Advertisement

ಶಕ್ತಿ ಕೇಂದ್ರಗಳ ಪಾರ್ಕ್‌ಗಳಿಗೆ ಕಾವೇರಿ ನೀರು!

11:52 AM Mar 07, 2017 | Team Udayavani |

ಬೆಂಗಳೂರು: ರಾಜಧಾನಿಯಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವ ತಲೆದೋರುವ ಸಂಗತಿ ಗೊತ್ತಿದ್ದರೂ ರಾಜ್ಯದ ಶಕ್ತಿಕೇಂದ್ರಗಳಾದ ವಿಧಾನಸೌಧ, ಹೈಕೋರ್ಟ್‌, ರಾಜಭವನದ ಉದ್ಯಾನವನಗಳು ಸೇರಿದಂತೆ ಹಲವಾರು ಪಾರ್ಕ್‌ಗಳಿಗೆ ಯಥೇತ್ಛವಾಗಿ ಕಾವೇರಿ ನೀರು ಹಾಗೂ ಕೊಳವೆ ಬಾವಿಯ ಶುದ್ಧ  ನೀರನ್ನು ಬಳಕೆ ಮಾಡಲಾಗುತ್ತಿದೆ. 

Advertisement

ಕುಡಿಯುವ ನೀರಿನ ತೀವ್ರ ಅಭಾವದ ಹಿನ್ನೆಲೆಯಲ್ಲಿ ಉದ್ಯಾನವನಗಳಿಗೆ ಕೊಳಚೆ ನೀರು ಸಂಸ್ಕರಿಸಿ ಬಳಕೆ ಮಾಡಬೇಕು ಎನ್ನುವ ನಿಯಮವಿದೆ. ಕಬ್ಬನ್‌ಪಾರ್ಕ್‌, ಲಾಲ್‌ಬಾಗ್‌ ಉದ್ಯಾನಗಳಲ್ಲಿ ಕೊಳಚೆ ನೀರನ್ನೇ ಸಂಸ್ಕರಿಸಿ ಬಳಲಾಗುತ್ತಿದೆ. ಆದರೆ, ವಿಧಾನಸೌಧ, ಹೈಕೋರ್ಟ್‌, ರಾಜಭವನ, ಮೆಟ್ರೋ ಉದ್ಯಾನವನ, ಇಂದಿರಾಗಾಂ ಸಂಗೀತ ಕಾರಂಜಿಯ ಉದ್ಯಾನವನಗಳಿಗೆ ಕುಡಿಯುವ ನೀರನ್ನೇ ಬಳಸಲಾಗುತ್ತಿದೆ. 

ನೀರು ಬಳಕೆ ಎಷ್ಟೇಷ್ಟು?: ವಿಧಾನಸೌಧದ ಉದ್ಯಾನವನ 23 ಎಕರೆ ಇದ್ದು, ವಾರಕ್ಕೆ ಕನಿಷ್ಠ 1 ಲಕ್ಷ ಲೀಟರ್‌ ನೀರು ಬಳಕೆಯಾಗುತ್ತಿದೆ. ಇಂದಿರಾಗಾಂ ಸಂಗೀತ ಕಾರಂಜಿ ಉದ್ಯಾನವನ 17.40 ಎಕರೆ ಇದ್ದು, ವಾರಕ್ಕೆ 2 ಲಕ್ಷ ಲೀಟರ್‌ ನೀರು ಉಪಯೋಗಿ­ಸಲಾಗುತ್ತಿದೆ. ರಾಜಭವನದ ಒಟ್ಟು ವ್ಯಾಪ್ತಿ 17.20 ಎಕರೆ ವಿಸ್ತೀರ್ಣವಿದ್ದು, 11.20 ಎಕರೆ ಉದ್ಯಾನವನವಿದೆ. ಇದಕ್ಕೂ ಕೂಡ ವಾರಕ್ಕೆ 2 ಲಕ್ಷ ಲೀಟರ್‌ ಬಳಕೆಯಾಗುತ್ತಿದೆ.

ಮೆಟ್ರೋ ಗಾರ್ಡನ್‌ ಮತ್ತು ಹೈಕೋರ್ಟ್‌ ಉದ್ಯಾನವನ ತಲಾ 4 ಎಕರೆ ಇದ್ದು, 1ರಿಂದ 2 ಲಕ್ಷ ಲೀಟರ್‌ ನೀರು ಉಪಯೋಗಿಸಲಾಗುತ್ತಿದೆ. ಹೀಗೆ ಅಂದಾಜು 6ರಿಂದ 8 ಲಕ್ಷ ಲೀಟರ್‌ ನೀರು ಬಳಸ­ಲಾಗುತ್ತಿದೆ. ಒಂದು ಲೆಕ್ಕಾಚಾರ ಪ್ರಕಾರ ಈ ನೀರನ್ನು ಕುಡಿಯಲು ಬಳಸಿದರೆ ಒಂದು ವಾರಕ್ಕೆ 16 ಸಾವಿರ ಜನರಿಗೆ ಸರಬರಾಜು ಮಾಡಬಹುದು.

ನಾಗರಿಕರ ಆಕ್ರೋಶ: ಬಿಬಿಎಂಪಿ, ಬಿಡಿಎ ವ್ಯಾಪ್ತಿಗೆ ಒಳಪಟ್ಟ ಬಹುತೇಕ ಉದ್ಯಾನವನಗಳಲ್ಲಿ ಸಂಸ್ಕರಣಗೊಂಡ ಕೊಳಚೆ ನೀರನ್ನೇ ಹಲವಾರು ವರ್ಷಗಳಿಂದ ಬಳಸಿ ಉತ್ತಮವಾಗಿ ನಿರ್ವಹಣೆ ಮಾಡಲಾಗುತ್ತಿದೆ. ಆದರೆ, ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದ ಪ್ರಮುಖ ಆಡಳಿತ ಕಚೇರಿಗಳ 76 ಎಕರೆ ವಿಸ್ತೀರ್ಣದ ಉದ್ಯಾನಗಳಿಗೆ ಶುದ್ಧವಾದ ನೀರನ್ನೇ ಹರಿಸಿ ವಾರಕ್ಕೆ 6 ರಿಂದ 8 ಲಕ್ಷ ಲೀಟರ್‌ ನೀರನ್ನು ಅನಗತ್ಯವಾಗಿ ಪೋಲು ಮಾಡುತ್ತಿರುವುದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.

Advertisement

ಬೇಸಿಗೆಯಲ್ಲಿ  ನೀರಿನ ಅಭಾವ ತಲೆ­ದೋರುವ ಸಾಧ್ಯತೆಗಳು ಇರುವ ಬಗ್ಗೆ ಬೆಂಗಳೂರು ಜಲಮಂಡಳಿ ಈಗಾಗಲೇ ಸರ್ಕಾರಕ್ಕೆ ಮುನ್ಸೂಚನೆ ನೀಡಿದೆ. ನಗರದ ಜನತೆಗೆ ಪಡಿತರದ ಮಾದರಿಯಲ್ಲಿ ಕುಡಿಯುವ ನೀರು ಸರಬರಾಜು ಮಾಡಲು ಲೆಕ್ಕಾಚಾರ ಸಹ ಹಾಕಲಾಗುತ್ತಿದೆ. ಅಷ್ಟೇ ಅಲ್ಲ, ತುರ್ತು ಸಂದರ್ಭ ಬಂದರೆ ನಗರದಲ್ಲಿರುವ ಖಾಸಗಿ ಕುಡಿಯುವ ನೀರು ಸರಬರಾಜು ಟ್ಯಾಂಕರ್‌ಗಳನ್ನು ತನ್ನ ವಶಕ್ಕೆ ತೆಗೆದುಕೊಳ್ಳಲೂ ಜಲಮಂಡಳಿ ಸಜ್ಜಾಗಿದೆ.

ಇಂತಹ ಸಂದರ್ಭದಲ್ಲಿ ಉದ್ಯಾನವನಗಳಿಗೆ ಕುಡಿಯುವ ನೀರಿನ್ನು ಬಳಕೆ ಮಾಡುತ್ತಿ­ರುವುದು ಎಷ್ಟು ಸರಿ ಎಂಬ ಪ್ರಶ್ನೆ ಉದ್ಭವಿಸಿದೆ. ಬೆಂಗಳೂರಿನ ಸುತ್ತಮುತ್ತ ಕೆ.ಆರ್‌.ಪುರ, ಹೊಸಕೋಟೆ, ಆನೇಕಲ್‌, ಕೆಂಗೇರಿ, ಕುಂಬಳಗೋಡು ಸೇರಿದಂತೆ ಸಾವಿರಾರು ಎಕರೆ ಪ್ರದೇಶದಲ್ಲಿ ಕಲುಷಿತ ನೀರಿನಲ್ಲಿ ಹಣ್ಣು, ತರಕಾರಿ, ಸೊಪ್ಪು ಬೆಳೆದು ಅದನ್ನು ನಗರದಲ್ಲಿ ಮಾರಾಟ ಮಾಡ­ಲಾಗುತ್ತಿದೆ. ತರಕಾರಿಗಳಿಗೆ ಕಲುಷಿತ ನೀರು ಬಳಸುತ್ತಿರುವಾಗ ಉದ್ಯಾನವನಗಳಿಗೆ ಶುದ್ಧ ಕುಡಿಯುವ ನೀರು ವ್ಯರ್ಥ ಮಾಡುತ್ತಿರುವ ಬಗ್ಗೆ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ. 

ಕಡಿವಾಣಕ್ಕೆ ಗಂಭೀರ ಚಿಂತನೆ 
ಆಯ್ದ ಉದ್ಯಾನಗಳಿಗೆ ಕಾವೇರಿ ಮತ್ತು ಬೋರ್‌ವೆಲ್‌ನ ಕುಡಿಯಲು ಯೋಗ್ಯವಾದ ನೀರನ್ನೇ ಬಳಕೆ ಮಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಕುಡಿಯುವ ನೀರಿನ ಅಭಾವ ತಲೆದೋರುತ್ತಿರುವ ಹಿನ್ನೆಲೆಯಲ್ಲಿ ಇದಕ್ಕೆ ಕಡಿವಾಣ ಹಾಕಲು ಇಲಾಖಾ ಮಟ್ಟದಲ್ಲಿ ಗಂಭೀರ ಚರ್ಚೆ ನಡೆಯುತ್ತಿದೆ. ವಿಧಾನಸೌಧ, ಹೈಕೋರ್ಟ್‌, ರಾಜಭವನ, ಮೆಟ್ರೋ ಗಾರ್ಡನ್‌, ಇಂದಿರಾಗಾಂ ಸಂಗೀತ ಕಾರಂಜಿ ಉದ್ಯಾನವನಕ್ಕೆ ಮಾತ್ರ ಬೋರ್‌ವೆಲ್‌ ಮತ್ತು ಕಾವೇರಿ ನೀರನ್ನು ಬಳಸಲಾಗುತ್ತಿದೆ. ನೂರಾರು ಎಕರೆ ವಿಸ್ತೀರ್ಣ ಹೊಂದಿರುವ ಕಬ್ಬನ್‌ಪಾರ್ಕ್‌ನಲ್ಲಿ ಕೊಳಚೆ ನೀರನ್ನೇ ಸಂಸ್ಕರಿಸಿ ಬಳಕೆ ಮಾಡಲಾಗುತ್ತಿದೆ ಎಂದು ಉಪ ನಿರ್ದೇಶಕ, ತೋಟಗಾರಿಕೆ ಇಲಾಖೆ ಮಹಾಂತೇಶ್‌ ಮುರುಗೋಡ್‌ ಹೇಳಿದರು.

* ಸಂಪತ್‌ ತರೀಕೆರೆ 

Advertisement

Udayavani is now on Telegram. Click here to join our channel and stay updated with the latest news.

Next