ಹೈದರಾಬಾದ್: ಡಾರ್ಲಿಂಗ್ ಪ್ರಭಾಸ್ (Prabhas) ನಿರ್ದೇಶಕ ಎಸ್‌ಎಸ್ ರಾಜಮೌಳಿ (SS Rajamouli) ಕಾಂಬಿನೇಷನ್‌ನಲ್ಲಿ ಬಂದಿದ್ದ ʼಬಾಹುಬಲಿʼ (Baahubali) ವಿಶ್ವ ಚಿತ್ರರಂಗವೇ ಭಾರತದತ್ತ ತಿರುಗಿ ನೋಡುವಂತೆ ಮಾಡಿದ ಸಿನಿಮಾ.
ʼಬಾಹುಬಲಿʼ ಸಿನಿಮಾದ ಎರಡೂ ಸರಣಿ ಕೂಡ ಬಾಕ್ಸ್ ಆಫೀಸ್‌ನಲ್ಲಿ ಸಾವಿರ ಕೋಟಿಗೂ ಅಧಿಕ ಕಲೆಕ್ಷನ್ ಮಾಡುವುದರ ಜತೆಗೆ ಭಾರತೀಯ ಸಿನಿಮಾರಂಗದಲ್ಲಿ ಒಂದು ಹೊಸ ಆಯಾಮವನ್ನು ಸೃಷ್ಟಿಸಿತ್ತು.
ಅದ್ಧೂರಿ ಮೇಕಿಂಗ್, ಪೌರಾಣಿಕ ಕಥೆ, ಚಿತ್ರಕಥೆ, ಅಭಿನಯ, ವಿಎಫ್ ಎಕ್ಸ್, ಛಾಯಗ್ರಹಣ ಹೀಗೆ ಎಲ್ಲಾ ವಿಭಾಗದಲ್ಲೂ ʼಬಾಹುಬಲಿʼ ದಿ ಬೆಸ್ಟ್ ಎನ್ನುವ ಶ್ಲಾಘನೆಯನ್ನು ಪಡೆದುಕೊಂಡಿತ್ತು. ʼಬಾಹುಬಲಿʼ ಬಳಿಕ ರಾಜಮೌಳಿ ಅದೇ ರೀತಿಯ ಖ್ಯಾತಿ ಹಾಗೂ ಯಶಸ್ಸನ್ನು ʼಆರ್ ಆರ್ ಆರ್ʼ ಮೂಲಕ ಗಳಿಸಿದ್ದರು.
ʼಬಾಹುಬಲಿʼ ಸಿನಿಮಾ ಮೂರನೇ ಭಾಗವಾಗಿ ತೆರೆಗೆ ಬರುತ್ತದೆ ಎನ್ನುವ ಮಾತು ಪಾರ್ಟ್ -2 ಬಳಿಕ ಆರಂಭದಲ್ಲಿ ಕೇಳಿ ಬಂದಿತ್ತು. ಆದರೆ ʼಬಾಹುಬಲಿ -3ʼ ಬರುವುದಿಲ್ಲ. ಪಾರ್ಟ್ -2ನಲ್ಲೇ ಇದರ ಕಥೆ ಮುಗಿದಿದೆ ಎಂದು 2017ರಲ್ಲೇ ಹಿರಿಯ ಚಿತ್ರಕಥೆಗಾರ ಕೆ.ವಿ.ವಿಜಯೇಂದ್ರ ಪ್ರಸಾದ್ ಹೇಳಿದ್ದರು.
ಆದರೆ ಇದೀಗ ನಿರ್ಮಾಪಕರೊಬ್ಬರು ʼಬಾಹುಬಲಿ-3ʼ (Baahubali 3) ಬಗ್ಗೆ ಮಾತನಾಡಿದ್ದು, ಮತ್ತೊಮ್ಮೆ ಪ್ರೇಕ್ಷಕರು ʼಬಾಹುಬಲಿʼ ಲೋಕದ ಬಗ್ಗೆ ನೆನಪು ಮಾಡಿಕೊಳ್ಳುವಂತೆ ಮಾಡಿದ್ದಾರೆ.
ʼಕಂಗುವʼ ಚಿತ್ರದ ನಿರ್ಮಾಪಕ ಕೆ.ಇ.ಜ್ಞಾನವೇಲ್ ರಾಜಾ (Producer KE Gnanavel) ಸಂದರ್ಶನವೊಂದರಲ್ಲಿʼಬಾಹುಬಲಿ-3ʼ ಬರುವುದು ಅಧಿಕೃತವೆಂದು ಹೇಳಿರುವುದು ಟಾಲಿವುಡ್‌ನಲ್ಲಿ ಚರ್ಚೆಗೆ ಕಾರಣವಾಗಿದೆ.
ʼಬಾಹುಬಲಿ 3ʼ ಯೋಜನೆ ಹಂತದಲ್ಲಿದೆ ಎನ್ನುವುದು ಕಳೆದ ವಾರ ಚಿತ್ರ ನಿರ್ಮಾಪಕರ ಜೊತೆ ಚರ್ಚಿಸಿದಾಗ ನನಗೆ ತಿಳಿಯಿತು. ಬಾಹುಬಲಿ 1 ಮತ್ತು 2 ನ್ನು ಬ್ಯಾಕ್-ಟು-ಬ್ಯಾಕ್ ಮಾಡಿದರು. ಆದರೆ ಈಗ ಒಂದು ದೊಡ್ಡ ಗ್ಯಾಪ್ ನಂತರ ಬಾಹುಬಲಿ 3 ಬಗ್ಗೆ ಯೋಜಿಸುತ್ತಿದ್ದಾರೆ ಎಂದು ಕೆ.ಇ.ಜ್ಞಾನವೇಲ್ ರಾಜಾ ಹೇಳಿದ್ದಾರೆ.
ʼಕಲ್ಕಿ 2898 ಎಡಿʼ ಸೀಕ್ವೆಲ್ ಬಗ್ಗೆ ಮಾತನಾಡಿರುವ ಅವರು, ʼಕಲ್ಕಿ 2898 ಎಡಿʼ ಸಿನಿಮಾದ ಮುಂದಿನ ಭಾಗ ಕೂಡ ಎರಡು ಸಿನಿಮಾದ ಗ್ಯಾಪ್ ಬಳಿಕವೇ ಆಗಲಿದೆ. ಮುಂದಿನ ಭಾಗಗಳನ್ನು ಮತ್ತೆ ಆನಂದಿಸಲು ಪ್ರೇಕ್ಷಕರು ಪಾತ್ರಗಳೊಂದಿಗೆ ಸಂಪರ್ಕ ಹೊಂದಬೇಕು ಎಂದು ವಿವರಿಸಿದ್ದಾರೆ.
ʼಸಲಾರ್-2ʼ ಒಂದು ನಿರ್ದಿಷ್ಟವಾದ ಗ್ಯಾಪ್ ಪಡೆದುಕೊಂಡ ಬಳಿಕವೇ ತೆರೆಗೆ ಬರಲಿದೆ ಎಂದು ಅವರು ಹೇಳಿದ್ದಾರೆ.
ಸದ್ಯ ರಾಜಮೌಳಿ ಮಹೇಶ್ ಬಾಬು ಅವರ ʼSSMB 29ʼ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಅಡ್ವೆಂಚರ್ ಜಂಗಲ್, ಸಾಹಸಮಯ ಕಥೆಯನ್ನು ಸಿನಿಮಾ ಒಳಗೊಂಡಿದ್ದು, ಸಿನಿಮಾದಲ್ಲಿ ಮಹೇಶ್ ಬಾಬು ಅವರ ಪಾತ್ರವು ರಾಮಾಯಣದ ಹನುಮಂತನಿಂದ ಪ್ರೇರಿತವಾಗಿದೆ ಎಂದು ಹೇಳಲಾಗಿದೆ. 2025ರ ಜನವರಿಯಲ್ಲಿ ಈ ಸಿನಿಮಾ ಸೆಟ್ಟೇರಲಿದೆ.