ಕೋಲಾರ: ಸುಮಾರು 4 ಲಕ್ಷಕ್ಕೂ ಅಧಿಕ ರೂ. ವಿದ್ಯುತ್ ಬಿಲ್ ಬಾಕಿ ಇಟ್ಟುಕೊಂಡಿದ್ದರಿಂದ ಬೆಸ್ಕಾಂ ಅಧಿಕಾರಿಗಳು ವಿದ್ಯುತ್ ಕಡಿತ ಮಾಡಿಕೊಂಡು ಹೋಗಿದ್ದರಿಂದ ಶುಕ್ರವಾರ ಇಡೀ ದಿನ ನಗರದ ತಾಲೂಕು ಕಚೇರಿಯಲ್ಲಿ ಕೆಲಸ ಕಾರ್ಯಗಳು ಸ್ಥಗಿತಗೊಂಡು ಸಾರ್ವಜನಿಕರು ಅನಗತ್ಯವಾಗಿ ಪರದಾಡಬೇಕಾಯಿತು.
ತಾಲೂಕು ಕಚೇರಿಯ ವಿದ್ಯುತ್ ಬಿಲ್ ಸುಮಾರು 4 ಲಕ್ಷ ರೂ.ಗೂ ಅಧಿಕ ಮೊತ್ತ ಪಾವತಿಸದೆ ನಿರ್ಲಕ್ಷ್ಯಸಿತ್ತು. ಇದರಿಂದ ಬೆಸ್ಕಾಂ ಸಿಬ್ಬಂದಿ ಶುಕ್ರವಾರ ಬೆಳಗ್ಗೆಯೇ ತಾಲೂಕು ಕಚೇರಿಗೆ ವಿದ್ಯುತ್ ಕಡಿತ ಮಾಡಿ ಹೋಗಿದ್ದರು. ವಿದ್ಯುತ್ ಕಡಿತಗೊಂಡ ನೆಪವನ್ನಿಟ್ಟುಕೊಂಡು ಕಚೇರಿಯ ಸಿಬ್ಬಂದಿ ಇಡೀ ದಿನ ವಿದ್ಯುತ ಇಲ್ಲ ಎಂಬ ನೆಪವೊಡ್ಡಿ ಕಳುಹಿಸುತ್ತಿದ್ದರು.ಸಾರ್ವಜನಿಕರು ವಿದ್ಯುತ್ ಈಗ ಬರಬಹುದು, ಆಗ ಬರಬಹುದು ಎಂದು ಸಂಜೆಯವರೆವಿಗೂ ಕಾದರೂ ಪ್ರಯೋಜನವಾಗಲಿಲ್ಲ.
ಸಾರ್ವಜನಿಕರು ಪರದಾಟ: ಸಾರ್ವಜನಿಕರ ದೂರಿನ ಮೇರೆಗೆ ತಹಶೀಲ್ದಾರ್ ನಾಗರಾಜ್‌ರಿಗೆ ಮಧ್ಯಾಹ್ನ 3.45ರ ಸುಮಾರಿಗೆ ಸಾರ್ವಜನಿಕರು ದೂರವಾಣಿ ಮಾಡಿ, ಕಚೇರಿಯಲ್ಲಿ ವಿದ್ಯುತ್ ಬಾಕಿ ಕಾರಣ ವಿದ್ಯುತ್ ಕಡಿತಗೊಂಡಿದ್ದು, ಸಾರ್ವಜನಿಕರು ಪರದಾಟ ನಡೆಸುತ್ತಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಇದಕ್ಕೆ ಉತ್ತರಿಸಿದ ತಹಶೀಲ್ದಾರ್ ನಾಗರಾಜ್, ಯಾರು ಹೇಳಿದ್ದು, ತಮ್ಮ ಕಚೇರಿಯಲ್ಲಿ ಈಗಲೂ ವಿದ್ಯುತ್ ಇದೆ ಎಂಬ ಸುಳ್ಳು ಮಾಹಿತಿಯನ್ನು ಉತ್ತರವಾಗಿ ನೀಡಿದ್ದಾರೆ.
ಇದಾದ ನಂತರ ಬೆಸ್ಕಾಂ ಅಧಿಕಾರಿಗಳಿಗೆ ದೂರವಾಣಿ ಮಾಡಿ ಕೇಳಿದಾಗ, ತಾಲೂಕು ಕಚೇರಿಯಲ್ಲಿ 4 ಲಕ್ಷಕ್ಕೂ ಅಧಿಕ ವಿದ್ಯುತ್ ಬಿಲ್ ಬಾಕಿ ಇಟ್ಟು ಕೊಂಡಿದ್ದರಿಂದ ತಮ್ಮ ಸಿಬ್ಬಂದಿ ವಿದ್ಯುತ್ ಕಡಿತ ಗೊಳಿಸಿದ್ದಾರೆ. ಸಾರ್ವಜನಿಕರ ಕೆಲಸ ಕಾರ್ಯ ಗಳಿಗೆ ಅಡ್ಡಿ ಯುಂಟಾಗುತ್ತಿದೆಯೆಂಬ ಕಾರಣ ಕ್ಕಾಗಿ ಮಧ್ಯಾಹ್ನದ ನಂತರ ವಿದ್ಯುತ್ ಮರು ಸಂಪರ್ಕ ಕಲ್ಪಿ ಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಉತ್ತರಿಸಿದರು.
ಕೊನೆಗೆ ಸುಮಾರು 4.05 ನಿಮಿಷಕ್ಕೆ ಕಡಿತಗೊಂಡಿದ್ದ ವಿದ್ಯುತ್ ಮರು ಸಂಪರ್ಕವಾಯಿತು. ಕಚೇರಿ ಸಿಬ್ಬಂದಿ ಯಥಾ ಪ್ರಕಾರ ಸರ್ವರ್ ಡೌನ್ ಇತ್ಯಾದಿ ಉತ್ತರಗಳನ್ನು ನೀಡಿ,ಬೆಳಗ್ಗೆಯಿಂದಲೂ ಕಾದು ನಿಂತಿದ್ದ ಸಾರ್ವಜನಿಕರನ್ನು ಬರಿ ಗೈಯಲ್ಲಿ ವಾಪಸ್ ಕಳುಹಿಸಿದರು.
ಇದೇ ಅವಧಿಯಲ್ಲೇ ಉಪ ವಿಭಾಗಾಧಿಕಾರಿ ವೆಂಕಟಲಕ್ಷ್ಮಮ್ಮನವರು ತಾಲೂಕು ಕಚೇರಿಗೆ ಸಾಮಾನ್ಯರಂತೆ ಭೇಟಿ ನೀಡಿ ಕಚೇರಿಯ ಅವ್ಯವಸ್ಥೆಗಳನ್ನು ಗಮನಿಸಿ, ತಹಶೀಲ್ದಾರ್ ಮತ್ತು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡು ಸಾರ್ವಜನಿಕರಲ್ಲಿ ಭರವಸೆ ಮೂಡಿಸಿದರು.