Japan Exrthquake: ಜಪಾನ್ ನ ದಕ್ಷಿಣ ಕರಾವಳಿ ಪ್ರದೇಶದಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 7.1ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದ್ದು, ಇದರ ಪರಿಣಾಮ ಸುನಾಮಿ ಎಚ್ಚರಿಕೆ ನೀಡಲಾಗಿದೆ ಎಂದು ವರದಿ ತಿಳಿಸಿದೆ.
7.1ರಷ್ಟು ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿರುವುದಾಗಿ ಜಪಾನ್ ಭೂಗರ್ಭಶಾಸ್ತ್ರ ಸಂಸ್ಥೆ ತಿಳಿಸಿದೆ. ಜಪಾನ್ ನ ದಕ್ಷಿಣದ ಮುಖ್ಯ ದ್ವೀಪವಾದ ಕ್ಯೂಶುವಿನ ಪೂರ್ವ ಕರಾವಳಿಯಲ್ಲಿ ಸುಮಾರು 30 ಕಿಲೋ ಮೀಟರ್ ಆಳದಲ್ಲಿ ಭೂಕಂಪದ ಕೇಂದ್ರ ಬಿಂದು ಇರುವುದನ್ನು ಗುರುತಿಸಲಾಗಿದೆ ಎಂದು ವರದಿ ವಿವರಿಸಿದೆ.
ಪ್ರಬಲ ಭೂಕಂಪದಲ್ಲಿ ಸಂಭವಿಸಿರುವ ಸಾವು-ನೋವಿನ ಬಗ್ಗೆ ಈವರೆಗೆ ಯಾವ ಮಾಹಿತಿಯೂ ಬಂದಿಲ್ಲ. ಭೂಕಂಪದ ಹಿನ್ನೆಲೆಯಲ್ಲಿ ದಕ್ಷಿಣ ಕರಾವಳಿ ಭಾಗದಲ್ಲಿ 1 ಮೀಟರ್ ಎತ್ತರದಷ್ಟು ಅಳೆಗಳು ಮೇಲೇಳಲಿದೆ ಎಂದು ಎಚ್ಚರಿಕೆ ನೀಡಲಾಗಿದೆ ಎಂದು ವರದಿ ತಿಳಿಸಿದೆ.
ಪ್ರಬಲ ಭೂಕಂಪದಲ್ಲಿ ಕ್ಯೂಶು ಮತ್ತು ಷಿಕೋಕು ನ್ಯೂಕ್ಲಿಯರ್ ಘಟಕಗಳಿಗೆ ಒಂದು ವೇಳೆ ಏನಾದರು ಹಾನಿಯಾಗಿದೆಯೇ ಎಂದು ಪರಿಶೀಲಿಸಬೇಕಾಗಿದೆ ಎಂದು ಮೂಲಕಗಳು ತಿಳಿಸಿರುವುದಾಗಿ ವರದಿ ಹೇಳಿದೆ.
ಭೂಕಂಪದ ತೀವ್ರತೆಗೆ ಹಲವು ಮನೆಗಳ ಕಿಟಕಿಗಳು ಒಡೆದು ಹೋಗಿದ್ದು, ಭಾಗಶಃ ಕುಸಿದು ಹೋಗಿರುವ ಮನೆ ಹಾಗೂ ರಸ್ತೆಗಳು ಬಾಯ್ಬಿಟ್ಟಿರುವುದಾಗಿ ಜಪಾನ್ ನ ಎನ್ ಎಚ್ ಕೆ ಪಬ್ಲಿಕ್ ಟೆಲಿವಿಷನ್ ವರದಿ ಬಿತ್ತರಿಸಿದೆ.