Advertisement

ಸಿಬಂದಿಗೆ ಪಿಪಿಇ ಕಿಟ್‌, ವಿಮಾನ ಸ್ವಚ್ಛತೆಗೆ ಕ್ರಮ : ಹಾರಾಟ ನಡೆಸಲು ಸಕಲ ಮುನ್ನೆಚ್ಚರಿಕೆ

06:48 AM May 23, 2020 | mahesh |

ಹೊಸದಿಲ್ಲಿ: ಎರಡು ತಿಂಗಳ ಬಳಿಕ ದೇಶೀಯ ವಿಮಾನಗಳು ಹಾರಾಟ ನಡೆಸಲು ಸಜ್ಜಾಗಿದ್ದು, ಕೋವಿಡ್ ದಿಂದ ರಕ್ಷಿಸುವ ಸಲುವಾಗಿ ವೈಮಾನಿಕ ಕಂಪನಿಗಳು ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಆರಂಭಿಸಿವೆ. ಕ್ಯಾಬಿನ್‌ ಸಿಬ್ಬಂದಿಗೆ ಗೌನ್‌, ಫೇಸ್‌ಶೀಲ್ಡ್ ನಂತಹ ರಕ್ಷಣಾ ಕವಚ, ಪ್ರತಿ 24 ಗಂಟೆಗಳಿಗೊಮ್ಮೆ ವಿಮಾನ ಸ್ವಚ್ಛಗೊಳಿಸುವಿಕೆ ಸೇರಿದಂತೆ ಹಲವು ಮಾರ್ಗಸೂಚಿಗಳನ್ನು ವಿಮಾನ ಯಾನ ಕಂಪನಿಗಳೇ ರಚಿಸುತ್ತಿವೆ.

Advertisement

ಮುಂದಿನ ಕೆಲವು ವಾರಗಳ ಕಾಲ ದೇಶದ 24 ನಗರಗಳನ್ನು ಸಂಪರ್ಕಿಸುವಂತೆ ಭಾಗಶಃ ಸೇವೆ ಆರಂಭಿಸುವುದಾಗಿ ವಿಸ್ತಾರಾ ಕಂಪನಿ ತಿಳಿಸಿದೆ. ಕ್ಯಾಬಿನ್‌ ಸಿಬಂದಿಯು ಸುರಕ್ಷಾ ಗೌನುಗಳು, ಮಾಸ್ಕ್ ಗಳು, ಫೇಸ್‌ ಶೀಲ್ಡ್ ಗಳನ್ನು ಧರಿಸಲಿದ್ದು, ಕಂಪನಿಯ ಎಲ್ಲ ಸಿಬ್ಬಂದಿಯೂ ವೈಯಕ್ತಿಕ ಸುರಕ್ಷಾ ಉಡುಗೆ(ಪಿಪಿಇ)ಗಳನ್ನು ಧರಿಸುವಂತೆ ಕ್ರಮ ಕೈಗೊಂಡಿದ್ದೇವೆ ಎಂದು ವಿಸ್ತಾರಾ ಹೇಳಿದೆ. ಒಂದು ಪ್ರದೇಶಕ್ಕೆ ಹೋಗಿ ವಾಪಸಾದ ಕೂಡಲೇ ಪ್ರತಿಯೊಂದು ವಿಮಾನದಲ್ಲೂ ಸೋಂಕು ನಿವಾರಕ ಸಿಂಪಡಿಸಿ ಸ್ವಚ್ಛಗೊಳಿಸುತ್ತೇವೆ. ಅದಲ್ಲದೆ, ಎಲ್ಲ ವಿಮಾನಗಳನ್ನೂ ಪ್ರತಿ 24 ಗಂಟೆಗಳಿಗೊಮ್ಮೆ ಪೂರ್ಣವಾಗಿ ಸ್ವಚ್ಛಗೊಳಿಸಲಾಗುತ್ತದೆ ಎಂದೂ ಕಂಪನಿ ಹೇಳಿದೆ.

ಗೋ ಏರ್‌ ಹೊರತುಪಡಿಸಿ ಭಾರತದ ಇತರೆ ಎಲ್ಲ ವಿಮಾನಯಾನ ಕಂಪನಿಗಳು ಕೂಡ ಸೋಮವಾರದಿಂದ ಆರಂಭವಾಗುವ ಸೇವೆಗೆ ಟಿಕೆಟ್‌ ಬುಕಿಂಗ್‌ ಆರಂಭಿಸಿದೆ. ಏರ್‌ಏಷ್ಯಾ ಕೂಡ ಪೈಲೆಟ್‌ ಹಾಗೂ ಕ್ಯಾಬಿನ್‌ನ ಎಲ್ಲ ಸಿಬಂದಿಗೂ ಸಮರ್ಪಕವಾದ ಪಿಪಿಇಗಳನ್ನು ನೀಡಲಾಗುತ್ತದೆ ಎಂದಿದೆ. ಇದೇ ವೇಳೆ, ಇಂಡಿಗೋ ಸಿಇಒ ರೋಣೋಜಾಯ್‌ ದತ್ತಾ ಮಾತನಾಡಿ, ಮಾನ್ಯತೆ ಪಡೆದ ಸೋಂಕು ನಿವಾರಕಗಳ ಸಹಾಯದಿಂದ ಬ್ಯಾಗೇಜ್‌ ಡ್ರಾಪ್‌ ಕೌಂಟರ್‌ಗಳು, ಬೋರ್ಡಿಂಗ್‌ ಗೇಟುಗಳು, ಕೋಚ್‌ಗಳು, ಗಾಲಿಕುರ್ಚಿಗಳು, ಸಿಬ್ಬಂದಿಯ ವಾಹನಗಳು ಸೇರಿದಂತೆ ಎಲ್ಲ ಮೇಲ್ಮೈಗಳನ್ನೂ ಸ್ವಚ್ಛಗೊಳಿಸಲಾಗುತ್ತದೆ. ಪ್ರತಿ ರಾತ್ರಿ ವಿಮಾನ ವನ್ನೂ ಸ್ವಚ್ಛ ಮಾಡುತ್ತೇವೆ ಎಂದಿದ್ದಾರೆ. ಜತೆಗೆ ಪ್ರತಿಯೊಬ್ಬ ಪ್ರಯಾಣಿಕ ಕೂಡ ವೆಬ್‌ ಚೆಕ್‌ ಇನ್‌ ಪ್ರಕ್ರಿಯೆ ವೇಳೆ ಕಡ್ಡಾಯವಾಗಿ ಆನ್‌ ಲೈನ್‌ ಆರೋಗ್ಯ ದೃಢೀಕರಣ ಅರ್ಜಿಯನ್ನು ಭರ್ತಿ ಮಾಡಬೇಕು ಎಂದೂ ದತ್ತಾ ಹೇಳಿದ್ದಾರೆ.

ಕೇರಳದಲ್ಲಿ ಕ್ವಾರಂಟೈನ್‌ ಕಡ್ಡಾಯ
ದೇಶೀಯ ವಿಮಾನಯಾನ ಸೇವೆ ಆರಂಭವಾದ ಬಳಿಕ ರಾಜ್ಯಕ್ಕೆ ಬಂದಿಳಿಯುವ ಪ್ರತಿಯೊಬ್ಬ ವ್ಯಕ್ತಿ ಕೂಡ ಕಡ್ಡಾಯ ಹೋಂ ಕ್ವಾರಂಟೈನ್‌ ಗೆ ಒಳಗಾಗಲೇಬೇಕು ಎಂದು ಕೇರಳ ಸರಕಾರ ಆದೇಶಿಸಿದೆ. ಲಾಕ್‌ ಡೌನ್‌ ಮಾರ್ಗಸೂಚಿಗಳ ಅನ್ವಯ ಕೇರಳ ಪ್ರವೇಶಿಸುವ ಪ್ರತಿಯೊಬ್ಬರೂ ಕ್ವಾರಂಟೈನ್‌ಗೆ ಒಳಗಾಗಲೇಬೇಕು. ಈ ವಿಚಾರದಲ್ಲಿ ಯಾವುದೇ ರಾಜಿಯಿಲ್ಲ. ಏಕೆಂದರೆ, ಬಹುತೇಕ ಮಂದಿ ದೇಶದ ಹಾಟ್‌ ಸ್ಪಾಟ್‌ಗಳಿಂದ ಆಗಮಿಸುತ್ತಾರೆ. ಅಂಥವರಿಂದ ಸೋಂಕು ಹಬ್ಬದಂತೆ ತಡೆಯಲು ಈ ಕ್ರಮ ಅನಿವಾರ್ಯ ಎಂದು ಕೇರಳ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಹೇಳಿದ್ದಾರೆ. ಅಸ್ಸಾಂ ಸರಕಾರ ಕೂಡ ಇದೇ ಘೋಷಣೆ ಮಾಡಿದೆ.

30 ದಿನ ಮೊದಲೇ ರೈಲುಗಳ ಟಿಕೆಟ್‌
ರಾಜಧಾನಿ ಮಾರ್ಗಗಳಲ್ಲಿ ಆರಂಭವಾಗಿರುವ ವಿಶೇಷ ರೈಲುಗಳ ಟಿಕೆಟ್‌ ಗಳನ್ನು 30 ದಿನ ಮುಂಚಿತವಾಗಿ ಕಾಯ್ದಿರಿಸಲು ಅವಕಾಶ ಕಲ್ಪಿಸಿ ಶುಕ್ರವಾರ ರೈಲ್ವೇ ಇಲಾಖೆ ಆದೇಶ ಹೊರಡಿಸಿದೆ. ಅಲ್ಲದೆ, ರೈಲು ನಿಲ್ದಾಣಗಳ ರಿಸರ್ವೇಷನ್‌ ಕೌಂಟರ್‌ಗಳಲ್ಲಿಯೂ ಈ ಟಿಕೆಟ್‌ ಗಳನ್ನು ಖರೀದಿಸಬಹುದಾಗಿದೆ ಎಂದಿದೆ. ಈ ಹಿಂದೆ ಕೇವಲ ಐಆರ್‌ಸಿಟಿಸಿ ವೆಬ್‌ಸೈಟ್‌ ಮೂಲಕ ಮಾತ್ರವೇ ಟಿಕೆಟ್‌ ಕಾಯ್ದಿರಿಸಬೇಕಾಗಿತ್ತು. ಟಿಕೆಟ್‌ಗಳನ್ನು ಅಂಚೆ ಕಚೇರಿಗಳು, ಯಾತ್ರಿ ಟಿಕೆಟ್‌ ಸುವಿಧಾ ಕೇಂದ್ರಗಳು ಸೇರಿದಂತೆ ಕಂಪ್ಯೂಟರೀಕೃತ ಪಿಆರ್‌ಎಸ್‌ ಕೌಂಟರ್‌ಗಳು, ಹಾಗೂ ಐಆರ್‌ ಸಿಟಿಸಿಯ ಅಧಿಕೃತ ಏಜೆಂಟ್‌ ಗಳ ಮುಖಾಂತರ ಆನ್‌ಲೈನ್‌ನಲ್ಲಿ ಮತ್ತು ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಕಾಯ್ದಿರಿಸಬಹುದಾಗಿದೆ. ಈ ರೈಲುಗಳ ಮುಂಗಡ ಕಾಯ್ದಿರಿಸುವಿಕೆ ಅವಧಿ (ಎಆರ್‌ಪಿ)ಯನ್ನು 7 ದಿನಗಳಿಂದ 30 ದಿನಗಳವರೆಗೆ ವಿಸ್ತರಿಸಲಾಗಿದೆ ಎಂದೂ ರೈಲ್ವೇ ಇಲಾಖೆ ತಿಳಿಸಿದೆ.

Advertisement

ಬುಕಿಂಗ್‌ ಶುರು: ದೇಶಾದ್ಯಂತ ಶುಕ್ರವಾರದಿಂದ ಟಿಕೆಟ್‌ ರಿಸರ್ವೇಷನ್‌ ಕೌಂಟರ್‌ ಗಳನ್ನು ತೆರೆಯಲಾಗಿದ್ದು, ಸಾಮಾನ್ಯ ಸೇವಾ ಕೇಂದ್ರಗಳು ಹಾಗೂ ಟಿಕೆಟ್‌ ಏಜೆಂಟ್‌ ಗಳ ಮೂಲಕವೂ ಟಿಕೆಟ್‌ ಕಾಯ್ದಿರಿಸಲು ಅವಕಾಶ ನೀಡಲಾಗಿದೆ. ಜೂ.1ರಿಂದ 200 ಪ್ರಯಾಣಿಕ ರೈಲುಗಳ ಸಂಚಾರ ಆರಂಭವಾಗುವುದಾಗಿ ರೈಲ್ವೆ ಇಲಾಖೆ ಘೋಷಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next