Advertisement

ಉಪವಿದ್ಯುತ್‌ ಕೇಂದ್ರ: ಸಾಮರ್ಥ್ಯ ಹೆಚ್ಚಳ

10:38 PM Mar 13, 2020 | Team Udayavani |

ಪುತ್ತೂರು: ಪುತ್ತೂರು, ಕಡಬ ಮತ್ತು ಸುಳ್ಯ ತಾಲೂಕುಗಳ ವಿದ್ಯುತ್‌ ಸರಬರಾಜು ವ್ಯವಸ್ಥೆಯ ಪ್ರಮುಖ ಕೇಂದ್ರವಾಗಿರುವ ಪುತ್ತೂರಿನ 110 ಕೆ.ವಿ. ವಿದ್ಯುತ್‌ ಉಪಕೇಂದ್ರದ ವಿದ್ಯುತ್‌ ಪ್ರಸರಣ ಸಾಮರ್ಥ್ಯ ಹೆಚ್ಚಳಗೊಳಿಸಲು ಹೆಚ್ಚುವರಿ 20 ಮೆಗಾ ವ್ಯಾಟ್‌ ಸಾಮರ್ಥ್ಯದ ವಿದ್ಯುತ್‌ ಪರಿವರ್ತಕ ಅಳವಡಿಸಲಾ ಗುತ್ತಿದ್ದು, ಮಾರ್ಚ್‌ ಅಂತ್ಯಕ್ಕೆ ಕಾರ್ಯಾರಂಭಿಸಲಿದೆ. ಪುತ್ತೂರು 110 ಕೆ.ವಿ. ವಿದ್ಯುತ್‌ ಉಪಕೇಂದ್ರವು ಹಾಲಿ 40 ಮೆ.ವ್ಯಾ. ಸಾಮರ್ಥ್ಯವನ್ನು ಹೊಂದಿದ್ದು, ಇದಕ್ಕೆ ಹೆಚ್ಚುವರಿಯಾಗಿ 20 ಮೆ.ವ್ಯಾ. ಸಾಮರ್ಥ್ಯದ ವಿದ್ಯುತ್‌ ಪರಿವರ್ತಕವನ್ನು ಅಳವಡಿಸುವ ಕಾಮಗಾರಿ ನಡೆಸಲಾಗುತ್ತಿದೆ. ಕೆಪಿಟಿಸಿಎಲ್‌ ವತಿಯಿಂದ ಈ ಕಾಮಗಾರಿಗಳು ನಡೆಯುತ್ತಿದ್ದು, ಟ್ರಾನ್ಸ್‌ ಫಾರ್ಮರ್‌ ಅಳವಡಿಸುವ ಕಾಮಗಾರಿ ಮಾತ್ರ ಬಾಕಿಯಿದೆ.

Advertisement

ಕ್ರೇನ್‌ ಮೂಲಕ ಅಳವಡಿಕೆ
ವಿದ್ಯುತ್‌ ಪರಿವರ್ತಕಕ್ಕೆ 1.75 ಕೋಟಿ ರೂ. ಹಾಗೂ ಅಳವಡಿಕೆ ಮತ್ತು ಸಾಗಾಟ ವೆಚ್ಚವಾಗಿ 75 ಲಕ್ಷ ರೂ. ಸೇರಿ ಒಟ್ಟು 2.50 ಕೋಟಿ ರೂ. ವಿನಿಯೋಗವಾಗಲಿದೆ. 20 ಮೆಗಾವ್ಯಾಟ್‌ ವಿದ್ಯುತ್‌ ಪರಿವರ್ತಕ ಪುತ್ತೂರು ವಿದ್ಯುತ್‌ ಉಪಕೇಂದ್ರಕ್ಕೆ ಆಗಮಿಸಿದ್ದು ಕ್ರೇನ್‌ ಮೂಲಕ ಅಳವಡಿಸಲಾಗುತ್ತದೆ.

ಪೂರೈಕೆ ಬಹೂಪಯೋಗಿ
ಹೆಚ್ಚುವರಿ ಯೋಜನೆಯ ಮೂಲಕ ಪುತ್ತೂರು 110 ಕೆ.ವಿ. ವಿದ್ಯುತ್‌ ಉಪಕೇಂದ್ರವು 60 ಮೆ.ವ್ಯಾ. ಸಾಮರ್ಥ್ಯದ ವಿದ್ಯುತ್‌ ಉಪಕೇಂದ್ರವಾಗಿ ಮೇಲ್ದರ್ಜೆಗೇರಲಿದೆ. ಆ ಮೂಲಕ ಪುತ್ತೂರು, ಕಡಬ ಮತ್ತು ಸುಳ್ಯ ತಾಲೂಕುಗಳ ವಿದ್ಯುತ್‌ ಸರಬರಾಜು ವ್ಯವಸ್ಥೆಯಲ್ಲಿ ಪ್ರಗತಿ ಕಾಣಲಿದೆ. 10 ವರ್ಷಗಳ ಹಿಂದೆ ಪುತ್ತೂರು 110 ಕೆ.ವಿ. ವಿದ್ಯುತ್‌ ಉಪಕೇಂದ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲಾಗಿತ್ತು. ಅನಂತರದಲ್ಲಿ ಈಗ ಕಾಮಗಾರಿ ನಡೆಯುತ್ತಿರುವುದರಿಂದ ವಿದ್ಯುತ್‌ ಬಳಕೆದಾರರಲ್ಲಿ ಆಶಾಭಾವನೆ ಮೂಡಿಸಿದೆ.

ಕಡಿಮೆಯಾಗಲಿದೆ ಒತ್ತಡ
ಹಾಲಿ ತಾಲೂಕಿನ ಮಾಡಾವಿನಲ್ಲಿ 110 ಕೆ.ವಿ. ವಿದ್ಯುತ್‌ ಉಪಕೇಂದ್ರ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದೆ. ಈ ಉಪಕೇಂದ್ರವು ಕಾರ್ಯಾರಂಭಗೊಂಡಲ್ಲಿ ಸುಳ್ಯ, ಕಡಬ ಭಾಗದ ವಿದ್ಯುತ್‌ ಸರಬರಾಜು ವ್ಯವಸ್ಥೆಯಲ್ಲಿ ಇನ್ನಷ್ಟು ಪ್ರಗತಿ ಕಾಣುವ ಜತೆಗೆ ಪುತ್ತೂರು ಉಪಕೇಂದ್ರದ ಒತ್ತಡವನ್ನೂ ಕಡಿಮೆ ಮಾಡಲಿದೆ. ಇದರ ಜತೆಗೆ ಮಾಡಾವು, ಕೈಕಾರ, ಉಪ್ಪಿನಂಗಡಿ ಸಬ್‌ಸ್ಟೇಷನ್‌ ವಿಚಾರಗಳು ಪ್ರಗತಿಯಲ್ಲಿರುವುದು ಕಾರ್ಯರೂಪಕ್ಕೆ ಬಂದರೆ ಬಹುತೇಕ ಸಮಸ್ಯೆಗಳು ಬಗೆಹರಿಯುವ ವಿಶ್ವಾಸದಲ್ಲಿ ಮೆಸ್ಕಾಂ ಇದೆ.

ಪ್ರಸರಣ ವ್ಯವಸ್ಥೆ ಉತ್ತಮ
ಮೂರು ತಾಲೂಕುಗಳ ವಿದ್ಯುತ್‌ ಪೂರೈಕೆ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಹಂತ ಹಂತವಾಗಿ ಯೋಜನೆ ಹಾಕಿಕೊಳ್ಳಲಾಗಿದೆ. ಆ ಮೂಲಕ ವಿದ್ಯುತ್‌ ಪ್ರಸರಣ ವ್ಯವಸ್ಥೆಯನ್ನು ಉತ್ತಮಪಡಿಸಲಿದೆ. ಗುಣಮಟ್ಟದ ಹಾಗೂ ನಿರಂತರ ವಿದ್ಯುತ್‌ ಸರಬರಾಜು ಮಾಡಲು ಕ್ರಮಗಳನ್ನು ಕೈಗೊಳ್ಳಲಿದೆ.
– ಗಂಗಾಧರ್‌, ಕಾರ್ಯಪಾಲಕ ಎಂಜಿನಿಯರ್‌, ಕೆಪಿಟಿಸಿಎಲ್‌, ಮಂಗಳೂರು

Advertisement

ರಾಜೇಶ್‌ ಪಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next