Advertisement
ಮೂಡುಬಿದಿರೆ ಆಳ್ವಾಸ್ ಕಾಲೇಜಿನಲ್ಲಿ ದ್ವಿತೀಯ ಬಿಕಾಂ ವಿದ್ಯಾರ್ಥಿನಿಯಾಗಿರುವ ನಾಗಶ್ರೀ ಉಪ್ಪಿನಕುದ್ರು ಅವರು ಪವರ್ ಲಿಫ್ಟಿಂಗ್ ಹಾಗೂ ವೇಟ್‌ಲಿಫ್ಟಿಂಗ್ ಎರಡರಲ್ಲೂ ಮಿಂಚುತ್ತಿರುವ ಗ್ರಾಮೀಣ ಪ್ರತಿಭೆ.
ಚಿಕ್ಕಂದಿನಲ್ಲೇ ತಂದೆಯನ್ನು ಕಳೆದುಕೊಂಡ ನಾಗಶ್ರೀ ಅವರದು ಬಡ ಕುಟುಂಬ. ಅಂಗನವಾಡಿ ಶಿಕ್ಷಕಿಯಾಗಿರುವ ತಾಯಿ ಪ್ರೇಮಲತಾ ಅವರೇ ಆಧಾರ. ನಾಗಶ್ರೀಗೆ ಇಬ್ಬರು ಅಕ್ಕಂದಿರು ಹಾಗೂ ಓರ್ವ ತಮ್ಮನಿದ್ದಾನೆ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಕೋಟೇಶ್ವರದ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಮುಗಿಸಿದ ಬಳಿಕ ಪಿಯುಸಿಯಿಂದ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. 3 ರಾಷ್ಟ್ರೀಯ ದಾಖಲೆ
ಕೇರಳದಲ್ಲಿ ನಡೆದ ರಾಷ್ಟ್ರೀಯ ಪವರ್ ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ “ಭಾರತದ ಬಲಿಷ್ಠ ಮಹಿಳೆ’ ಹಿರಿಮೆಯೊಂದಿಗೆ ನಾಗಶ್ರೀ 3 ಹೊಸ ದಾಖಲೆ ನಿರ್ಮಿಸಿದ್ದಾರೆ. 63 ಕೆ.ಜಿ. ವಿಭಾಗದಲ್ಲಿ ಒಟ್ಟು ಸ್ಕ್ವಾಟ್‌ನಲ್ಲಿ 140 ಕೆ.ಜಿ., ಬೆಂಚ್‌ನಲ್ಲಿ 65 ಕೆ.ಜಿ. ಹಾಗೂ ಡೆಡ್‌ಲಿಫ್ಟ್ ನಲ್ಲಿ 150 ಕೆ.ಜಿ. ಭಾರ ಎತ್ತಿ ಹೊಸ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದಾರೆ. ಇದಲ್ಲದೆ ರಾಜ್ಯ ಮಟ್ಟದ ಪವರ್ ಲಿಫ್ಟಿಂಗ್ ಹಾಗೂ ವೇಟ್ ಲಿಫ್ಟಿಂಗ್ ಎರಡರಲ್ಲೂ ತಲಾ 3 ಚಿನ್ನದ ಪದಕ ಗೆದ್ದಿದ್ದಾರೆ. ಕುಂದಾಪುರದ ಸತೀಶ್ ಖಾರ್ವಿ ಮತ್ತು ಆಳ್ವಾಸ್‌ನ ಪ್ರಮೋದ್ ಕುಮಾರ್ ಶೆಟ್ಟಿ ಇವರ ತರಬೇತುದಾರರಾಗಿದ್ದಾರೆ.
Related Articles
ಕೆನಡಾದಲ್ಲಿ ನಡೆದ ಕಾಮನ್‌ವೆಲ್ತ್ ಪವರ್ ಲಿಫ್ಟಿಂಗ್ ಚಾಂಪಿಯನ್‌ಶಿಪ್‌ಗೆ ಆಯ್ಕೆಯಾ ಗಿದ್ದರೂ ವೀಸಾ ಸಮಸ್ಯೆಯಿಂದ ಅವಕಾಶ ವಂಚಿತರಾದ ನಾಗಶ್ರೀ ನವೆಂಬರ್‌ನಲ್ಲಿ ಕಜಕಿಸ್ಥಾ ನದಲ್ಲಿ ನಡೆಯಲಿರುವ ಏಶ್ಯನ್ ಪವರ್ ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.
Advertisement
“ಬಲಿಷ್ಠ ಮಹಿಳೆ’ ಆಯ್ಕೆ ಹೇಗೆ?ರಾಷ್ಟ್ರೀಯ ಪವರ್ ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನ ಸೀನಿಯರ್, ಸಬ್ ಜೂನಿಯರ್, ಜೂನಿಯರ್, ಮಾಸ್ಟರ್ 4 ವಿಭಾಗಗಳಲ್ಲಿ ಬಲಿಷ್ಠ ಮಹಿಳೆ ಪ್ರಶಸ್ತಿ ಕೊಡಲಾಗುತ್ತಿದೆ. ಕಡಿಮೆ ತೂಕ ಹೊಂದಿರುವ ಕ್ರೀಡಾಳು ಹೆಚ್ಚು ಭಾರ ಎತ್ತಿದರೆ ಅವರಿಗೆ “ಬಲಿಷ್ಠ ಮಹಿಳೆ’ ಗೌರವ ಸಿಗುತ್ತದೆ. ನಾಗಶ್ರೀ ಸಬ್ ಜೂನಿಯರ್‌ನಲ್ಲಿ 355 ಕೆ.ಜಿ. ಭಾರ ಎತ್ತಿ ಈ ಗರಿಮೆಗೆ ಪಾತ್ರರಾಗಿದ್ದಾರೆ. ಈ ವಿಭಾಗದಲ್ಲಿ ಅವರಿಗೆ ದೇಶಾದ್ಯಂತ 80 ಮಂದಿ ಹಾಗೂ ರಾಜ್ಯದಿಂದ ನಾಲ್ವರು ಲಿಫ್ಟರ್ ಪೈಪೋಟಿ ನೀಡಿದ್ದರು. ಚಿಕ್ಕಂದಿನಿಂದಲೇ ಕ್ರೀಡೆಯಲ್ಲಿ ಮಿಂಚುವ ಬಯಕೆ ಇತ್ತು. ಅದು ಈಗ ಸಾಕಾರಗೊಂಡಿದೆ. ಅಂತಾರಾಷ್ಟ್ರೀಯ ಪವರ್ ಲಿಫ್ಟಿಂಗ್ ಹಾಗೂ ವೇಟ್‌ಲಿಫ್ಟಿಂಗ್ ಎರಡರಲ್ಲೂ ಪದಕ ಗೆದ್ದು, ಭಾರತದ ಕೀರ್ತಿ ಪತಾಕೆಯನ್ನು ಹಾರಿಸಬೇಕು ಎನ್ನುವ ಮಹದಾಸೆ ನನ್ನದು.
-ನಾಗಶ್ರೀ ಉಪ್ಪಿನಕುದ್ರು, ರಾಷ್ಟ್ರೀಯ ಪವರ್ ಲಿಫ್ಟರ್. – ಪ್ರಶಾಂತ್ ಪಾದೆ