Advertisement

ಪಿಪಿಎ ಮಾರ್ಗಸೂಚಿ: ಇಂಗ್ಲಂಡ್‌ನ‌ಲ್ಲಿ ಕಾನೂನು ಹೋರಾಟ

02:19 PM Jun 12, 2020 | mahesh |

ಲಂಡನ್‌: ಸಾಂಕ್ರಾಮಿಕ ಕೋವಿಡ್ ವೈರಸ್‌ ಸೋಂಕಿತ ರೋಗಿಗಳಿಗೆ ಚಿಕಿತ್ಸೆ ನೀಡುವ ವೈದ್ಯರು ಮತ್ತು ಆರೋಗ್ಯ ಸಿಬಂದಿಯು ಧರಿಸುವ ವೈಯಕ್ತಿಕ ಸುರಕ್ಷಾ ಸಲಕರಣೆ (ಪಿಪಿಇ) ಬಗೆಗಿನ ಕೆಲವು ಸುರಕ್ಷಾತ್ಮಕ ಗೊಂದಲಗಳ ಬಗ್ಗೆ ಭಾರತೀಯ ಮೂಲದ ವೈದ್ಯ ದಂಪತಿಯು ಇಂಗ್ಲಂಡ್‌ ಸರಕಾರದ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ.

Advertisement

ಪಿಪಿಇ ಸಂಬಂಧಿಸಿ ಇಂಗ್ಲಂಡ್‌ನ‌ ಡಿಪಾರ್ಟ್‌ ಮೆಂಟ್‌ ಆಫ್ ಹೆಲ್ತ್‌ ಆ್ಯಂಡ್‌ ಸೋಶಿಯಲ್‌ ಕೇರ್‌ ಆ್ಯಂಡ್‌ ಪಬ್ಲಿಕ್‌ ಹೆಲ್ತ್‌ ಇಲಾಖೆಗಳಿಂದ ಉತ್ತರ ಕೋರಿ ಪತ್ರ ಬರೆದಿದ್ದ ಡಾ| ನಿಶಾಂತ್‌ ಜೋಷಿ ಮತ್ತು ಗರ್ಭಿಣಿಯಾಗಿರುವ ಪತ್ನಿ ಡಾ| ಮೀನಾಲ್‌ ವಿಝ್ ಅವರು, ಇದರ ಆಧಾರದಲ್ಲಿ ಎಪ್ರಿಲ್‌ನಲ್ಲಿ ಇಂಥದ್ದೊಂದು ಕಾನೂನು ಹೋರಾಟವವನ್ನು ಆರಂಭಿಸಿದ್ದಾರೆ. “ಇನ್ನಷ್ಟು ದಿನ ನಾವು ಕಾಯಲು ಸಿದ್ಧರಿಲ್ಲ’ ಎಂದು ಹೇಳಿರುವ ಈ ದಂಪತಿಯು ಬುಧವಾರ ಈ ವಿಷಯದಲ್ಲಿ ಲಂಡನ್‌ನ ಹೈಕೋರ್ಟಿನ ಮೆಟ್ಟಿಲೇರಿದ್ದಾರೆ.

“ನಾವು ಹೀಗೆ ಮಾಡಲು ಬಯಸಿರಲಿಲ್ಲ. ನಾವು ಹೀಗೆ ಮಾಡಲು ಯೋಜಿಸಿ ರಲೂ ಇಲ್ಲ. ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ನಾವು ವೈದ್ಯರಾಗಿಯೇ ಸೇವೆ ಸಲ್ಲಿಸಲು ನಿರ್ಧರಿಸಿದ್ದೆವು ಹಾಗೂ ರೋಗಿಗಳ ಜೀವ ರಕ್ಷಿಸಲು ಮತ್ತು ಸಂಕಟದಿಂದ ಪಾರಾಗಲು ದೇಶಕ್ಕೆ ಸಹಕಾರ ನೀಡಲು ಬಯಸಿದ್ದೆವು. ಆದರೆ ನಾವು ಎತ್ತಿರುವ ವಿಷಯಗಳಿಗೆ ಸರಕಾರ ಉತ್ತರಿಸಲು ನಿರಾಕರಿಸಿದ್ದರಿಂದ ಹೀಗೆ ಮಾಡಬೇಕಾಯಿತು’ ಎಂದು ಈ ವೈದ್ಯ ದಂಪತಿ ಹೇಳಿದ್ದಾರೆ.
ಪಿಪಿಇ ಸಂಬಂಧಿಸಿ ಸರಕಾರದ ಮಾರ್ಗ ಸೂಚಿಗಳು ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಗಳಲ್ಲಿ ಹೊಂದಾಣಿಕೆಯಾಗುತ್ತಿಲ್ಲ ಎಂದು ಇವರ ಕಾನೂನು ಸಹಾಯಕ ಬೈಂಡ್‌ಮ್ಯಾನ್ಸ್‌ ಅವರು ಹೇಳಿದ್ದಾರೆ. ಇದೇ ಅಂಶದ ಆಧಾರದಲ್ಲಿ ನಾವು ಕಾನೂನು ಹೋರಾಟಕ್ಕೆ ಮುಂದಾಗಿದ್ದೇವೆ ಎಂದಿದ್ದಾರೆ.

ವಿವಿಧ ರೀತಿಯ ಪಿಪಿಇ ಮತ್ತು ಅದಕ್ಕೆ ಸಂಬಂಧಿಸಿದ ಕಾನೂನಾತ್ಮಕ ಅಂಶ ಹಾಗೂ ಪಿಪಿಇ ಕಿಟ್‌ಗಳ ಅಸುರಕ್ಷೆಯ ಬಗೆಗೆ ಆರೋಗ್ಯ ಸಿಬಂದಿ ಮತ್ತು ಸಮಾಜ ಕಲ್ಯಾಣ ಸಿಬಂದಿಗೆ ವಿವರಿಸಲು ಸರಕಾರದ ಮಾರ್ಗಸೂಚಿಗಳು ವಿಫ‌ಲವಾಗಿದೆ ಎಂದು ಕೋರ್ಟಿಗೆ ಮನವರಿಕೆ ಮಾಡುವ ಪ್ರಯತ್ನವನ್ನು ಈ ವೈದ್ಯ ದಂಪತಿ ಮಾಡುತ್ತಿದ್ದಾರೆ. “ದೇಶದ ಮುಂಚೂಣಿಯ ವೈದ್ಯ ದಂಪತಿಯಾಗಿರುವ ಇವರು ಕೊರೊನಾ ಕಾರ್ಯಾಚರಣೆಯಲ್ಲಿ ಸರಕಾರ ಎದುರಿಸು ತ್ತಿರುವ ಒತ್ತಡವನ್ನು ಇತರೆಲ್ಲರಿಗಿಂತ ಹೆಚ್ಚು ಚೆನ್ನಾಗಿ ತಿಳಿದುಕೊಂಡಿದ್ದಾರೆ. ಜತೆಗೆ ಅವರು ಆರೋಗ್ಯ ಸಿಬಂದಿಯ ಸುರಕ್ಷೆಯ ಬಗ್ಗೆಯೂ ಕಾಳಜಿ ಹೊಂದಿದ್ದಾರೆ’ ವೈದ್ಯ ದಂಪತಿಯ ಕಾನೂನು ಸಲಹೆಗಾರರು ಹೇಳಿದ್ದಾರೆ.

ದಂಪತಿಯು ಈ ಕಾನೂನು ಹೋರಾಟಕ್ಕಾಗಿ ಆನ್‌ಲೈನ್‌ ಮೂಲಕ ನಿಧಿ ಸಂಗ್ರಹಿಸಲು ಮುಂದಾಗಿದ್ದು, ಈಗಾಗಲೇ 61 ಸಾವಿರ ಪೌಂಡ್‌ನ‌ ಭರವಸೆ ಸಿಕ್ಕಿದೆ. ಎಂಟು ತಿಂಗಳ ಗರ್ಭಿಣಿಯಾಗಿರುವ ಡಾ| ವಿಝ್ ಅವರು ತನ್ನ ಸಹೋದ್ಯೋಗಿಗಳೊಂದಿಗೆ ಕಳೆದ ತಿಂಗಳು ಡೌನಿಂಗ್‌ ಸ್ಟ್ರೀಟ್‌ನ ಹೊರಗಡೆ ಪ್ರತಿಭಟನೆ ನಡೆಸಿ 237 ಸೆಕೆಂಡ್‌ಗಳ ಮೌನ ಪ್ರಾರ್ಥನೆ ಸಲ್ಲಿಸಿದ್ದರು. ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಾ ಸಾವಿಗೀಡಾಗಿರುವ ಸುಮಾರು 237 ಆರೋಗ್ಯ ಸಿಬಂದಿಗಾಗಿ ತಲಾ ಒಂದು ಸೆಕೆಂಡ್‌ನ‌ಂತೆ ಈ ಮೌನ ಪ್ರಾರ್ಥನೆ ಸಲ್ಲಿಸಲಾಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಲು ಆರೋಗ್ಯ ಇಲಾಖೆ ನಿರಾಕರಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next