ಬೆಂಗಳೂರು: ದೀಪಾವಳಿ ಬಲಿಪಾಡ್ಯಮಿ ದಿನ ರಾಜ್ಯದ ಎಲ್ಲ ಹಿಂದೂ ದೇವಾಲಯಗಳಲ್ಲಿ ಗೋಪೂಜೆ ನಡೆಸಲು ಧಾರ್ಮಿಕ ದತ್ತಿ ಇಲಾಖೆಯಿಂದ ಆದೇಶ ಹೊರಡಿಸಿರುವುದಕ್ಕೆ ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್ ಹರ್ಷ ವ್ಯಕ್ತಪಡಿಸಿದ್ದಾರೆ.
ಅಲ್ಲದೇ ಗೋವುಗಳ ಹಿತದೃಷ್ಠಿಯಿಂದ ಉತ್ತಮ ನಿರ್ಧಾರ ಕೈಗೊಂಡ ಮುಜರಾಯಿ ಸಚಿವರಾದ ಶಶಿಕಲಾ ಜೊಲ್ಲೆ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಹಿಂದೂ ಧರ್ಮದಲ್ಲಿ ಗೋವು(ಹಸು)ಗಳಿಗೆ ತಾಯಿಯ ಸ್ಥಾನವನ್ನು ನೀಡಿದ್ದು, ಗೋಮಾತೆ, ದೇವತೆ ಎಂದು ಭಾವಿಸಿ ಪೂಜಿಸಲಾಗುತ್ತದೆ. ಪುರಾಣ, ಉಪನಿಷತ್ತುಗಳಲ್ಲಿ ಗೋವುಗಳಿಗೆ ವಿಶೇಷ ಸ್ಥಾನವಿದೆ. ಹಿಂದೂ ಧರ್ಮಗ್ರಂಥಗಳಲ್ಲಿ ಗೋವಿಗೆ ಮಾತೆಯ ಸ್ಥಾನ ನೀಡಲಾಗಿದೆ. ಗೋಮಾತೆಯನ್ನು ಪೂಜಿಸಿದರೆ ಅನೇಕ ಸಮಸ್ಯೆಗಳು ಪರಿಹಾರವಾಗುವುದರ ಜೊತೆ ವಾಸ್ತುದೋಷಕ್ಕೂ ಪರಿಹಾರ ದೊರೆಯುವುದೆಂಬ ನಂಬಿಕೆ ನಮ್ಮ ಸಮಾಜದಲ್ಲಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಆಟೋರಿಕ್ಷಾ ಚಾಲಕನೊಂದಿಗೆ ಪರಾರಿಯಾದ ಕೋಟ್ಯಧಿಪತಿಯ ಪತ್ನಿ!
ಇಂದಿನ ದಿನಗಳಲ್ಲಿ ಪಟ್ಟಣ, ಮಹಾನಗರಗಳಲ್ಲಿ ವಾಸಿಸುವ ಜನರು ಗೋಪೂಜೆಯನ್ನು ಮರೆತು ಬಿಡುತ್ತಿದ್ದಾರೆ. ಹಿಂದೂ ಸನಾತನ ಧರ್ಮದ ಗೋಮಾತೆಯನ್ನು ದೇವರೆಂದು ತಿಳಿದು ಪೂಜಿಸುವ ಸಂಪ್ರದಾಯ ಬಿಡಬಾರದೆಂಬ ಉದ್ದೇಶದಿಂದ ಹೊರಡಿಸಿರುವ ಈ ಆದೇಶದಿಂದ ಮುಂದಿನ ಪೀಳಿಗೆಗೆ ಗೋವುಗಳ ಪೂಜೆಯನ್ನು ಪರಿಚಯಿಸಿ ಸಂಪ್ರದಾಯವನ್ನು ಮುಂದುವರೆಸುವುದು, ಗೋವುಗಳ ಮಹತ್ವ ಹಾಗೂ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸಲು ಸಹಕಾರಿಯಾಗಲಿದೆ. ಗೋವುಗಳ ಹಿತದೃಷ್ಟಿಯಿಂದ ಉತ್ತಮ ನಿರ್ಧಾರ ಕೈಗೊಂಡ ಮುಜರಾಯಿ ಇಲಾಖೆ ಸಚಿವರಾದ ಶಶಿಕಲಾ ಜೊಲ್ಲೆ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ದೀಪಾವಳಿ ಬಲಿಪಾಡ್ಯಮಿ ದಿನದಂದು ನಾನೂ ಕೂಡ ಗೋಪೂಜೆ ನಡೆಸಲಿದ್ದು, ಆದೇಶದಂತೆ ರಾಜ್ಯದ ಎಲ್ಲ ಮುಜರಾಯಿ ದೇವಾಲಯಗಳಲ್ಲಿ ಗೋವುಗಳಿಗೆ ಸ್ನಾನ ಮಾಡಿಸಿ, ಅರಿಶಿಣ, ಕುಂಕುಮ, ಹೂವುಗಳಿಂದ ಅಲಂಕರಿಸಿ, ಅಕ್ಕಿ ಬೆಲ್ಲ, ಬಾಳೆಹಣ್ಣು, ಸಿಹಿ ತಿನಿಸು ಮುಂತಾದ ಗೋಗ್ರಾಸವನ್ನು ಹಸುವಿಗೆ ತಿನ್ನಿಸಿ ಧೂಪ, ದೀಪಗಳಿಂದ ಗೋಪೂಜೆ ನೆರವೇರಿಸಬೇಕೆಂದು ಮನವಿ ಮಾಡಿದ್ದಾರೆ.