Advertisement

ಪ್ರಬಲ ಬಂಟ, ಈಡಿಗ ಸಮುದಾಯದ ಮೇಲೆ ಬಿಜೆಪಿ ಕಣ್ಣು

10:25 AM Mar 10, 2017 | Harsha Rao |

ಬೆಂಗಳೂರು: ಕಳೆದ ವಿಧಾನಸಭೆ ಚುನಾವಣೆ ವೇಳೆ ಕೈಕೊಟ್ಟಿದ್ದ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ತನ್ನ ಶಕ್ತಿ ಹೆಚ್ಚಿಸಿಕೊಳ್ಳುವತ್ತ ಹೆಜ್ಜೆ ಇಟ್ಟಿರುವ ಬಿಜೆಪಿ ಆ ಭಾಗದ ಪ್ರಬಲ ಬಂಟ ಸಮುದಾಯ ಮತ್ತು ಹಿಂದುಳಿದ ವರ್ಗಗಳ
(ಪ್ರಮುಖವಾಗಿ ಈಡಿಗ) ಮತಗಳ ಮೇಲೆ ಕಣ್ಣು ಹಾಯಿಸಿದೆ.

Advertisement

ಶಿವಮೊಗ್ಗ, ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಲ್ಲೆಗಳನ್ನೊಳಗೊಂಡ ಈ ಭಾಗದಲ್ಲಿ ಈಗಾಗಲೇ ಬಂಟ ಸಮುದಾಯದ ಜಯಪ್ರಕಾಶ್‌ ಹೆಗ್ಡೆ, ಮೂಡಬಿದರೆಯ ಮೇಘನಾಥ ಶೆಟ್ಟಿ, ಕುಮಟಾದ ದಿನಕರ ಶೆಟ್ಟಿ, ಈಡಿಗ ಸಮುದಾಯದ ಸೊರಬದ ಕುಮಾರ್‌ ಬಂಗಾರಪ್ಪ, ಜಿ.ಡಿ.ನಾರಾಯಣಪ್ಪ, ಭಟ್ಕಳದ ಜೆ.ಡಿ.ನಾಯ್ಕರನ್ನು ಬಿಜೆಪಿಗೆ ಸೇರಿಸಿ ಕೊಳ್ಳಲಾಗಿದೆ. ಆ ಮೂಲಕ ಕಳೆದ ಬಾರಿ ಪಕ್ಷಕ್ಕೆ ಹಿನ್ನಡೆಯಾಗಿದ್ದ ಕಡೆಗಳಲ್ಲಿ ತನ್ನ ಪ್ರಾಬಲ್ಯವನ್ನು ಪುನಃ ಸ್ಥಾಪಿಸಲು ಹೆಜ್ಜೆ ಇಟ್ಟಿದೆ.

ಈಗಾಗಲೇ ನಂಜನಗೂಡು ಕ್ಷೇತ್ರದಲ್ಲಿ ಮಾಜಿ ಸಚಿವ ವಿ.ಶ್ರೀನಿವಾಸ ಪ್ರಸಾದ್‌ರನ್ನು ಬಿಜೆಪಿಗೆ ಸೇರಿಸಿಕೊಳ್ಳುವ ಮೂಲಕ ದಲಿತ ಸಮುದಾಯದ ಒಂದಷ್ಟು ಮತಗಳನ್ನು ಸೆಳೆಯುವತ್ತ ಹೆಜ್ಜೆ ಇಟ್ಟಿದ್ದ ಬಿಜೆಪಿ ಇದೀಗ ಕಾಂಗ್ರೆಸ್‌ನ
ಮತ್ತೂಂದು ಮತಬ್ಯಾಂಕ್‌ ಆಗಿದ್ದ ಹಿಂದುಳಿದ ವರ್ಗ (ಈಡಿಗ) ಮತ್ತು ಬಂಟ ಸಮುದಾಯವನ್ನು ಸೆಳೆಯಲು
ಯತ್ನಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ.

ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಈ ಸಮುದಾಯದವರು ರಾಜಕೀಯದಲ್ಲಿ ನಿರ್ಣಾಯಕ ಪಾತ್ರ ಹೊಂದಿದ್ದಾರೆ. ಯಾರಿಗೆ ಈ ಸಮುದಾಯದ ಬೆಂಬಲ ಹೆಚ್ಚಾಗಿದೆಯೋ ಆ ಪಕ್ಷ ಚುನಾವಣೆಯಲ್ಲಿ ಗೆಲ್ಲುವುದು ಖಚಿತ ಎಂಬ ಭಾವನೆ ಇದೆ.

2008ರ ಚುನಾವಣೆಯಲ್ಲಿ ನಾಲ್ಕೂ ಜಿಲ್ಲೆಗಳಲ್ಲಿ ಬಿಜೆಪಿ 15 ಸ್ಥಾನ ಗಳಿಸಿತ್ತು. ಕಾಂಗ್ರೆಸ್‌ 9 ಸ್ಥಾನಗಳಲ್ಲಿ ಗೆದ್ದಿದ್ದರೆ, ಜೆಡಿಎಸ್‌ 2 ಸ್ಥಾನ ಪಡೆದಿತ್ತು. ಆದರೆ, 2013ರ ಚುನಾವಣೆಯಲ್ಲಿ ಬಿಜೆಪಿ ಹೋಳಾಗಿ ಕೆಜೆಪಿ ಹುಟ್ಟಿಕೊಂಡಿದ್ದರಿಂದ
ಬಿಜೆಪಿ ಸಾಕಷ್ಟು ನಷ್ಟ ಅನುಭವಿಸಿತ್ತು. 2008ರಲ್ಲಿ 15 ಸೀಟುಗಳನ್ನು ಗೆದ್ದಿದ್ದ ಬಿಜೆಪಿ ಕೇವಲ 4 ಸ್ಥಾನಕ್ಕೆ
ತೃಪ್ತಿಪಟ್ಟುಕೊಂಡಿತ್ತು. ಕಾಂಗ್ರೆಸ್‌ ತನ್ನ ಸ್ಥಾನಗಳನ್ನು 9 ರಿಂದ 16ಕ್ಕೆ ಹೆಚ್ಚಿಸಿಕೊಂಡಿದ್ದರೆ, ಉತ್ತರ ಕನ್ನಡದಲ್ಲಿ 2 ಸೀಟುಗಳನ್ನು ಕಳೆದುಕೊಂಡಿದ್ದ ಜೆಡಿಎಸ್‌ ಶಿವಮೊಗ್ಗ ಜಿಲ್ಲೆಯಲ್ಲಿ 3 ಸ್ಥಾನ ಗಳಿಸುವಲ್ಲಿ ಯಶಸ್ವಿಯಾಗಿತ್ತು.

Advertisement

2008ರಲ್ಲಿ ಉಡುಪಿ ಜಿಲ್ಲೆ ಕುಂದಾಪುರದಲ್ಲಿ ಬಿಜೆಪಿಯಿಂದ ಗೆದ್ದಿದ್ದ ಹಾಲಾಡಿ ಶ್ರೀನಿವಾಸ ಶೆಟ್ಟಿ 2013ರಲ್ಲಿ ಪಕ್ಷೇತರರಾಗಿ ಜಯಗಳಿಸಿದ್ದರು. ನಂತರದಲ್ಲಿ ಬಿಜೆಪಿ ಸೇರಿ ಸಹ ಸದಸ್ಯರಾಗಿ ಗುರುತಿಸಿಕೊಂಡಿದ್ದಾರೆ. ಈ ಮೂಲಕ ಬಿಜೆಪಿ ಬಲ ಐದಕ್ಕೆ ಏರಿಕೆಯಾಗಿತ್ತು.

ಈಡಿಗ ಸಮುದಾಯ
2013ರಲ್ಲಿ ಶಿವಮೊಗ್ಗ ಕ್ಷೇತ್ರದಲ್ಲಿ ಸೊರಬ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಕುಮಾರ ಬಂಗಾರಪ್ಪ ಕೂಡ ಬಿಜೆಪಿ ಜತೆಗೂಡಿದ್ದಾರೆ. ವಿಶೇಷವೆಂದರೆ ದಿನಕರಶೆಟ್ಟಿ ಬಂಟ ಸಮುದಾಯಕ್ಕೆ ಸೇರಿದವರಾಗಿದ್ದರೆ, ಸೊರಬದ ಕುಮಾರ ಬಂಗಾರಪ್ಪ ಮತ್ತು ಹೊಸನಗರ ಕ್ಷೇತ್ರದಿಂದ (ಪ್ರಸ್ತುತ ಆ ಕ್ಷೇತ್ರ ಇಲ್ಲ) ಕಾಂಗ್ರೆಸ್‌ ಶಾಸಕರಾಗಿದ್ದ ಜಿ.ಡಿ.ನಾರಾಯಣಪ್ಪ ಈಡಿಗ ಸಮುದಾಯದವರು. ಜತೆಗೆ, 2013ರ ಚುನಾವಣೆಯಲ್ಲಿ ಭಟ್ಕಳ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋತಿದ್ದ ಜೆ.ಡಿ.ನಾಯ್ಕ ಇದೇ ಸಮುದಾಯಕ್ಕೆ ಸೇರಿದವರಾಗಿದ್ದರಿಂದ ಈ ಸಮುದಾಯವನ್ನು ಬಿಜೆಪಿಯತ್ತ ಸೆಳೆಯುವ ನಿರೀಕ್ಷೆ. 

ಬಂಟ ಸಮುದಾಯ
2008ರಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಜೆಡಿಎಸ್‌ನಿಂದ ಆಯ್ಕೆಯಾಗಿದ್ದ ಕುಮಟಾದ ದಿನಕರ ಶೆಟ್ಟಿ ಈಗ ಬಿಜೆಪಿ ಸೇರಿದ್ದಾರೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಿಂದ ಬಿಜೆಪಿ ಸೇರಿರುವ ಜಯಪ್ರಕಾಶ್‌ ಹೆಗ್ಡೆ ಮತ್ತು ಮೂಡಬಿದರೆ-ಮೂಲ್ಕಿ ವಿಧಾನಸಭಾ ಕ್ಷೇತ್ರದ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾಗಿದ್ದ ಮೇಘನಾಥ ಶೆಟ್ಟಿ ಬಂಟ ಸಮುದಾಯಕ್ಕೆ ಸೇರಿದವರು. ಇವರೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟರ ಸಂಘಟನೆಯ ಹಲವು ಪದಾಧಿಕಾರಿ ಗಳೂ ಬಿಜೆಪಿ ಸೇರಿರುವುದರಿಂದ ಆ ಭಾಗದಲ್ಲಿ ಸಮುದಾಯದ ಮತಗಳು ಪಕ್ಷದತ್ತ ವಾಲಲಿದೆ ಎಂಬುದು ಬಿಜೆಪಿಯ ಲೆಕ್ಕಾಚಾರ.

Advertisement

Udayavani is now on Telegram. Click here to join our channel and stay updated with the latest news.

Next