Advertisement

ಬಿಟಿಪಿಎಸ್‌ 1ನೇ ಘಟಕದಲ್ಲಿ ವಿದ್ಯುತ್‌ ಉತ್ಪಾದನೆ ಆರಂಭ

07:15 AM Aug 20, 2017 | |

ಬಳ್ಳಾರಿ: ರಾಜ್ಯದಲ್ಲಿ ವಿದ್ಯುತ್‌ ಬೇಡಿಕೆ ಹೆಚ್ಚುತ್ತಿದ್ದು, ಬಿಟಿಪಿಎಸ್‌ನ 500 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದಿಸುವ ಒಂದನೇ ಘಟಕ ಶುಕ್ರವಾರ ಸಂಜೆಯಿಂದ ವಿದ್ಯುತ್‌ ಉತ್ಪಾದನೆ ಆರಂಭಿಸಿದೆ.

Advertisement

ಕುಡತಿನಿ ಪಟ್ಟಣದ ಬಳಿಯ ಬಳ್ಳಾರಿ ಶಾಖೋತ್ಪನ್ನ ವಿದ್ಯುತ್‌ ಕೇಂದ್ರದಲ್ಲಿ ಪ್ರಸ್ತುತ 700 ಮೆ.ವ್ಯಾ. ವಿದ್ಯುತ್‌ ಉತ್ಪಾದಿಸುವ 3ನೇ ಘಟಕದಲ್ಲಿ ಮಾತ್ರ ವಿದ್ಯುತ್‌ ಉತ್ಪಾದನೆ ಆಗುತ್ತಿದ್ದು, ಶುಕ್ರವಾರದ ವರೆಗೆ 650 ಮೆ. ವ್ಯಾ. ವಿದ್ಯುತ್‌ ಉತ್ಪಾದಿಸಿ ರಾಜ್ಯ ವಿದ್ಯುತ್‌ ಜಾಲಕ್ಕೆ ಸರಬರಾಜು ಮಾಡಲಾಗುತ್ತಿದೆ.

ಒಂದನೇ ಘಟಕದ ಆರಂಭದೊಡನೆ ಹೆಚ್ಚುವರಿ 500 ಮೆ.ವ್ಯಾ. ವಿದ್ಯುತ್‌ ಬಳಕೆದಾರರಿಗೆ ಲಭ್ಯವಾಗಲಿದೆ. ಬಿಟಿಪಿಎಸ್‌ ನಲ್ಲಿ ಶನಿವಾರ 500 ಮೆ.ವ್ಯಾ. ವಿದ್ಯುತ್‌ ಉತ್ಪಾದಿಸುವ ಒಂದನೇ ಘಟಕದಿಂದ 310 ಮೆ.ವ್ಯಾ ಹಾಗೂ 700 ಮೆ.ವ್ಯಾ. ಉತ್ಪಾದನಾ ಸಾಮರ್ಥಯದ ಮೂರನೇ ಘಟಕದಿಂದ 501 ಮೆ.ವ್ಯಾ. ವಿದ್ಯುತ್‌ ಉತ್ಪಾದಿಸಲಾಗುತ್ತಿದ್ದು, ಈ ಪ್ರಮಾಣವನ್ನು ಹಂತ ಹಂತವಾಗಿ ಹೆಚ್ಚಿಸಲು ನಿರ್ಧರಿಸಲಾಗಿದೆ.

ರಾಜ್ಯದ ಜಲವಿದ್ಯುತ್‌ ಹಾಗೂ ವೈಟಿಪಿಎಸ್‌ನ ತಾಂತ್ರಿಕ ದೋಷದಿಂದ ರಾಜ್ಯದ ಒಟ್ಟಾರೆ ವಿದ್ಯುತ್‌ ಉತ್ಪಾದನೆಯಲ್ಲಿ ಕುಸಿತವಾಗಿದ್ದು ಬಿಟಿಪಿಎಸ್‌ ಮೇಲೆ ಒತ್ತಡ ಹೆಚ್ಚಾಗಿದೆ ಎಂದು ಇಡಿ ಎಸ್‌.ಮೃತ್ಯುಂಜಯ ತಿಳಿಸಿದ್ದಾರೆ.

15 ದಿನಗಳಿಗಾಗುವಷ್ಟು ನೀರು ಸಂಗ್ರಹ: ಪ್ರಸ್ತುತ ಬಿಟಿಪಿಎಸ್‌ ಕೆರೆಯಲ್ಲಿ ಹದಿನೈದು ದಿನಗಳ ವಿದ್ಯುತ್‌ ಉತ್ಪಾದನೆಗೆ ಆಗುವಷ್ಟು ನೀರಿನ ಸಂಗ್ರಹವಿದೆ. ಈ ವರ್ಷ ತುಂಗಭದ್ರಾ ಜಲಾಶಯದಲ್ಲಿ ನೀರಿನ ಲಭ್ಯತೆ ಕಡಿಮೆ ಇರುವುದು ಹಾಗೂ ಬಿಟಿಪಿಎಸ್‌ನ ಪ್ರಮುಖ ಜಲಮೂಲವಾದ ಕೊಪ್ಪಳ ಜಿಲ್ಲೆಯ ಮರಳೀ ಹಳ್ಳದಿಂದ ಈ ವರ್ಷ ನೀರು ದೊರೆಯದಿರುವುದರಿಂದ ವಿದ್ಯುತ್‌ ಉತ್ಪಾದನೆಗೆ ತೊಡಕಾಗಲಿದೆ.

Advertisement

ತುಂಗಭದ್ರಾ ಬಲದಂಡೆ ಅಚ್ಚುಕಟ್ಟು ಪ್ರದೇಶದ ಮೇಲ್ಮಟ್ಟದ ಹಾಗೂ ಕೆಳ ಮಟ್ಟದ ಕಾಲುವೆಗಳಿಂದ ಬಿಟಿಪಿಎಸ್‌ ಕೆರೆಗೆ ನೀರು ತುಂಬಿಸಿಕೊಳ್ಳಲು ಅನುಮತಿ ಕೋರಿ ಕೆಪಿಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಕುಮಾರ ನಾಯ್ಕ ನೀರಾವರಿ ಇಲಾಖೆಯ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ ಎಂದು ತಿಳಿದುಬಂದಿದೆ.

ಬಿಟಿಪಿಎಸ್‌ನ 500 ಮೆಗಾವ್ಯಾಟ್‌ ಉತ್ಪಾದಿಸುವ 2 ಹಾಗೂ 700 ಮೆ. ವ್ಯಾ. ವಿದ್ಯುತ್‌ ಉತ್ಪಾದಿಸುವ 1 ಘಟಕಕ್ಕೆ ಮರಳೀ ಹಳ್ಳದಿಂದ 2.03 ಟಿಎಂಸಿ ಅಡಿ ನೀರು ಬಳಸಿಕೊಳ್ಳಬಹುದಾಗಿದೆ. ಈ ವರ್ಷ ಮರಳಿ ಹಳ್ಳದಿಂದ ನೀರು ದೊರೆಯುವುದು ಅನುಮಾನ ಇರುವುದರಿಂದ ಬಿಟಿಪಿಎಸ್‌ ಪಾಲಿನ ನೀರನ್ನು ತುಂಗಭದ್ರಾ ಬಲದಂಡೆ ಅಚ್ಚುಕಟ್ಟು ಪ್ರದೇಶದ ಕಾಲುವೆಗಳಿಂದ ಪಡೆಯಲು ವಿಶೇಷ ಅನುಮತಿಗಾಗಿ ಕೆಪಿಸಿಎಲ್‌ ಎಂಡಿ ನೀರಾವರಿ ಇಲಾಖೆ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಸರ್ಕಾರದಿಂದ ಬಿಟಿಪಿಎಸ್‌ಗೆ ಅಗತ್ಯವಿರುವ ನೀರು ಪಂಪ್‌ ಮಾಡಲು ವಿಶೇಷ ಅನುಮತಿ ದೊರೆಯುವ ವಿಶ್ವಾಸವಿದೆ.
– ಎಸ್‌.ಮೃತ್ಯುಂಜಯ,
ಇಡಿ, ಬಿಟಿಪಿಎಸ್‌, ಕುಡತಿನಿ

– ಎಂ.ಮುರಳಿಕೃಷ್ಣ

Advertisement

Udayavani is now on Telegram. Click here to join our channel and stay updated with the latest news.

Next