ಬಾಗಲಕೋಟೆ: “ಡಿಕೆಶಿ ನನಗೆ ಪತ್ರ ಬರೆದು ಏನು ಮಾಡ್ತಾರೆ, ಕಾಳಜಿ ಇದ್ದರೆ ಕೇಂದ್ರಕ್ಕೆ ಹೋಗಿ ಸಚಿವರಿಗೆ ಮನವಿ ಮಾಡಿ ಕಡಿಮೆ ಬೆಲೆಗೆ ವಿದ್ಯುತ್ ಪಡೆದು ಬರಲಿ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ
ತಿರುಗೇಟು ನೀಡಿದ್ದಾರೆ.
ಮಂಗಳವಾರ ಬೆಂಗಳೂರಿನಲ್ಲಿ ಮಾತನಾಡಿದ್ದ ಇಂಧನ ಸಚಿವ ಡಿ.ಕೆ.ಶಿವಕುಮಾರ್, “ಕೇಂದ್ರ ಸರ್ಕಾರ ಪ್ರತಿ
ಯೂನಿಟ್ ವಿದ್ಯುತ್ತನ್ನು 2.50 ರೂ.ನಂತೆ ನೀಡಿ, ಅದಕ್ಕೆ ಅಗತ್ಯವಿರುವ ಕಾರಿಡಾರ್ ಸೌಲಭ್ಯ ಒದಗಿಸಿದರೆ ರಾಜ್ಯಕ್ಕೆ ಬೇಕಾದ ಸಂಪೂರ್ಣ ವಿದ್ಯುತ್ತನ್ನು ಖರೀದಿಸಲು ಸಿದ್ಧ’ ಎಂದು ಸವಾಲು ಹಾಕಿದ್ದರು.
ಈ ಹೇಳಿಕೆಗೆ ಬುಧವಾರ ಬಾಗಲಕೋಟೆಯಲ್ಲಿ ಪ್ರತಿಕ್ರಿಯೆ ನೀಡಿದ ಯಡಿಯೂರಪ್ಪ, “ನಮ್ಮ ಸರ್ಕಾರದ ಅವಧಿಯಲ್ಲಿ ಎಷ್ಟು ವಿದ್ಯುತ್ ಅಗತ್ಯವಿತ್ತೋ ಅಷ್ಟನ್ನೇ ಖರೀದಿಸಿದ್ದೆವು. ಆದರೆ, ಈಗ ಹೆಚ್ಚಿನ ಬೆಲೆಗೆ, ಅಗತ್ಯಕ್ಕಿಂತ ಹೆಚ್ಚಿನ ವಿದ್ಯುತ್ ಖರೀದಿಸಲಾಗುತ್ತಿದೆ. ಕಿಕ್‌ಬ್ಯಾಕ್ ಪಡೆಯಲೆಂದೇ ಈ ರೀತಿ ವಿದ್ಯುತ್ ಖರೀದಿಸಲಾಗುತ್ತಿದೆ’ ಎಂದು ಆರೋಪಿಸಿದರು.