು ಕರುಗಳ ಜನನದ ಗುರಿಯನ್ನು ಹೊಂದಲಾಗಿದೆ ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ. ರೈತರಿಗೆ ಈ ಯೋಜನೆಗಳು ಹೆಚ್ಚು ಅನುಕೂಲವಾಗಲಿವೆ ಎಂದು ಸಚಿವ ಪ್ರಭು ಚವ್ಹಾಣ್ ಅಭಿಪ್ರಾಯ ಪಟ್ಟಿದ್ದಾರೆ.

ಇದನ್ನೂ ಓದಿ:ಉಳಿದ ಶಾಲಾ ತರಗತಿ ಆರಂಭ ಕುರಿತು ಫೆ. 16ರಂದು ಸಭೆ : ಸಚಿವ ಸುರೇಶ್ ಕುಮಾರ್

ಕುರಿ ಮತ್ತು ಮೇಕೆ ಸಾಕಾಣಿಕೆಗೆ ಹೆಚ್ಚು ಒತ್ತು ನೀಡಲು ಕಡಿಮೆ ಬಡ್ಡಿದರದಲ್ಲಿ ರಾಷ್ಟ್ರೀಕೃತ ಬ್ಯಾಂಕ್  ಹಾಗೂ ಸಹಕಾರಿ ಬ್ಯಾಂಕ್ ಗಳ ಮೂಲಕ ಸಾಲ ಒದಗಿಸಿ ಕುರಿ ಮತ್ತು ಮೇಕೆ ಸಾಕಾಣಿಕೆಯಲ್ಲಿ ಉದ್ಯಮಶೀಲತೆಯನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ಮುಂಬರುವ ವರ್ಷದಲ್ಲಿ ಯೋಜನೆಗಳನ್ನು ರೂಪಿಸಲಿದೆ ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ.

Advertisement

ಮೇವು ಉತ್ಪಾದನೆಗೆ ಸಂಬಂಧಿಸಿದಂತೆ ಪಿಪಿಪಿ ಮಾದರಿಯಲ್ಲಿ ರಸಮೇವಿನ ಉತ್ಪಾದನೆಗೆ ಗಮನಹರಿಸಲು ಕೇಂದ್ರ ಸಚಿವರು ಸಲಹೆ ನೀಡಿದ್ದಾರೆ. ರಾಜ್ಯದಲ್ಲಿರುವ ಪಶುಸಂಗೋಪನೆ ಇಲಾಖೆಯ ಫಾರ್ಮ್ ಗಳನ್ನು ಮೇವು ಉತ್ಪಾದನಾ ಉದ್ದೇಶಕ್ಕೆ ಬಳಸಿಕೊಳ್ಳಲು ಚಿಂತನೆ ನಡೆಸಲು ತಿಳಿಸಿದ್ದಾರೆ.

ಕೇಂದ್ರದ ಯೋಜನೆಗಳಿಗೆ ಬರಬೇಕಾದ ಬಾಕಿ ಹಣವನ್ನು ಬಿಡುಗಡೆಗೊಳಿಸಲು ಸಚಿವ ಪ್ರಭು ಚವ್ಹಾಣ್ ಕೋರಿಕೊಂಡಿದ್ದು, ಸದ್ಯದಲ್ಲೆ ಬಾಕಿ ಹಣವನ್ನು ಬಿಡುಗಡೆ ಮಾಡುವುದಾಗಿ ಕೇಂದ್ರ ಸಚಿವರು ಭರವಸೆ ನೀಡಿದ್ದಾರೆ.

ಸಚಿವ ಪ್ರಭು ಚವ್ಹಾಣ್ ಅವರ ಕೇಂದ್ರ ಸಚಿವರೊಂದಿಗಿನ ಸಭೆ ಫಲಪ್ರದವಾಗಿದ್ದು, ಕೇಂದ್ರದಿಂದ ರಾಜ್ಯಕ್ಕೆ ಎಲ್ಲ ಅಗತ್ಯ ನೆರವು ನೀಡುವುದಾಗಿ ಕೇಂದ್ರ ಸಚಿವರು ಭರವಸೆ ನೀಡಿದ್ದಾರೆ. ಇದೆ ವೇಳೆ ಕರ್ನಾಟದಲ್ಲೂ ಗೋಹತ್ಯೆ ನಿಷೇಧ ಜಾರಿಯಾಗಿದಕ್ಕೆ ಕೇಂದ್ರ ಸಚಿವರು ಹರ್ಷವ್ಯಕ್ತ ಪಡಿಸಿದ್ದಾರೆ. ದೆಹಲಿಯಲ್ಲಿ ನಡೆದ ಸಭೆಯಲ್ಲಿ ಪಶುಸಂಗೋಪನೆ ಇಲಾಖೆಯ ಕಾರ್ಯದರ್ಶಿ ಕಲ್ಪನಾ, ನಿರ್ದೇಶಕ ಶಿವರಾಮ್ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next