Advertisement

ಭೂಸ್ವಾಧೀನಕ್ಕೂ ಪಿಪಿಪಿ ಮಾದರಿ?

12:14 PM Oct 21, 2020 | Suhan S |

ಬೆಂಗಳೂರು: ಸರ್ಕಾರದ ಮಹತ್ವಾಕಾಂಕ್ಷಿ ಪೆರಿಫ‌ರಲ್‌ ರಿಂಗ್‌ ರಸ್ತೆ (ಪಿಆರ್‌ಆರ್‌) ನಿರ್ಮಾಣದಿಂದ ಆಗಲಿರುವ “ಆರ್ಥಿಕ ಹೊರೆ’ ತಗ್ಗಿಸಲು ಉದ್ದೇಶಿತ ಯೋಜನೆಗಾಗಿ ಸ್ವಾಧೀನಪಡಿಸಿಕೊಳ್ಳಲಿರುವ ಭೂಸ್ವಾಧೀನ ಪ್ರಕ್ರಿಯೆಯನ್ನೂ ಖಾಸಗಿ-ಸಾರ್ವಜನಿಕ ಸಹಭಾಗಿತ್ವ(ಪಿಪಿಪಿ)ದಡಿ ತರಲು ಚಿಂತನೆ ನಡೆದಿದೆ.

Advertisement

ಯೋಜನೆಗೆ ವಶಪಡಿಸಿಕೊಳ್ಳಲಿರುವ ಭೂಮಿ ಬದಲಿಗೆ ಸಂತ್ರಸ್ತರಿಗೆ  ನೀಡಲಾಗುವ ಪರಿಹಾರದ ಮೊತ್ತ ಹೆಚ್ಚು-ಕಡಿಮೆ ಇಡೀ ಪ್ರಾಜೆಕ್ಟ್ಗೆ ತಗಲುವ ಅಂದಾಜು ವೆಚ್ಚದ ಅರ್ಧದಷ್ಟಾಗುತ್ತದೆ. ಇದನ್ನು ಸ್ವಾಧೀನಪಡಿಸಿಕೊಂಡ ತಕ್ಷಣ ಪಾವತಿಸಬೇಕಾಗುತ್ತದೆ. ಸರ್ಕಾರಕ್ಕೆ ಇದು ಹೊರೆ ಆಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಇದನ್ನು ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದೆ. ಪ್ರಸ್ತುತ ಯೋಜನೆ ಅನುಷ್ಠಾನ ಅಂದರೆ ನಿರ್ಮಾಣ ಕಾರ್ಯವನ್ನು ಮಾತ್ರ ಪಿಪಿಪಿ ಮಾದರಿ ಯಲ್ಲಿ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ.

ಈ ನಿಟ್ಟಿನಲ್ಲಿ ಹಲವು ಕಂಪನಿಗಳು ಆಸಕ್ತಿ ತೋರಿಸಿವೆ ಎನ್ನಲಾಗಿದ್ದು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ)ವು ಈಗಾಗಲೇ ಪೂರಕ ಸಿದ್ಧತೆ ಮಾಡಿಕೊಳ್ಳುತ್ತಿದೆ. ಶೀಘ್ರ ಸರ್ಕಾರದ ಮುಂದಿಡಲಾಗುವುದು. ಅಲ್ಲಿ ಅಂತಿಮ ತೀರ್ಮಾನಕೈಗೊಂಡ ನಂತರ ಟೆಂಡರ್‌ ಆಹ್ವಾನಿಸಲಾಗುವುದು.ಈಎಲ್ಲಾ ಪ್ರಕ್ರಿಯೆಗೆ ಕನಿಷ್ಠ 6ತಿಂಗಳು ಸಮಯ ಹಿಡಿಯುತ್ತದೆ ಎಂದು ಪ್ರಾಧಿಕಾರದಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಒಟ್ಟಾರೆ ಸುಮಾರು 18 ಸಾವಿರ ಕೋಟಿ ಮೊತ್ತದ ಈ ಯೋಜನೆಗೆ ಮೊದಲು 1,810 ಎಕರೆ ಭೂಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಹೊರಡಿಸಲಾಗಿತ್ತು. ಇದರ ಪರಿಹಾರದ ಮೊತ್ತ 11,500 ಕೋಟಿ ರೂ. ಆಗುತ್ತದೆ. ಈಗ ವಿನ್ಯಾಸದಲ್ಲಿ ಮಾರ್ಪಾಡು ಮಾಡಿದ್ದರಿಂದ ಮತ್ತೆ 589 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲು ಪ್ರಾಥಮಿಕ ಅಧಿಸೂಚನೆ ಹೊರಡಿಸಲು ಸಿದ್ಧತೆ ನಡೆದಿದೆ. ಇದರಿಂದ 3 ಸಾವಿರ ಕೋಟಿ ರೂ. ಹೆಚ್ಚುವರಿ ಬೇಕಾಗುತ್ತದೆ. ಇಷ್ಟೊಂದು ಪ್ರಮಾಣದಲ್ಲಿ ಸಂಪನ್ಮೂಲ ಕ್ರೋಢೀಕರಣ ಸವಾಲಾಗಿದ್ದು, ಪರೋಕ್ಷವಾಗಿ ಇದು ಯೋಜನೆ ಪ್ರಗತಿ ಮಂದಗತಿಯಲ್ಲಿ ಸಾಗಲು ಕಾರಣವಾಗಲಿದೆ. ಈ ಹಿನ್ನೆಲೆಯಲ್ಲಿ ಖಾಸಗಿ ಮೊರೆಹೋಗುವ ಆಲೋಚನೆ ನಡೆದಿದೆ.

ಅದರಂತೆ ಭೂಸ್ವಾಧೀನಕ್ಕೆ ಆಗುವ ಪರಿಹಾರಮೊತ್ತವನ್ನು ಖಾಸಗಿ ಕಂಪನಿಯಿಂದ ಸಾಲದ ರೂಪದಲ್ಲಿ ಪಡೆಯಲಾಗುವುದು. ಅದನ್ನು ನಂತರದ ದಿನಗಳಲ್ಲಿ ಬಿಡಿಎ ಹಂತ-ಹಂತವಾಗಿ ಪಾವತಿಸಬಹುದು ಅಥವಾ ಮಾರ್ಗದುದ್ದಕ್ಕೂ 17 ಟೋಲ್‌ಗೇಟ್‌ಗಳು ಬರುತ್ತವೆ. ಬಳಕೆದಾರರಿಗೆ ಟೋಲ್‌ ವಿಧಿಸುವ ಮೂಲಕ ಹಿಂಪಡೆಯಬಹುದು. ಆದರೆ, ಇದು ಮಾರ್ಗದಲ್ಲಾಗಬಹುದಾದ ವಾಹ ನದಟ್ಟಣೆ ಆಧರಿಸಿದೆ. ಅಥವಾ ಸಾಲಕ್ಕೆ ಪ್ರತಿಯಾಗಿ ಸರ್ಕಾರ ನೈಸ್‌ ರಸ್ತೆ ನಿರ್ಮಾಣ ಯೋಜನೆಗೆ ನೀಡಿದಂತೆ ಒಪ್ಪಂದ ಮಾಡಿಕೊಳ್ಳುವ ಕಂಪನಿಗೆ ಟೌನ್‌ಶಿಪ್‌ ಅಭಿವೃದ್ಧಿಗೆ ಹತ್ತಿರದಲ್ಲಿ ಭೂಮಿಯನ್ನೂ ನೀಡಬಹುದು. ಆದರೆ, ಇದೆಲ್ಲವೂ ಭಾಗವಹಿಸುವ ಕಂಪನಿಗಳು ಹಾಗೂ ವಿಧಿಸುವ ಷರತ್ತುಗಳನ್ನು ಅವಲಂಬಿಸಿದೆ.

ಏನು ಉಪಯೋಗ?: ನಿಯಮದ ಪ್ರಕಾರ ಭೂಮಿ ಕಳೆದುಕೊಂಡವರಿಗೆ ಮಾರ್ಗಸೂಚಿ ದರದ ದುಪ್ಪಟ್ಟು ಪರಿಹಾರ ನೀಡಬೇಕು. ಸುಮಾರು 68 ಕಿ.ಮೀ. ಉದ್ದದ ಪಿಆರ್‌ಆರ್‌ಗೆ ಸಾಕಷ್ಟು ಪ್ರಮಾಣ ಭೂಸ್ವಾಧೀನ ಮಾಡಿಕೊಳ್ಳುವುದರಿಂದ ದೊಡ್ಡ ಮೊತ್ತ ಪರಿಹಾರಕ್ಕೆ ಬೇಕಾಗುತ್ತದೆ. ಜಪಾನ್‌ ಇಂಟರ್‌ನ್ಯಾಷನಲ್‌ ಕೋ-ಆಪರೇಷನ್‌ ಏಜೆನ್ಸಿ (ಜೈಕಾ) ಭೂಸ್ವಾಧೀನ

Advertisement

ಪರಿಹಾರಕ್ಕೆ ಹಣ ನೀಡುವುದಿಲ್ಲ. ಯೋಜನೆಗೆ ನೀಡಲು ಮಾತ್ರ ಅವಕಾಶ ಇದೆ. ಖಾಸಗಿ ಸಂಸ್ಥೆಗಳು ಆ ಮೊತ್ತ ಭರಿಸುವುದಾದರೆ, ಆ ಹೊರೆ ತಗ್ಗಿದಂತಾಗುತ್ತದೆ. ಸುಮಾರು ಒಂದೂವರೆ ದಶಕದ ಯೋಜನೆ ಇದಾಗಿದೆ. 2007ರಲ್ಲಿ 65.5 ಕಿ.ಮೀ. ಉದ್ದದ ಪೆರಿಫ‌ರಲ್‌ ರಿಂಗ್‌ರಸ್ತೆ ನಿರ್ಮಿಸಲು ಮೊದಲು ಪ್ರಸ್ತಾವನೆ ಸಲ್ಲಿಕೆಯಾಗಿತ್ತು.ಆಗ ಇದರಅಂದಾಜು ವೆಚ್ಚ8 ಸಾವಿರ ಕೋಟಿ ರೂ. ಆಗಿತ್ತು. ನಂತರದಲ್ಲಿ 2018ರಲ್ಲಿ 68 ಕಿ.ಮೀ. ಉದ್ದ ಮತ್ತು 100 ಮೀ. ಅಗಲದ ಪರಿಷ್ಕೃತ ಯೋಜನೆಯಾಗಿ ಪುನಃ ಪ್ರಸ್ತಾಪವಾಯಿತು. ಆಗ ಯೋಜನಾ ವೆಚ್ಚ 17,313 ಕೋಟಿ ಆಯಿತು. ಪ್ರಸ್ತುತ 20 ಸಾವಿರ ಕೋಟಿ ರೂ. ಮೇಲ್ಪಟ್ಟಿದೆ.

ಹೆಚ್ಚುವರಿ ಭೂಮಿ ಏಕೆ? : ಪಿಆರ್‌ಆರ್‌ ಹೆಸರಘಟ್ಟ ರಸ್ತೆ, ದೊಡ್ಡಬಳ್ಳಾಪುರ, ಬಳ್ಳಾರಿ, ಹೆಣ್ಣೂರು-ಬಾಗಲೂರು, ಹೊಸಕೋಟೆ-ಆನೇಕಲ್‌, ಸರ್ಜಾಪುರ ಸೇರಿದಂತೆ ಹತ್ತು ಪ್ರಮುಖ ಮಾರ್ಗಗಳನ್ನು ಇದು ಸಂಪರ್ಕಿಸಲಿದೆ. ಸಿಗ್ನಲ್‌ ಮುಕ್ತ ಹಾಗೂ ಮಾರ್ಗದುದ್ದಕ್ಕೂ ಬರುವ ಅಪಾರ್ಟ್‌ಮೆಂಟ್‌ಗಳು ಮತ್ತು ಜಂಕ್ಷನ್‌ಗಳು, ಅನಿಲ ಕೊಳವೆ ಮಾರ್ಗವನ್ನು ಸಾಧ್ಯವಾದಷ್ಟು ತಪ್ಪಿಸಲು ಲೂಪ್‌ (ದೊಡ್ಡಕೊಳವೆ)ಗಳನ್ನು ನಿರ್ಮಿಸಬೇಕಾಗುತ್ತದೆ. ಟೋಲ್‌ಗೇಟ್‌ಗಳಎರಡೂ ಬದಿಯಲ್ಲಿ ಪ್ರವೇಶ-ನಿರ್ಗಮನ ಮಾರ್ಗಗಳನ್ನು ನಿರ್ಮಿಸಬೇಕಾಗುತ್ತದೆ. ಇದಕ್ಕಾಗಿ ಹೆಚ್ಚುವರಿ ಭೂಸ್ವಾಧೀನಕ್ಕೆ ಬಿಡಿಎ ಮುಂದಾಗುತ್ತಿದೆ.

 

ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next