Advertisement
ಹೊಸ ಜಾಗ. ಅಲ್ಲಿನ ವಾತಾವರಣ ಒಗ್ಗುವುದೋ ಇಲ್ಲವೋ ಎಂಬ ಕಾರಣದಿಂದಲೇ ಹೆಂಡತಿಯನ್ನು ತವರಿನಲ್ಲೋ ಅಥವಾ ತಂದೆಯ ಮನೆಯಲ್ಲೋ ಬಿಟ್ಟು ಹೋಗುವ ನಿರ್ಧಾರವಾಗುತ್ತದೆ. ಆಗ ಕೂಡಾ ಜೊತೆಗಿದ್ದವರು ಹೇಳುವ ಮಾತು: “ಅವನು ಬಿಡ್ರೀ, ಯಾವ ಊರಿಗೆ ಬೇಕಾದ್ರೂ ಬೇಗ ಹೊಂದಿಕೊಳ್ತಾನೆ. ಎಂಥದೇ ಸನ್ನಿವೇಶವನ್ನಾದ್ರೂ ಆರಾಮಾಗಿ ಎದುರಿಸ್ತಾನೆ. ಪಾಪ, ಈ ಹುಡುಗಿ ಕಥೆ ಏನ್ಮಾಡುವಾ ಹೇಳಿ…’
Related Articles
Advertisement
ಆದರೆ ಹೆಣ್ಣು ಹಾಗಲ್ಲ! ಇಂಥ ಸಂಕಟಗಳು ಜೊತೆಯಾದಾಗ ಆಕೆ ಭೋರಿಟ್ಟು ಅಳುತ್ತಾಳೆ. ಸಾವಿನಂಥ, ತತ್ತರಿಸಿ ಹೋಗುವಂಥ ಸಂದರ್ಭಗಳು ಜೊತೆಯಾದಾಗಲೆಲ್ಲ ಆಕೆ ಅಳುತ್ತಲೇ ಇರುತ್ತಾಳೆಂಬುದೂ ನಿಜ. ಆದರೆ, ಇಂಥ ಆಘಾತಗಳಿಂದ ಅಷ್ಟೇ ಬೇಗ ಚೇತರಿಸಿಕೊಳ್ಳುತ್ತಾಳೆ. 40 ಅಥವಾ 50ರ ಪ್ರಾಯದಲ್ಲೇ ಪತಿಯನ್ನು ಕಳೆದುಕೊಂಡರೂ, ಇಡೀ ಕುಟುಂಬವನ್ನು ಸಲಹುತ್ತ, ಎಲ್ಲರಿಗೂ ಧೈರ್ಯ ಹೇಳುತ್ತ, ಎಲ್ಲವನ್ನೂ ಸಂಭಾಳಿಸುತ್ತ ಬದುಕುತ್ತಿರುವ ಹೆಂಗಸರು ಪ್ರತಿ ಕುಟುಂಬದಲ್ಲೂ, ಊರಿನಲ್ಲೂ ಇದ್ದಾರಲ್ಲ…ಅದರರ್ಥ ಇಷ್ಟೆ: ಕಠಿಣ ಸಂದರ್ಭಗಳನ್ನು ಎದುರಿಸಬೇಕಾದಾಗ ಹೆಣ್ಣು ಪರ್ವತದಂತೆ ಗಟ್ಟಿಯಾಗಿ ನಿಂತು ಅದನ್ನು ಎದುರಿಸುತ್ತಾಳೆ.
ಎಲ್ಲಿಂದ ಬಂತು ಪವರ್?: ಅದುವರೆಗೂ-ಅಳುಮುಂಜಿ, ಪಾಪದ ಹೆಂಗಸು, ಅಮಾಯಕಿ…ಎಂದೆಲ್ಲಾ ಕರೆಸಿಕೊಂಡಿದ್ದ ಹೆಂಗಸು, ಗೃಹಿಣಿ ಅನ್ನಿಸಿಕೊಂಡ ನಂತರ, ಹೀಗೆ “ಪವರ್‌ಫುಲ್’ ಆಗಿ ಬದಲಾಗಲು ಹೇಗೆ ಸಾಧ್ಯವಾಯಿತು? ಸಂಕಟ ಮತ್ತು ಸವಾಲು-ಎರಡನ್ನೂ ಎದುರಿಸುವ “ಶಕ್ತಿ’ ಆಕೆಗೆ ಅದೆಲ್ಲಿಂದ ಪ್ರಾಪ್ತವಾಯ್ತು? ಕೇಳಿ: ಹೆಣ್ಣೊಬ್ಬಳು ಮೆಚೂರ್ಡ್ ಅನ್ನಿಸಿಕೊಳ್ಳುತ್ತಾಳಲ್ಲ; ಆ ಕ್ಷಣದಿಂದಲೇ ಅವಳ ದೇಹ ಮತ್ತು ಮನಸ್ಸು- ಸವಾಲುಗಳನ್ನು, ಸಂಘರ್ಷವನ್ನು ಎದುರಿಸಲು ಸಜ್ಜಾಗಿಬಿಡುತ್ತದೆ.
ಹೊಟ್ಟೆನೋವು, ರಕ್ತಸ್ರಾವ, ಚುಚ್ಚುಮಾತುಗಳನ್ನು ಎದುರಿಸುತ್ತಲೇ, ಒಂದು ನೋವಿನಿಂದ ಕಳಚಿಕೊಳ್ಳುವ ಹೊಸದೊಂದು ಸಡಗರಕ್ಕೆ ತೆರೆದುಕೊಳ್ಳುವ ಅವಕಾಶ ಹೆಣ್ಣಿಗೆ ಮೇಲಿಂದ ಮೇಲೆ ಒದಗಿಬರುತ್ತದೆ. “ಯುವತಿ’ ಅನ್ನಿಸಿಕೊಂಡಿದ್ದಷ್ಟು ದಿನ ಹೆತ್ತವರು ಮತ್ತು ಕುಟುಂಬದವರನ್ನು ಅವಲಂಬಿಸಿದ ಹೆಣ್ಣು, ಗೃಹಿಣಿ ಅನ್ನಿಸಿಕೊಂಡಾಕ್ಷಣ, ತಾನೇ ಒಂದು ಕೇಂದ್ರವಾಗುತ್ತಾಳೆ. ಹೆರಿಗೆಯ ಸಂದರ್ಭದಲ್ಲಂತೂ ಹೆಣ್ಣು- ಸಾವಿಗೆ ಮುಖಾಮುಖೀ ನಿಂತು ಹೋರಾಡುತ್ತಾಳೆ. ಹೆಚ್ಚಿನ ಸಂದರ್ಭದಲ್ಲಿ ಅವಳೇ ಗೆಲ್ಲುತ್ತಾಳೆ.
ಆನಂತರದಲ್ಲಿ, ಕುಟುಂಬ ನಿರ್ವಹಣೆಯ ಜವಾಬ್ದಾರಿ ಕೈಗೆ ಬಂದಾಗ- ಹಾಲು, ತರಕಾರಿ, ಹಣ್ಣು, ಅಕ್ಕಿ, ಸಾಸಿವೆ ಡಬ್ಬಿಯ ಹಣ… ಇವೆಲ್ಲವನ್ನೂ ಹೊಂದಿಸುವ ಆ ನೆಪದಲ್ಲಿ ಅಕೌಂಟೆಂಟ್ ಆಗಿಬಿಡುವ ಸಾಮರ್ಥ್ಯ ಆಕೆಗೆ ದಕ್ಕುತ್ತದೆ. ಗಂಡ ಮತ್ತು ಮಕ್ಕಳನ್ನು ಸಂಭಾಳಿಸುವ ಸಂದರ್ಭದಲ್ಲಿ ಇಡೀ ಕುಟುಂಬದ ಆಧಾರಸ್ತಂಭದಂತೆ ವ್ಯವಹರಿಸುವ ಕಲೆ ಅವಳಿಗೆ ಜೊತೆಯಾಗುತ್ತದೆ. ಮಕ್ಕಳ, ಬಂಧುಗಳ ಕ್ಷೇಮ ಸಮಾಚಾರ ವಿಚಾರಿಸುವುದು, ಅವರನ್ನು ಸಲಹುವುದು, ಅನಿರೀಕ್ಷಿತ ಕಷ್ಟಗಳಿಗೆ ಎದೆಯೊಡ್ಡಿ ನಿಲ್ಲುವುದು ಸೇರಿದಮತೆ ಹತ್ತಾರು ಬಗೆಯ ಬದುಕಿನ ಮ್ಯಾನೇಜ್‌ಮೆಂಟ್ ಪಾಠಗಳು ಗುರುವಿಲ್ಲದೆಯೇ ಅವಳನ್ನು ತಲುಪುತ್ತವೆ.
ತಾಳುವ ಶಕ್ತಿ ಅವಳಿಗೇ ಜಾಸ್ತಿ: ಹೆಣ್ಣನ್ನು ಭೂಮಿಗೂ, ಗಂಡನ್ನು ಆಕಾಶಕ್ಕೂ ಹೋಲಿಸುವುದುಂಟು. ಒಂದರ್ಥದಲ್ಲಿ ಇದು ಸರಿಯಾದ ಹೋಲಿಕೆ ಅನ್ನಬಹುದು. ಗುದ್ದಲಿ, ಹಾರೆ, ಸಂದೂಕದ ಪೆಟ್ಟುಗಳು, ಪ್ರವಾಹದಂಥ ಅವಘಡಗಳು ಸಾವಿರ ಬರಲಿ; ಅವನ್ನೆಲ್ಲ ಭೂಮಿ ಸಹಿಸಿಕೊಳ್ಳುತ್ತದೆ. ಸಾವಿರ ಪೆಟ್ಟು ತಿಂದಮೇಲೂ ತನ್ನ ಒಡಲಿಂದ ಮುದ್ದಾದ ಹೂವನ್ನು, ರುಚಿಯಾದ ಹಣ್ಣನ್ನು, ಶಕ್ತಿಯುತ ಧಾನ್ಯವನ್ನು ಧಾರೆ ಎರೆಯುತ್ತದೆ.
(ಆದರೆ ಗಂಡು ಹಾಗಲ್ಲ. ಕೋಪ, ಅಸಹನೆ, ಆಕ್ರೋಶ ಎಲ್ಲವನ್ನೂ ಥೇಟ್ ಮಳೆಯಂತೆಯೇ ಒಂದೇ ಬಾರಿಗೆ ಸುರಿಸಿಬಿಡುತ್ತಾನೆ) ಹೆಣ್ಣು ಹಾಗೆಯೇ. ತಾಳ್ಮೆ ಎಂಬುದು ಅವಳಿಗೆ ಜಾಸ್ತಿ. ತಾಳ್ಮೆಯೇ ಅವಳ ಆಸ್ತಿ. ಆಕೆಗೆ ನೋವು ತಿನ್ನುವಂಥ ದೇಹವನ್ನು ಕೊಟ್ಟ ಪ್ರಕೃತಿಯೇ, ಆ ನೋವನ್ನೆಲ್ಲ ಎದುರಿಸಿ ನಿಲ್ಲುವಂಥ ಆತ್ಮಸ್ಥೈರ್ಯವನ್ನು ಕಾಣಿಕೆಯ ರೂಪದಲ್ಲಿ ನೀಡಿದೆ. ಹೆಣ್ಣೆಂದರೆ ಮಾಯೆಯಲ್ಲ, ಅದು ಸಾವಿರ ಸವಾಲುಗಳನ್ನು ಮೆಟ್ಟಿ ನಿಲ್ಲುವ ಶಕ್ತಿ ಎನ್ನಲು ಇಷ್ಟು ಸಾಕಲ್ಲವೇ?
* ಗೀತಾಂಜಲಿ