Advertisement

ಪಿಪಿಇಧಾರಿ ಕ್ಷೌರಿಕರು; ಬೆರಳೆಣಿಕೆ ಭಕ್ತರು!

03:01 AM Jun 12, 2020 | Sriram |

ತಿರುಪತಿ: ಹೆಸರು ಕೇಳಿದರೆ ಸಾಕು, ಜನಜಂಗುಳಿಯಿಂದ ಗಿಜಿಗುಡುವ ದೇಗುಲದ ಆವರಣ, ತಿಮ್ಮಪ್ಪನ ದರ್ಶನಕ್ಕೆಂದು ದಿನಗಟ್ಟಲೆ ಸಾಲುಗಟ್ಟಿ ನಿಲ್ಲುವ ಅಸಂಖ್ಯಾತ ಜನ, ಮುಡಿ ಕೊಟ್ಟು ತಲೆಗೆ ಗಂಧ ಲೇಪಿಸಿ ಕೊಂಡ ಭಕ್ತಾದಿಗಳೇ ಕಣ್ಣ ಮುಂದೆ ಬರುತ್ತಾರೆ. ಆದರೆ ಜಗತ್ತಿನ ಈ ಶ್ರೀಮಂತ ದೇಗುಲದಲ್ಲಿ ಈಗ ಎಲ್ಲವೂ ಬದಲಾಗಿದೆ.

Advertisement

80 ದಿನಗಳ ನಿರ್ಬಂಧದ ಬಳಿಕ ತಿರುಮಲ ವೆಂಕಟೇಶ್ವರ ದೇಗುಲದ ಬಾಗಿಲು ತೆರೆದಿದ್ದು, ಕಣ್ಣು ಹಾಯಿಸಿ ದಲ್ಲೆಲ್ಲ ಪಿಪಿಇ ಧರಿಸಿಕೊಂಡ ಸಿಬಂದಿ ಕಾಣಸಿಗುತ್ತಾರೆ. ದೇವಸ್ಥಾನದ ಸರತಿಯ ಸಾಲು ಸಣ್ಣ ದಾಗಿದೆ, ಅಲ್ಲೂ 6 ಅಡಿ ಅಂತರ ಕಡ್ಡಾಯ. ದೇಗುಲದ ಆವರಣ ಪ್ರವೇಶಿಸಿದ ಬಳಿಕ ಯಾವ ಕಾರಣಕ್ಕೂ ಮಾಸ್ಕ್ ಕೋವಿಡ್ -19 ಇಳಿಸುವಂತಿಲ್ಲ. ಅಲ್ಲಿ ಇಷ್ಟು ಕಠಿನ ನಿಯಮಾವಳಿಗಳನ್ನು ಜಾರಿ ಮಾಡಲಾಗಿದೆ. ಇವೆಲ್ಲವೂ ಕೋವಿಡ್ -19 ಎಂಬ ವೈರಸ್‌ನಿಂದ ರಕ್ಷಿಸಿಕೊಳ್ಳಲು ಅನುಸರಿಸಲಾಗುತ್ತಿರುವ ಕ್ರಮಗಳು.

ದೇವಾಲಯದ ಇತಿಹಾಸದಲ್ಲಿ ನಾವೆಂದೂ ಇಂಥ ದ್ದೊಂದು ಪರಿಸ್ಥಿತಿಯನ್ನು ಕಂಡಿಲ್ಲ ಎನ್ನುತ್ತಾರೆ ತಿರುಮಲ ತಿರುಪತಿ ದೇವಸ್ಥಾನಮ್‌ (ಟಿಟಿಡಿ) ಮುಖ್ಯಸ್ಥ ವೈ.ವಿ.ಸುಬ್ಟಾ ರೆಡ್ಡಿ.

ಏನೇನು ಕ್ರಮ?
ತಿಮ್ಮಪ್ಪನ ದರ್ಶನಕ್ಕೆ ಹೋದವ ರೆಲ್ಲರೂ ವಾಹನದಿಂದ ಕಾಲು ಕೆಳಗಿಡು ತ್ತಿದ್ದಂತೆಯೇ ಕೈಗಳನ್ನು,ಬ್ಯಾಗುಗಳನ್ನು ಸ್ವಚ್ಛಗೊಳಿಸಿಕೊಳ್ಳಬೇಕು. ಬ್ಯಾಗುಗಳು ಮಗ ದೊಮ್ಮೆ ಪ್ರತ್ಯೇಕ ತಪಾಸಣೆಗೆ ಒಳಗಾಗುತ್ತವೆ.

ಅದರ ಜತೆಗೆ ಎಲ್ಲ ಭಕ್ತರ ದೇಹ ತಾಪಮಾನದ ಪರೀಕ್ಷೆ ನಡೆಯುತ್ತದೆ. ಮಾಸ್ಕ್ ಧರಿಸದೆ ದೇಗುಲದ ಆವರಣ ಪ್ರವೇಶಿಸುವಂತೆಯೇ ಇಲ್ಲ. ಸದಾಕಾಲ ಭಕ್ತಿಗೀತೆಗಳೇ ಕೇಳಿಬರುತ್ತಿದ್ದ ಧ್ವನಿವರ್ಧಕಗಳಲ್ಲಿ ಈಗ ನಡು ನಡುವೆ “ನಿಮ್ಮೊಂದಿಗೆ ಸ್ಯಾನಿಟೈಸರ್‌ ಬಾಟಲಿ ಇರಿಸಿಕೊಳ್ಳಲು ಮರೆಯದಿರಿ, ಮಾಸ್ಕ್ ಧರಿಸಿಕೊಳ್ಳಿ, ಶಾರೀರಿಕ ಅಂತರ ಕಾಪಾಡಿಕೊಳ್ಳಿ’ ಎಂಬ ಸಂದೇಶಗಳೂ ಕೇಳಿಸುತ್ತಿವೆ.

Advertisement

ಭಕ್ತರ ಸಂಖ್ಯೆಗೂ ಮಿತಿ
ಲಾಕ್‌ಡೌನ್‌ ಘೋಷಣೆಗೆ ಮುನ್ನ ತಿರುಮಲ ದೇವಸ್ಥಾನಕ್ಕೆ ಪ್ರತೀ ದಿನ 75ರಿಂದ 90 ಸಾವಿರದಷ್ಟು ಭಕ್ತರು ಭೇಟಿ ನೀಡುತ್ತಿದ್ದರು. ಆದರೆ ಈಗ ಜನಜಂಗುಳಿಯನ್ನು ತಡೆಯುವುದಕ್ಕಾಗಿ ದೇಗುಲಕ್ಕೆ ಆಗಮಿಸುವವರ ಸಂಖ್ಯೆಯನ್ನು ದಿನಕ್ಕೆ 6 ಸಾವಿರದಿಂದ 10 ಸಾವಿರಕ್ಕೆ ಮಿತಿಗೊಳಿಸಲಾಗಿದೆ. ಇದಕ್ಕಾಗಿ ಆನ್‌ಲೈನ್‌ ಬುಕಿಂಗ್‌ ಮೂಲಕವೇ ದರ್ಶನದ ಟಿಕೆಟ್‌ ವಿತರಿಸಲಾಗುತ್ತಿದೆ. ದೇಗುಲದ ಆವರಣದ ಬಹುತೇಕ ಮಳಿಗೆಗಳು ಈಗಲೂ ಮುಚ್ಚಿವೆ. ಕೋವಿಡ್ -19ದಿಂದ ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ಅನುಸರಿಸಬೇಕಾದ ಕ್ರಮಗಳನ್ನು ಒಳಗೊಂಡ ಫಲಕಗಳನ್ನು ದೇಗುಲದ ಸುತ್ತಮುತ್ತ ಅಂಟಿಸಲಾಗಿದೆ.

ಕ್ಷೌರಿಕರಿಗೂ ಪಿಪಿಇ
ಮುಡಿ ಸಮರ್ಪಿಸಿ ಇಷ್ಟಾರ್ಥಗಳನ್ನು ಬೇಡಿಕೊಳ್ಳುವ ಜಾಗವಾದ ಕಲ್ಯಾಣ ಕಟ್ಟಾದಲ್ಲಿ ಎಲ್ಲ ಪುರುಷ ಕ್ಷೌರಿಕರೂ ಪಿಪಿಇ(ವೈಯಕ್ತಿಕ ಸುರಕ್ಷಾ ಉಡುಪು) ಧರಿಸಿಕೊಂಡೇ ಕೆಲಸ ಮಾಡುತ್ತಿದ್ದಾರೆ. ಮಹಿಳಾ ಕ್ಷೌರಿಕರು ಸೀರೆ ಉಟ್ಟು, ಫೇಸ್‌ ಶೀಲ್ಡ್‌, ಕೈಗವಸು, ಮಾಸ್ಕ್ ಧರಿಸಿಕೊಂಡಿದ್ದು, ಶುಕ್ರವಾರದೊಳಗಾಗಿ ಅವರಿಗೂ ಪಿಪಿಇ ಕಿಟ್‌ಗಳು ಲಭ್ಯವಾಗಲಿವೆ

ಮೊದಲ ದಿನ 25.7 ಲಕ್ಷ ರೂ. ಸಂಗ್ರಹ
ದೇಶವ್ಯಾಪಿ ನಿರ್ಬಂಧ ದಿಂದಾಗಿ ತಿರುಮಲ ದೇಗುಲವು ತಿಂಗಳಿಗೆ 200 ಕೋಟಿ ರೂ.ಗಳಷ್ಟು ನಷ್ಟ ಅನುಭವಿಸಿದೆ. ಈಗ ದೇಗುಲದ ಬಾಗಿಲು ತೆರೆದ ಮೊದಲ ದಿನ ಹುಂಡಿಯಲ್ಲಿ 25.7 ಲಕ್ಷ ರೂ. ಸಂಗ್ರಹವಾಗಿದೆ ಎಂದು ಟಿಟಿಡಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಕಳೆದ ವರ್ಷ ದೇವಸ್ಥಾನದ ಹುಂಡಿ ಯಲ್ಲಿ 1,100 ಕೋ.ರೂ. ಸಂಗ್ರಹವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next