ಕೊಲಂಬೋ : ಜಡಿ ಮಳೆಯೊಂದಿಗೆ ಗಂಟೆಗೆ 60 ರಿಂದ 70 ಕಿ.ಮೀ. ವೇಗದಲ್ಲಿ ಬೀಸುತ್ತಿರುವ ಅತ್ಯಂತ ಮಾರಕ ಹಾಗೂ ಶಕ್ತಿಶಾಲಿ ಬಿರುಗಾಳಿಯ ತಾಂಡವ ನೃತ್ಯಕ್ಕೆ ಶ್ರೀಲಂಕಾದಲ್ಲಿ ಕನಿಷ್ಠ ನಾಲ್ವರು ಬಲಿಯಾಗಿದ್ದಾರೆ. ವಾಯು ಯಾನ ತೀವ್ರವಾಗಿ ಬಾಧಿತವಾಗಿದೆ. ಆವಶ್ಯಕ ಸೇವೆಗಳು ಇಲ್ಲವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚೆನ್ನೈ ಮತ್ತು ಬೆಂಗಳೂರಿನಿಂದ ಕೊಲಂಬೋಗೆ ಹೋಗುತ್ತಿದ್ದ ಶ್ರೀಲಂಕನ್ ಏರ್ ಲೈನ್ಸ್ ವಿಮಾನಗಳನ್ನು ದಕ್ಷಿಣ ತುದಿಯಲ್ಲಿರುವ ದಕ್ಷಿಣ ಹಂಬನತೋಟದಲ್ಲಿನ ಮತ್ತಾಲಾ ವಿಮಾನ ನಿಲ್ದಾಣಕ್ಕೆ ಕಳುಹಿಸಲಾಗಿದೆ.
ಲಂಕೆಯ ಮಧ್ಯ, ಪಶ್ಚಿಮ ಹಾಗೂ ದಕ್ಷಿಣ ಪ್ರಾಂತ್ಯಗಳಲ್ಲಿ ಶಾಲೆ ಕಾಲೇಜುಗಳನ್ನು ಮುಚ್ಚಲಾಗಿದೆ. ಮಧ್ಯಲಂಕೆಯಲ್ಲಿನ ಬೆಟ್ಟ ಪ್ರದೇಶದಲ್ಲಿರುವ ಅನೇಕ ಮನೆಗಳು ತೀವ್ರವಾಗಿ ಹಾನಿಗೀಡಾಗಿವೆ.
ಈ ವರೆಗೆ ವರದಿಯಾಗಿರುವ ನಾಲ್ಕೂ ಸಾವುಗಳು ಮರ ಉರುಳಿ ಬಿದ್ದ ಕಾರಣ ಸಂಭವಿಸಿವೆ ಎಂದು ವರದಿಯಾಗಿದೆ. ಉರುಳಿದ ಮರಗಳ ಎಡೆಗೆ ಸಿಲುಕಿ ಗಾಯಗೊಂಡ ಸುಮಾರು 15 ಮಂದಿಯನ್ನು ಕೊಲಂಬೋ ನ್ಯಾಶನಲ್ ಹಾಸ್ಪಿಟಲ್ ಗೆ ಸೇರಿಸಲಾಗಿದೆ.
ಪ್ರತಿಕೂಲ ಹವಾಮಾನದಿಂದ ಮತ್ತು ನೈಸರ್ಗಿಕ ಪ್ರಕೋಪದಿಂದ ಮನೆ ಮಠ ಕಳೆದುಕೊಂಡಿರುವವರಿಗೆ ತತ್‌ಕ್ಷಣಕ್ಕೆ ತುರ್ತು ಪರಿಹಾರವಾಗಿ ತಲಾ 10,000 ರೂ. ನೀಡುವಂತೆ ಪ್ರಧಾನಿ ರಣಿಲ್ ವಿಕ್ರಮಸಿಂಘ ಆದೇಶಿಸಿದ್ದಾರೆ.