Advertisement

ಎಲೆಗಳಂತೆ ಬಿದ್ದ ಕಟ್ಟಡಗಳು; ಕಂಪನದ ಪ್ರಕೋಪಕ್ಕೆ ತಲ್ಲಣ, ಹಾಹಾಕಾರ

10:49 PM Feb 06, 2023 | Team Udayavani |

ಇಸ್ತಾನ್‌ಬುಲ್‌/ಅಜ್ಮರಿನ್‌: ಟರ್ಕಿ ಮತ್ತು ಸಿರಿಯಾಕ್ಕೆ ಬರಸಿಡಿಲಿನಂತೆ ಅಪ್ಪಳಿಸಿದ ಪ್ರಬಲ ಭೂಕಂಪ ಜಗತ್ತಿನಾದ್ಯಂತ ತಲ್ಲಣ ಸೃಷ್ಟಿಸಿದೆ. ರಾತ್ರಿ ಬೆಳಗಾಗುವುದಕ್ಕಿಂತ ಮುಂಚಿತವಾಗಿ ಭೂಮಿ ಕಂಪಿಸಿದ ಪ್ರಕೋಪಕ್ಕೆ ಅಸುವನ್ನೇ ಕಳೆದುಕೊಂಡಿದ್ದಾರೆ.

Advertisement

ಈ ಪೈಕಿ ಹೆಚ್ಚಿನವರು ಸವಿ ನಿದ್ದೆಯಲ್ಲಿದ್ದವರೇ ಆಗಿದ್ದಾರೆ. ಟರ್ಕಿಯ ಹತ್ತು ನಗರಗಳು ಭೂಕಂಪನದಿಂದಾಗಿ ಬಾಧಿತವಾಗಿವೆ ಎಂದು ಸರ್ಕಾರ ಪ್ರಕಟಿಸಿದೆ.

ಜಗತ್ತಿನಾದ್ಯಂತ ಘಟನೆಯ ಫೋಟೋಗಳು ಮತ್ತು ವಿಡಿಯೋಗಳು ವೈರಲ್‌ ಆಗಿವೆ. ಜಾಲತಾಣದಲ್ಲಿ ವೈರಲ್‌ ಆಗಿರುವ ಒಂದು ವಿಡಿಯೋದಲ್ಲಿ ಆರು ಅಂತಸ್ತಿನ ಕಟ್ಟಡವೊಂದು ಭೂಕಂಪನದ ಪ್ರಭಾವದಿಂದಾಗಿ ಅಲುಗಾಡುತ್ತಿರುವುದು ಕಂಡುಬಂದಿದೆ. ನೋಡ ನೋಡುತ್ತಿದ್ದಂತೆಯೇ ಅದು ಒಣಗಿದ ಎಲೆಗಳು ಮರದಿಂದ ಬೀಳುವಂತೆ ಬಿದ್ದಿದೆ. ಅದರ ಸುತ್ತಮುತ್ತಲು ಇದ್ದವರು ಸುರಕ್ಷತೆಗಾಗಿ ದೂರಕ್ಕೆ ಓಡಿದ್ದಾರೆ. ಇಂಥ ಹಲವು ವಿಡಿಯೋ, ಫೋಟೋಗಳು ವೈರಲ್‌ ಆಗಿವೆ

ಪಾರಂಪರಿಕ ತಾಣಗಳ ನಾಶ:
ಟರ್ಕಿಯಲ್ಲಿ ಹತ್ತು ನಗರಗಳು ತೊಂದರೆಗೆ ಒಳಗಾಗಿದ್ದು, ಈ ಪೈಕಿ ಪಾರಂಪರಿಕ ನಗರ ಗಾಜಿಯಾನ್‌ಟೆಪ್‌ನಲ್ಲಿ ಇರುವ ಕಟ್ಟಡಗಳು, ಐತಿಹಾಸಿಕ ಕಟ್ಟಡಗಳು ಕುಸಿದು ಬಿದ್ದಿವೆ. ಆ ನಗರ ಟರ್ಕಿಯಲ್ಲಿ ಅತ್ಯಂತ ಉತ್ತಮವಾಗಿ ನಿರ್ವಹಣೆಯಲ್ಲಿ ಇರುವ ನಗರವಾಗಿದೆ.

ಸಿರಿಯಾಕ್ಕೆ ಆಘಾತ:
ಆಂತರಿಕ ಸಂಘರ್ಷದಿಂದ ಜರ್ಝರಿತವಾಗಿರುವ ಸಿರಿಯಾಕ್ಕೆ ಭೂಕಂಪ ಮತ್ತೂಂದು ಪ್ರಬಲ ಆಘಾತವನ್ನು ತಂದೊಡ್ಡಿದೆ. ಡಾರ್ಕುಶ್‌ ಎಂಬ ನಗರದಲ್ಲಿ ಭೂಕಂಪನ ಬಳಿಕ ಅವಶೇಷಗಳ ಎಡೆಯಿಂದ ಗಾಯಗೊಂಡವರನ್ನು, ಅಸುನೀಗಿದವರನ್ನು ಹೊರಕ್ಕೆ ತೆಗೆಯುವ ಕಾರ್ಯ ಭರದಿಂದ ಸಾಗಿದೆ. ದುರಂತವೆಂದರೆ, ಕಂಪನಕ್ಕೆ ತುತ್ತಾದ ಪ್ರದೇಶಗಳು ಸರ್ಕಾರದ ನಿಯಂತ್ರಣಕ್ಕೆ ಒಳಪಟ್ಟಿಲ್ಲ.

Advertisement

ಅಜ್ಮಾರಿನ್‌ ಎಂಬ ಗ್ರಾಮದ ಒಸಾಮಾ ಅಬ್ದುಲ್‌ ಹಮೀದ್‌ ಎಂಬಾತ ಪತ್ನಿ ಮತ್ತು ನಾಲ್ವರು ಮಕ್ಕಳ ಜತೆಗೆ ವಸತಿ ಸಮುಚ್ಚಯದಲ್ಲಿ ವಾಸಿಸುತ್ತಿದ್ದ. ಭೂಕಂಪನದ ಬಳಿಕ ಆತ ವಾಸಿಸುತ್ತಿದ್ದ ವಸತಿ ಸಮುತ್ಛಯ ಕುಸಿದು ಬಿದ್ದಿದೆ. ಆದರೆ, ಅದರಲ್ಲಿ ವಾಸಿಸುತ್ತಿದ್ದ ಇತರರು ಸಾವಿಗೀಡಾಗಿದ್ದಾರೆ ಎಂದು ಆತ ಶೋಕಿಸುತ್ತಿದ್ದ. ಜತೆಗೆ ಬದುಕಿ ಉಳಿದವರು ಇದ್ದಾರೆಯೇ ಎಂದು ಚಿಂತನೆಯಲ್ಲಿ ತೊಡಗಿದ್ದ. ಮುಂದೆ ಜೀವನ ಹೇಗೆ ಎಂಬ ಲೆಕ್ಕಾಚಾರ ಆತನದ್ದಾಗಿತ್ತು.

ಸಿರಿಯಾ ಅಧ್ಯಕ್ಷ ಬಶರ್‌ ಅಲ್‌ ಅಸಾದ್‌ ವಿರುದ್ಧ ದಾಳಿ ಮತ್ತು ಸಂಘರ್ಷದಿಂದಾಗಿ ದೇಶ ನಲುಗಿ ಹೋಗಿದೆ. ಹೊಸ ದುರಂತದಿಂದಾಗಿ ಅಳಿದುಳಿದಿರುವ ಆಸ್ಪತ್ರೆಗಳು ಮತ್ತು ಕ್ಲಿನಿಕ್‌ಗಳಲ್ಲಿ ಚಿಕಿತ್ಸೆ ನೀಡಲು ಹರಸಾಹಸ ಪಡುತ್ತಿದ್ದಾರೆ ವೈದ್ಯರು ಮತ್ತು ಅವರ ಸಹಾಯಕರು. ಸಿರಿಯಾದ ನೈಋತ್ಯ ಭಾಗದಲ್ಲಿ 58 ಗ್ರಾಮಗಳು, ಪಟ್ಟಣಗಳು ಮತ್ತು ದೊಡ್ಡ ನಗರಗಳಿಗೆ ಹಾನಿಯಾಗಿದೆ. ಕ್ಷಣಕ್ಷಣಕ್ಕೂ ಸಾವಿನ ಸಂಖ್ಯೆ ಹೆಚ್ಚುತ್ತಲೇ ಇದೆ. ಸಿರಿಯನ್‌ ಅಮೆರಿಕನ್‌ ಮೆಡಿಕಲ್‌ ಸೊಸೈಟಿ ಎಂಬ ಸಂಸ್ಥೆ ಹಲವು ಆಸ್ಪತ್ರೆಗಳನ್ನು ನಡೆಸುತ್ತಿದ್ದು, ಅವುಗಳಲ್ಲಿ ಪರಿಣಿತರು ಮತ್ತು ವೈದ್ಯಕೀಯ ಉಪಕರಣಗಳ, ಔಷಧಗಳ ಕೊರತೆ ಉಂಟಾಗಿದೆ.

ಮೂರು ದಿನಗಳ ಹಿಂದೆ ಭವಿಷ್ಯ ನುಡಿದಿದ್ದ ವಿಜ್ಞಾನಿ
ಭೀಕರ ಭೂಕಂಪ ಉಂಟಾಗುವ ಬಗ್ಗೆ ಸೋಲಾರ್‌ ಸಿಸ್ಟಮ್‌ ಜಿಯೋಮೆಟ್ರಿ ಸರ್ವೆ (ಎಸ್‌ಎಸ್‌ಜಿಇಒಎಸ್‌) ಎಂಬ ಸಂಸ್ಥೆಯ ವಿಜ್ಞಾನಿ ಫ್ರಾಂಕ್‌ ಹೂಟರ್‌ಬೀಟ್ಸ್‌ ಎಂಬುವರು ಮೂರು ದಿನಗಳ ಹಿಂದೆ ಭವಿಷ್ಯ ನುಡಿದಿದ್ದರು. ದಕ್ಷಿಣ-ಕೇಂದ್ರ ಟರ್ಕಿ, ಜೋರ್ಡಾನ್‌, ಸಿರಿಯಾ, ಲೆಬನಾನ್‌ ಭಾಗಗಳಿಗೆ ಅದರಿಂದ ಭಾರೀ ಹಾನಿ ಉಂಟಾಗಲಿದೆ ಎಂದು ಅವರು ಟ್ವೀಟ್‌ ಮಾಡಿದ್ದರು. ಅದರ ಪ್ರಮಾಣ ರಿಕ್ಟರ್‌ಮಾಪಕದಲ್ಲಿ 7.5 ಇರಲಿದೆ ಎಂದೂ ಹೇಳಿಕೊಂಡಿದ್ದರು. ಅದಕ್ಕೆ ಟ್ವಿಟರ್‌ನಲ್ಲಿ ಭಾರೀ ಪ್ರಮಾಣದಲ್ಲಿ ಅಪಹಾಸ್ಯ ವ್ಯಕ್ತವಾಗಿತ್ತು. ಅವರೊಬ್ಬ ವಿಜ್ಞಾನಿಯೇ ಅಲ್ಲವೆಂದು ಕೆಲವರು ಟೀಕಿಸಿದ್ದರು.

ಅಂತಾರಾಷ್ಟ್ರೀಯ ಸಮುದಾಯದ ನೆರವು
ಪ್ರಾಕೃತಿಕ ವಿಕೋಪದಿಂದ ತುತ್ತಾಗಿರುವ 2 ದೇಶಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ನೆರವು ಬರಲಾರಂಭಿಸಿದೆ. ಇಸ್ರೇಲ್‌, ಯು.ಕೆ. ಕೆನಡಾ, ಅಮೆರಿಕ ಸೇರಿದಂತೆ ಹಲವು ದೇಶಗಳು ಆಹಾರ ವಸ್ತುಗಳು, ಔಷಧಗಳು, ವೈದ್ಯಕೀಯ ಉಪಕರಣಗಳು, ಹೊದಿಕೆಗಳು ಸೇರಿದಂತೆ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡಲು ಶುರು ಮಾಡಿವೆ. ಜತೆಗೆ ರಕ್ಷಣಾ ಕಾರ್ಯಾಚರಣೆಗಾಗಿ ನುರಿತ ಸಿಬ್ಬಂದಿಯನ್ನೂ ಕಳುಹಿಸಿಕೊಡಲಾರಂಭಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next