Advertisement

ಮೀಸಲಾತಿಯಿಂದ ಎಲ್ಲರಿಗೂ ಅಧಿಕಾರ

12:21 AM Dec 07, 2020 | sudhir |

ವಿವಿಧ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸುವ ಗುರುತರ ಜವಾಬ್ದಾರಿ ನಿರ್ವಹಿಸುವ ಗ್ರಾ.ಪಂ.ಗಳಿಗೆ ಚುನಾವಣೆ ಘೋಷಣೆಯಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾ.ಪಂ.ಗಳ ರಚನೆ ಹೇಗೆ? ಮೀಸಲಾತಿ ಹೇಗೆ?  ಎಂಬುದರ ಬಗ್ಗೆ ಒಂದಿಷ್ಟು ಮಾಹಿತಿ.

Advertisement

“ಸ್ಥಳೀಯ ಸರಕಾರಗಳಂತೆ ಕಾರ್ಯ ನಿರ್ವಹಿಸುವ ಗ್ರಾಮ ಪಂಚಾಯತ್‌ಗಳು ಜನರಿಗೆ ಕುಡಿಯುವ ನೀರು, ನೈರ್ಮಲ್ಯ, ಬೀದಿ ದೀಪ, ರಸ್ತೆ ಮುಂತಾದ ಮೂಲ ಸೌಕರ್ಯಗಳನ್ನು ಒದಗಿಸುವ ಜತೆಗೆ ವಸತಿ ಇನ್ನಿತರ ಸರಕಾರದ ಯೋಜನೆಗಳಿಗೆ ಅರ್ಹ ಫ‌ಲಾನುಭವಿಗಳನ್ನು ಆಯ್ಕೆ ಮಾಡುವ ಅಧಿಕಾರ ಹೊಂದಿರುತ್ತವೆ. ಶಿಕ್ಷಣ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಮೊದಲಾದ ಸೇವೆಗಳನ್ನು ಗ್ರಾಮೀಣ ಜನರಿಗೆ ದೊರಕಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಪಂಚಾಯತ್‌ ವ್ಯಾಪ್ತಿಯ ಆಸ್ತಿಗಳ ಮೇಲೆ ತೆರಿಗೆ ವಿಧಿಸುವ ಮೂಲಕ ಸ್ವಂತ ಸಂಪನ್ಮೂಲಗಳನ್ನು ಸಂಗ್ರಹಿಸುವ ವಿಶೇಷ ಅಧಿಕಾರ ಗ್ರಾ.ಪಂ.ಗಳಿಗಿದೆ.

ಗ್ರಾ.ಪಂ.ರಚನೆ ಹಾಗೂ ಮೀಸಲಾತಿ
– ಪ್ರತೀ ಆರು ಸಾವಿರ ಜನಸಂಖ್ಯೆಗೆ ಒಂದರಂತೆ ಗ್ರಾಮ ಪಂಚಾಯತ್‌ ರಚನೆ ಮಾಡಲಾಗಿದೆ. ಆದರೆ ಭೌಗೋಳಿಕ ಕಾರಣಗಳಿಗಾಗಿ ಮಲೆನಾಡು, ಕರಾವಳಿ ಪ್ರದೇಶಗಳಲ್ಲಿ 6 ಸಾವಿರ ಕ್ಕಿಂತಲೂ ಕಡಿಮೆ ಜನಸಂಖ್ಯೆ ಹೊಂದಿರುವ ಗ್ರಾ.ಪಂ.ಗಳನ್ನು ರಚಿಸಲಾಗಿದೆ. ಗ್ರಾ.ಪಂ. ಕ್ಷೇತ್ರಗಳ ಬಗ್ಗೆ ರಾಜ್ಯ ಚುನಾವಣ ಆಯೋಗದ ಆದೇಶದಂತೆ ಜಿಲ್ಲಾಧಿಕಾರಿಗಳು ಅಧಿಸೂಚನೆ ಹೊರಡಿಸುತ್ತಾರೆ.

– ಗ್ರಾ.ಪಂ. ಸದಸ್ಯ ಸ್ಥಾನಗಳಿಗೆ ಮೀಸಲಾತಿ ವ್ಯವಸ್ಥೆ ಸಹ ಕಲ್ಪಿಸಲಾಗಿದೆ. ಪಂಚಾಯತ್‌ ವ್ಯಾಪ್ತಿಯ ಎಸ್ಸಿ, ಎಸ್ಟಿ ವರ್ಗಗಳನ್ನು ಒಟ್ಟು ಜನಸಂಖ್ಯೆಯ ಅನುಪಾತಕ್ಕೆ ಅನುಗುಣ ವಾಗಿ ಮೀಸಲಾತಿ ಕಲ್ಪಿಸಲಾಗಿದೆ. ಒಂದೊಮ್ಮೆ ಎಸ್ಸಿ, ಎಸ್ಟಿ ಜನಸಂಖ್ಯೆ ಇಲ್ಲದಿದ್ದರೂ ಅಂತಹ ಕ್ಷೇತ್ರಗಳಲ್ಲೂ ಆ ವರ್ಗಗಳಿಗೆ ಮೀಸಲಾತಿ ನೀಡಲಾಗುತ್ತದೆ.

– ಎಸ್ಸಿ ವರ್ಗಕ್ಕೆ ಮೀಸಲಾದ ಕ್ಷೇತ್ರಗಳಲ್ಲಿ ಆ ವರ್ಗದವರು ಇಲ್ಲದಿದ್ದರೆ ಅಲ್ಲಿ ಎಸ್ಟಿ ವರ್ಗದವರು ಮತ್ತು ಎಸ್ಟಿ ವರ್ಗಕ್ಕೆ ಮೀಸಲಾದ ಕ್ಷೇತ್ರದಲ್ಲಿ ಆ ವರ್ಗದ ಜನಸಂಖ್ಯೆ ಇಲ್ಲದಿದ್ದರೆ ಅಲ್ಲಿ ಎಸ್ಸಿ ವರ್ಗದವರು ಸ್ಪರ್ಧಿಸಬಹುದು.

Advertisement

– ಒಟ್ಟು ಗ್ರಾ.ಪಂ. ಸದಸ್ಯ ಸ್ಥಾನಗಳ ಮೂರನೇ ಒಂದರಷ್ಟು ಸ್ಥಾನಗಳನ್ನು ಹಿಂದುಳಿದ ವರ್ಗಕ್ಕೆ ಮೀಸಲಿಡಬೇಕು. ಇದರಲ್ಲಿ ಶೇ.80ರಷ್ಟು ಸ್ಥಾನಗಳನ್ನು ಹಿಂದುಳಿದ ವರ್ಗದ ಪ್ರವರ್ಗ-ಎ ಮತ್ತು ಶೇ.20ರಷ್ಟು ಸ್ಥಾನಗಳನ್ನು ಪ್ರವರ್ಗ-ಬಿ ಗೆ ಮೀಸಲಿಡಬೇಕು. ಎಸ್ಸಿ, ಎಸ್ಟಿ, ಒಬಿಸಿ ಸೇರಿ ಮೀಸಲಾತಿ ಶೇ.50ರಷ್ಟು ಮೀರುವಂತಿಲ್ಲ.

– ಎಲ್ಲ ಮೀಸಲು ಸ್ಥಾನಗಳು ಮತ್ತು ಮೀಸಲಿರಿಸದ ಸ್ಥಾನಗಳು ಒಳಗೊಂಡಂತೆ ಎಲ್ಲ ಪ್ರವರ್ಗಗಳಲ್ಲೂ ಶೇ.50ರಷ್ಟು ಮೀಸಲಾತಿಯನ್ನು ಮಹಿಳೆಯರಿಗೆ ನೀಡಬೇಕು. ಎಸ್ಸಿ, ಎಸ್ಟಿ, ಒಬಿಸಿ ಮೀಸಲು ಸ್ಥಾನಗಳಲ್ಲಿ ಅದೇ ವರ್ಗದವರು ಸ್ಪರ್ಧಿಸಬೇಕು. ಮೀಸಲು ಅಲ್ಲದ ಸ್ಥಾನಗಳಿಗೆ ಯಾವುದೇ ವರ್ಗದವರು ಸ್ಪರ್ಧಿಸಬಹುದು. ಅದೇ ರೀತಿ ಮಹಿಳಾ ಮೀಸಲು ಸ್ಥಾನಗಳಲ್ಲಿ ಆಯಾ ಪ್ರವರ್ಗದ ಮಹಿಳೆಯರು ಸ್ಪರ್ಧಿಸಬೇಕು. ಸಾಮಾನ್ಯ ಸ್ಥಾನಗಳಿಗೆ ಯಾವುದೇ ಪ್ರವರ್ಗದ ಮಹಿಳೆಯರೂ ಸ್ಪರ್ಧಿಸಬಹುದು.

– ಎಂ.ಕೆ. ಕೆಂಪೇಗೌಡ.
ಪಂಚಾಯತ್‌ರಾಜ್‌ ನಿರ್ದೇಶಕರು (ನಿವೃತ್ತ)

Advertisement

Udayavani is now on Telegram. Click here to join our channel and stay updated with the latest news.

Next