Advertisement

ವಿದ್ಯುತ್‌ ಬಿಲ್‌ ಬಾಕಿಯಿದ್ದರೆ “ಪವರ್‌ ಆಫ್’

11:12 PM Sep 30, 2020 | mahesh |

ಉಡುಪಿ: ಕೋವಿಡ್ ಸಂದರ್ಭ ವಿದ್ಯುತ್‌ ಬಿಲ್‌ ಪಾವತಿಗೆ ನೀಡಿದ್ದ ವಿನಾಯಿತಿ ಅವಧಿ ಮುಕ್ತಾಯಗೊಂಡಿದ್ದು, ಬಾಕಿಯಿರಿಸಿಕೊಂಡವರ ವಿದ್ಯುತ್‌ ಸಂಪರ್ಕ ಕಡಿತಗೊಳಿಸುವ ಪ್ರಕ್ರಿಯೆಗೆ ಮೆಸ್ಕಾಂ ಇಲಾಖೆ ಚಾಲನೆ ನೀಡಿದೆ. ಕೋವಿಡ್ ಹಾಗೂ ಮಳೆಗಾಲದ ಸಂದರ್ಭದಲ್ಲಿ ಮೆಸ್ಕಾಂಗೆ ಕೋಟ್ಯಂತರ ರೂ. ನಷ್ಟ ಉಂಟಾಗಿತ್ತು.

Advertisement

ಈ ನಡುವೆ ಜಿಲ್ಲೆಯ 3,87,104 ವಿದ್ಯುತ್‌ ಬಳಕೆದಾರರು ಕೊಡಬೇಕಾದ 27.38 ಕೋ.ರೂ. ವಿದ್ಯುತ್‌ ಬಿಲ್‌ ಬಾಕಿ ಇರಿಸಿಕೊಂಡ ಕಾರಣ ಆರ್ಥಿಕ ಸಂಕಷ್ಟವೂ ಎದುರಾಗಿದೆ. ಬಾಕಿ ಬಿಲ್‌ ಪಾವತಿ ಮಾಡದ ಗ್ರಾಹಕರ ವಿದ್ಯುತ್‌ ಸಂಪರ್ಕವನ್ನು ಕಡಿತ ಮಾಡಲಾಗುತ್ತದೆ ಎಂದು ಮೆಸ್ಕಾಂ ಇಲಾಖೆಯ ಅಧಿಕಾರಿಗಳು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ.

ಎಷ್ಟು ಬಾಕಿ?
ಎಪ್ರಿಲ್‌ ತಿಂಗಳಿನಿಂದ ಗೃಹ ಬಳಕೆದಾರರು 15.39 ಕೋ.ರೂ., ಕೈಗಾರಿಕಾ ಗ್ರಾಹಕರಿಂದ 2.27 ಕೋ.ರೂ., ವಾಣಿಜ್ಯ ಗ್ರಾಹಕರು 6.65 ಕೋ.ರೂ. ವಿದ್ಯುತ್‌ ಬಿಲ್‌ ಬಾಕಿಯಿರಿಸಿಕೊಂಡಿದ್ದಾರೆ. ಎಚ್‌ಟಿ ಇಂಡಸ್ಟ್ರಿಯ 606 ಗ್ರಾಹಕರಿಂದ 3.07 ಕೋ.ರೂ. ವಿದ್ಯುತ್‌
ಬಿಲ್‌ ಬರಬೇಕಿದೆ.

ವಿವಿಧ ಇಲಾಖೆಗಳಿಂದ 71.31 ಲ.ರೂ.ಬಾಕಿ
ಕೊರೊನಾ ಹಿನ್ನೆಲೆಯಲ್ಲಿ ಬಾಕಿ ವಿದ್ಯುತ್‌ ಬಿಲ್‌ ಒತ್ತಾಯವಾಗಿ ವಸೂಲು ಮಾಡದಂತೆ ರಾಜ್ಯ ಸರಕಾರ ಎಸ್ಕಾಂಗಳಿಗೆ ಸೂಚಿಸಿದ್ದರಿಂದ ಗ್ರಾಹಕರು ಬಿಲ್‌ ಪಾವತಿಸಿರಲಿಲ್ಲ. ಪ್ರತೀ ತಿಂಗಳೂ ಸಂಬಳ, ಸಾರಿಗೆ, ವಿದ್ಯುತ್‌ ಖರೀದಿ, ಅಭಿವೃದ್ಧಿ ನಿಟ್ಟಿನಲ್ಲಿ ಕೋಟ್ಯಂತರ ರೂ. ಅಗತ್ಯವಿದೆ. ರಾಜ್ಯ ಸರಕಾರದ ವಿವಿಧ ಇಲಾಖೆಗಳು ಎಪ್ರಿಲ್‌ನಿಂದ 71.31 ಲ.ರೂ.ಬಾಕಿ ಇಟ್ಟಿವೆ.

ಸರಳ ಪಾವತಿ ಸಾಧ್ಯ
ಲಾಕ್‌ಡೌನ್‌ ಸಂದರ್ಭದಲ್ಲಿ ಮನೆಗಳಲ್ಲಿ ನಿರಂತರ ವಿದ್ಯುತ್‌ ಸಂಪರ್ಕ ಹಾಗೂ ಕೃಷಿ ಚಟುವಟಿಕೆಗಳಿಗೂ ಯಾವುದೇ ತೊಡಕಾಗದಂತೆ ವಿದ್ಯುತ್‌ ವ್ಯವಸ್ಥೆ ಕಲ್ಪಿಸಲಾಗಿತ್ತು. ಸರಕಾರಿ ಇಲಾಖೆಗಳಿಗೆ ವಿದ್ಯುತ್‌ ಕಡಿತ ಮಾಡಲು ಸಾಧ್ಯವಿಲ್ಲ. ಅನ್ಯ ಎಸ್ಕಾಂಗಳಿಗೆ ಹೋಲಿಸಿದರೆ ಮೆಸ್ಕಾಂಗೆ ಗ್ರಾಹಕರಿಟ್ಟ ವಿದ್ಯುತ್‌ ಬಿಲ್‌ ಬಾಕಿ ಮೊತ್ತ ಕಡಿಮೆಯಿದೆ. ಕೆಲವೊಂದು ಗ್ರಾಹಕರು ಈಗಾಗಲೇ ಪಾವತಿಸಿದ್ದರೆ ಇನ್ನು ಕೆಲವರು ಬಾಕಿ ಇರಿಸಿಕೊಂಡಿದ್ದಾರೆ. ಇನ್ನು ಮುಂದೆ ಯಾವುದೇ ರಿಯಾಯಿತಿ ನೀಡದೆ ವಿದ್ಯುತ್‌ ಕಡಿತ ಮಾಡಲಾಗುತ್ತದೆ. ಗ್ರಾಹಕರು ಆನ್‌ಲೈನ್‌, ಅಂಚೆಕಚೇರಿ, ಮೆಸ್ಕಾಂ ಕ್ಯಾಶ್‌ ಕೌಂಟರ್‌ಗಳಲ್ಲಿಯೂ ಬಾಕಿಯಿರಿಸಿಕೊಂಡ ಮೊತ್ತವನ್ನು ಪಾವತಿ ಮಾಡಬಹುದಾಗಿದೆ.

Advertisement

ಸಮಯಕ್ಕೆ ಸರಿಯಾಗಿ ಬಿಲ್‌ ಪಾವತಿಸಿ
ಗ್ರಾಹಕರು ವಿದ್ಯುತ್‌ ಸಂಪರ್ಕ ಕಡಿತಕ್ಕೆ ಅವಕಾಶ ನೀಡದೆ ಸಮಯಕ್ಕೆ ಸರಿಯಾಗಿ ಸ್ವಯಂಪ್ರೇರಿತರಾಗಿ ವಿದ್ಯುತ್‌ ಬಿಲ್‌ ಬಾಕಿ ಪಾವತಿಸಬೇಕು. ಇಲ್ಲದಿದ್ದರೆ ವಿದ್ಯುತ್‌ ಕಡಿತ ಅನಿವಾರ್ಯವಾಗಲಿದೆ.
– ನರಸಿಂಹ ಪಂಡಿತ್‌, ಮೆಸ್ಕಾಂ ಸುಪರಿಂಟೆಂಡೆಂಟ್‌ ಎಂಜಿನಿಯರ್‌, ಉಡುಪಿ

15.39 ಕೋ.ರೂ. ಗೃಹ ಬಳಕೆದಾರರ ಬಿಲ್‌ ಬಾಕಿ
71.31 ಲ.ರೂ. ವಿವಿಧ ಇಲಾಖೆಗಳ ಬಿಲ್‌ ಬಾಕಿ

Advertisement

Udayavani is now on Telegram. Click here to join our channel and stay updated with the latest news.

Next