ದೊಡ್ಡಬಳ್ಳಾಪುರ: ಗೌರಿಬಿದನೂರಿನಿಂದ ದೊಡ್ಡಬಳ್ಳಾಪುರ ಕೈಗಾರಿಕಾ ಪ್ರದೇಶಕ್ಕೆ ಹಾಗೂ ತೊಂಡೆಬಾವಿಯಿಂದ ದೊಡ್ಡಬಳ್ಳಾಪುರಕ್ಕೆ ಸಂಪರ್ಕಿಸಲು ಬೃಹತ್ ಪ್ರಮಾಣದ ವಿದ್ಯುತ್ ಕಾರಿಡಾರ್ ನಿರ್ಮಿಸಲಾಗುತ್ತಿದೆ. ಈ ಬಗ್ಗೆ ರೈತರಿಗೆ ಯಾವುದೇ ಮಾಹಿತಿ ನೀಡದಿರುವುದನ್ನು ಖಂಡಿಸಿ ಹಾಗೂ ರೈತರ ಭೂಮಿಗೆ ಸೂಕ್ತ ಪರಿಹಾರ ನೀಡಲು ಒತ್ತಾಯಿಸಿ, ತಾಲೂಕು ಆಡಳಿತದ ಗಮನ ಸೆಳೆಯಲು ನ.10ರಂದು ತಾಲೂಕು ಕಚೇರಿ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ರಾಜ್ಯ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಜಿಂಕೆಬಚ್ಚಹಳ್ಳಿ ಸತೀಶ್ ತಿಳಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದಿಂದ ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೊಡ್ಡಬಳ್ಳಾಪುರ ತಾಲೂಕಿನ ತಳಗವಾರ, ಕೋಳೂರು, ಕಂಟನಕುಂಟೆ, ಅರಳುಮಲ್ಲಿಗೆ, ಅಣಗಲಪುರ ಸೇರಿ 20 ಗ್ರಾಮಗಳ ಮೂಲಕ ಹಾದು ಹೋಗಿದ್ದ ಅಲ್ಪ ಪ್ರಮಾಣದ ವಿದ್ಯುತ್ ಲೈನ್‌ಗೆ ಬದಲಾಗಿ ಬೃಹತ್ ಕಂಬಗಳು, ಬಹು ಮಾರ್ಗದ ಲೈನ್ ಅಳವಡಿಸಲು ವಿದ್ಯುತ್ ಇಲಾಖೆ ಮುಂದಾಗಿದೆ ಎಂದು ದೂರಿದರು.
ಕೃಷಿ ಮಾಡಲು ಕಷ್ಟ: ಹಲವಾರು ಕಾರಣಗಳಿಂದಾಗಿ ರೈತರಿಗೆ ಈಗ ಉಳಿದಿರುವುದೇ ತುಂಡು ಭೂಮಿ. ಅಲ್ಪಸ್ವಲ್ಪ ಕೃಷಿ ಭೂಮಿಯಲ್ಲಿ ಬೃಹತ್ ಗಾತ್ರದ ವಿದ್ಯುತ್ ಕಂಬಗಳನ್ನು ಅಳವಡಿಸಿದರೆ ಕೃಷಿ ಮಾಡಲು ಸಾಧ್ಯವೇ ಇಲ್ಲ. ಈ ಕಾಮಗಾರಿ ಕೆಪಿಟಿಸಿಎಲ್ ಮಾಡುತ್ತಿದೆಯೋ, ಗ್ರೀಡ್ ಮಾಡುತ್ತಿದೆಯೋ ಮಾಹಿತಿಯೇ ಇಲ್ಲವಾಗಿದೆ. ರೈತರಿಗೆ ಯಾವುದೇ ಮಾಹಿತಿ ನೀಡದೆ ಕಂಬಗಳನ್ನು ಅಳವಡಿಸಲು ಗುಂಡಿಗಳನ್ನು ತೋಡಲು ಮುಂದಾಗಿರುವುದು ಖಂಡನಿಯ ಎಂದು ದೂರಿದರು.
ಜಿಲ್ಲಾಡಳಿತವೇ ಹೊಣೆ: ಭೂಮಿ ಕಳೆದುಕೊಳ್ಳುವ ರೈತರಿಗೆ ನಿಯಮದ ಪ್ರಕಾರ ಸೂಕ್ತ ಪರಿಹಾರ ನೀಡದೆ ಹಾಗೂ ರೈತರ ಅನುಮತಿ ಇಲ್ಲದೆ ಜಮೀನಿಗೆ ಪ್ರವೇಶಿಸಿ ಗುರುತು ಮಾಡುತ್ತಿರುವುದು ಖಂಡನೀಯ. ಕಂದಾಯ ಇಲಾಖೆ ಅಧಿಕಾರಿಗಳು ಭೂಮಿ ಸರ್ವೆ ನಡೆಸಿ ಪರಿಹಾರ ನಿಗದಿ ಮಾಡಬೇಕಿದೆ, ಇದನ್ನು ಹೊರತು ಪಡಿಸಿ ಬಲವಂತದಿಂದ ಕಾಮಗಾರಿ ನಡೆಸಲು ಮುಂದಾದರೆ ಮುಂದಾಗುವ ಅನಾಹುತಕ್ಕೆ ಜಿಲ್ಲಾಡಳಿತವೇ ಹೊಣೆಯಾಗಲಿದೆ ಎಂದು ಎಚ್ಚರಿಕೆ ನೀಡಿದರು.
ಮಾಹಿತಿ ನೀಡದೇ ಗುರುತು: ರೈತ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಬಚ್ಚಹಳ್ಳಿ ಸತೀಶ್ ಮಾತನಾಡಿ, ಗೌರಿಬಿದನೂರಿನಿಂದ ದೊಡ್ಡಬಳ್ಳಾಪುರ ಕೈಗಾರಿಕಾ ಪ್ರದೇಶ ಮತ್ತು ತೊಂಡೆಬಾವಿಯಿಂದ ದೊಡ್ಡಬಳ್ಳಾಪುರಕ್ಕೆ 220 ರಿಂದ 400 ಕೆ.ವಿ. ವಿದ್ಯುತ್ ಕಾರಿಡಾರ್ ಮಾರ್ಗಗಳನ್ನು ಮಾಡಲಾಗುತ್ತಿದೆ. ಇದರ ಕುರಿತು ರೈತರಿಗೆ ಮಾಹಿತಿಯೇ ನೀಡದೆ, ಜಮೀನುಗಳಿಗೆ ಅತಿಕ್ರಮ ಪ್ರವೇಶಮಾಡಿ ಗುರುತು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಈ ಮುಂಚೆ ಅಳವಡಿಸಿದ ಕಂಬಗಳಿಂದ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ನೀಡಿಲ್ಲ. ನಿಯಮಗಳ ಅನ್ವಯ ಪರಿಹಾರ ನೀಡದೆ ಕಂಬಗಳ ಅಳವಡಿಕೆಗೆ ಮುಂದಾಗಿರುವುದು ಸರಿಯಲ್ಲ, ಕಂಬಗಳನ್ನು ಹಾಕುವ ಜಾಗದಲ್ಲಿ ತೆಂಗು, ಅಡಕೆ ಮೊದಲಾದ ಬೆಳೆ ಬೆಳೆಯಲು ಆಗುವುದಿಲ್ಲ. ಕೊಳವೆಬಾವಿ ಸಹ ಕೊರೆಸಲು ಆಗುವುದಿಲ್ಲ. ಇದಲ್ಲದೇ, ವಿದ್ಯುತ್ ಶಾಖ್‌ಗಳು ಆಗುವ ಸಂಭವಗಳು ಇವೆ. ಇವೆಲ್ಲವೂ ಸರ್ಕಾರದ ಗಮನಕ್ಕೆ ತರಬೇಕಿದೆ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳ, ತಹಶೀಲ್ದಾರ್ ಗಮನ ಸೆಳೆಯಲು ರೈತರೊಂದಿಗೆ ತಾಲೂಕು ಕಚೇರಿ ಮುತ್ತಿಗೆ ಹಾಕಲಾಗುತ್ತಿದೆ ಎಂದರು.
ಈ ವೇಳೆ ರೈತರಾದ ವಿಶ್ವೇಶ್ವರಯ್ಯ, ಮೋಹನ್ ಮೂರ್ತಿ, ಗೀತಾ ವಸಂತ್‌ಗೌಡ, ಮುನಿಯಪ್ಪ, ಕೆಂಪರಾಜು, ಅಶ್ವತ್ಥಪ್ಪ, ಮುನಿಯಪ್ಪ, ಕೆಂಪರಾಜ್ ಮತ್ತಿತರರು ಹಾಜರಿದ್ದರು.