Advertisement

ಸುಳ್ಯದಲ್ಲಿ ಪವರ್‌ಕಟ್‌: ಚಿಮಿಣಿ ದೀಪಕ್ಕೆ ಎಣ್ಣೆಯ ಬರ

12:26 AM Feb 11, 2020 | mahesh |

ಸುಳ್ಯ: ಬೇಸಗೆಯ ಬಿಸಿ ಏರುತ್ತಿದ್ದ ಹಾಗೇ ಸುಳ್ಯದ ಮಾರುಕಟ್ಟೆಯಲ್ಲಿ ಹಳೆ ಕಾಲದ ಚಿಮಿಣಿ ದೀಪಕ್ಕೆ ಬೇಡಿಕೆ ಕುದುರುವುದುಂಟು. ಆದರೆ ಈ ಬಾರಿ ಸೀಮೆ ಎಣ್ಣೆಯೂ ವಿರಳವಾಗಿರುವ ಕಾರಣ ಬೆಳಕಿಗಾಗಿ ಪರ್ಯಾಯ ದಾರಿ ಹುಡುಕುವ ಸ್ಥಿತಿ ಇದೆ. ಪದೇ ಪದೇ ಕೈಕೊಡುವ ವಿದ್ಯುತ್‌ನ ಪರಿಣಾಮ ಬೆಳಕು ಕಂಡುಕೊಳ್ಳಲು ಜನರು ಹಳೆಯ ಕಾಲದ ಪರಿಕರಗಳಿಗೆ ಮೊರೆ ಇಡುವ ಸ್ಥಿತಿ ಉಂಟಾಗಿದೆ. 110 ಕೆ.ವಿ. ಸಬ್‌ಸ್ಟೇಷನ್‌ ನಿರ್ಮಾಣದ ನಿಧಾನಗತಿ ಪರಿಣಾಮ ಈ ಸಮಸ್ಯೆ ಉದ್ಭವಿಸಿದೆ.

Advertisement

ಅಘೋಷಿತ ವಿದ್ಯುತ್‌ ಕಡಿತ
ಇಂಧನ ಇಲಾಖೆ ಪ್ರಕಾರ ಲೋಡ್‌ ಶೆಡ್ಡಿಂಗ್‌ ಇಲ್ಲ. ಆದರೆ ಸುಳ್ಯದ ಬೇಡಿಕೆಗೆ ಅಗತ್ಯವಿರುವಷ್ಟು ವಿದ್ಯುತ್‌ ಸಂಗ್ರಹಿಸಿಡಲು ಧಾರಣ ಸಾಮರ್ಥ್ಯದ ಕೊರತೆ ಇರುವ ಕಾರಣ ಲೋಡ್‌ ಶೆಡ್ಡಿಂಗ್‌ ಅನಿವಾರ್ಯ ಎನ್ನುತ್ತಾರೆ ಮೆಸ್ಕಾಂ ಅಧಿಕಾರಿಗಳು. 33 ಕೆ.ವಿ. ಸಬ್‌ ಸ್ಟೇಷನ್‌ಗೆ ಪರ್ಯಾಯವಾಗಿ 110 ಕೆ.ವಿ. ಸಬ್‌ ಸ್ಟೇಷನ್‌ ನಿರ್ಮಾಣ ಅಥವಾ ಮಾಡಾವು ಸಬ್‌ಸ್ಟೇಷನ್‌ ಕಾರ್ಯಾರಂಭಗೊಳ್ಳುವುದರಿಂದ ಮಾತ್ರ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಅನ್ನುವುದು ಅಧಿಕಾರಿಗಳ ಮಾತು.

ಪ್ರಸ್ತುತ ದಿನದ 18 ತಾಸು ವಿದ್ಯುತ್‌ ನೀಡಲಾಗುತ್ತದೆ. ಇದರಲ್ಲಿ ಸಂಜೆ 6ರಿಂದ ಮುಂಜಾನೆ 6ರ ತನಕ ಸೇರಿ 12 ತಾಸು ಎನ್ನುತ್ತಾರೆ ಅಧಿಕಾರಿಗಳು. ಆದರೆ ಈ ಹೊತ್ತು ಗ್ರಾಹಕರಿಗೆ ಪ್ರಯೋಜನ ಅಷ್ಟಕ್ಕಷ್ಟೇ. ಹಗಲು ಹೊತ್ತಲ್ಲಿ 6 ತಾಸು ಮಾತ್ರ ದೊರೆಯುವ ಕಾರಣ ಅಗತ್ಯ ಕೆಲಸ ಕಾರ್ಯಗಳಿಗೆ ಅಡ್ಡಿ ಉಂಟಾಗುತ್ತಿದೆ ಎನ್ನುವುದು ಗ್ರಾಹಕರ ಅಳಲು. ಆದರೆ ಸುಳ್ಯದ ಟ್ರಾನ್ಸ್‌ಫಾರ್ಮರ್‌ 12.5 ಮೆಗಾವ್ಯಾಟ್‌ ಧಾರಣ ಸಾಮರ್ಥ್ಯ ಹೊಂದಿದೆ. ಇದರಲ್ಲಿ ನಗರಕ್ಕೆ 6 ಮೆ.ವ್ಯಾ., ಉಳಿದ ಎರಡು ಮೂರು ಫೀಡರ್‌ಗಳಿಗೆ 6 ಮೆ.ವ್ಯಾ. ಬಳಕೆ ಆಗುತ್ತದೆ. ಹಾಗಾಗಿ ಪವರ್‌ ಕಟ್‌ ಮಾಡಿ ಉಳಿದ ಫೀಡರ್‌ಗಳಿಗೆ ವಿದ್ಯುತ್‌ ಹರಿಸುವುದು ಅನಿವಾರ್ಯ ಎನ್ನುವುದು ಇಲಾಖೆಯ ವಾದ.

ತಾಲೂಕಿನ ಸ್ಥಿತಿ
ತಾಲೂಕಿನಲ್ಲಿ ಸುಳ್ಯ, ಬೆಳ್ಳಾರೆ, ಸುಬ್ರಹ್ಮಣ್ಯದಲ್ಲಿ 33 ಕೆ.ವಿ. ಸಬ್‌ಸ್ಟೇಷನ್‌ಗಳು ಇವೆ. 18 ಫೀಡರ್‌ಗಳಿವೆ. ತಾಲೂಕಿನಲ್ಲಿ 53 ಸಾವಿರಕ್ಕೂ ಅಧಿಕ ವಿದ್ಯುತ್‌ ಸಂಪರ್ಕಗಳಿವೆ. ಇದರಲ್ಲಿ 45 ಸಾವಿರ ಮನೆ, ವಾಣಿಜ್ಯ ಕಟ್ಟಡ, 12 ಸಾವಿರ ಕೃಷಿ ಬಳಕೆದಾರರು ಇದ್ದಾರೆ. ಸುಮಾರು 50 ವರ್ಷಗಳ ಹಿಂದೆ ಅಂದಿನ ಗ್ರಾಹಕರ ಅಂಕಿ-ಅಂಶಗಳಿಗೆ ತಕ್ಕಂತೆ ನಿರ್ಮಿಸಿದ 33 ಕೆ.ವಿ. ಸಬ್‌ಸ್ಟೇಷನ್‌ ಅನ್ನು ಈಗಲೂ ಅವಲಂಬಿಸಬೇಕಾಗಿದೆ. ಅಂದಿನಿಂದ ಹಲವು ಪಟ್ಟು ಬಳಕೆದಾರರ ಸಂಖ್ಯೆ ಹೆಚ್ಚಳವಾದರೂ ಪರಿಕರಗಳ ಜೋಡಣೆ ಆಗಿಲ್ಲ.

ಜಾಣ ನಡೆ
ವಿದ್ಯುತ್‌ ಇಲ್ಲ ಎಂದಾಕ್ಷಣ ಜನಪ್ರತಿನಿಧಿಗಳು, ಗ್ರಾಹಕರು ನೇರವಾಗಿ ಮುಗಿಬೀಳುವುದು ಮೆಸ್ಕಾಂ ಕಚೇರಿಗೆ. ಆದರೆ ವಾಸ್ತವ ಕಥೆ ಬೇರೆಯೇ ಇದೆ. ಈಗಿರುವ ವ್ಯವಸ್ಥೆಯಲ್ಲಿ ಸುಳ್ಯಕ್ಕೆ ಮೆಸ್ಕಾಂ ನಿಗದಿತ ಪ್ರಮಾಣದ ವಿದ್ಯುತ್‌ ನೀಡುತ್ತಿದೆ. ಅದಕ್ಕಿಂತ ಹೆಚ್ಚು ಬೇಕೆಂದರೆ, ವ್ಯವಸ್ಥೆ ಸುಧಾರಣೆ ಕಾಣಬೇಕು.

Advertisement

ಮೆಸ್ಕಾಂ ಸಿಬಂದಿಯನ್ನು ಪ್ರಶ್ನಿಸಿದರೆ ಸಾಲದು. ಸರಕಾರದ ಹಂತದಲ್ಲಿ ಜನಪ್ರತಿನಿಧಿಗಳು ಪಕ್ಷಾತೀತ ಪ್ರಯತ್ನ ಮಾಡಬೇಕು. ಇಲ್ಲದಿದ್ದರೆ ಇನ್ನೂ ಹತ್ತಾರು ವರ್ಷ ಪ್ರತಿಭಟನೆ, ಪ್ರಶ್ನೆಯಲ್ಲೇ ದಿನ ದೂಡಬೇಕು ಹೊರತು ಶಾಶ್ವತ ಪರಿಹಾರ ಸಿಗದು.

ಪಂಪ್‌ವೆಲ್‌ ಸೇತುವೆ, ಒಂಭತ್ತುಕೆರೆ ಬಳಿಕ ಸುಳ್ಯ ವಿದ್ಯುತ್‌ ಟ್ರೋಲ್‌!
ಪಂಪ್‌ವೆಲ್‌ ಮೇಲ್ಸೇತುವೆ, ಒಂಭತ್ತುಕೆರೆ ವಸತಿ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ ಆದ ಬೆನ್ನಲ್ಲೇ ಇದೀಗ ಸುಳ್ಯದ ವಿದ್ಯುತ್‌ ಕಣ್ಣಾಮುಚ್ಚಾಲೆ ಕುರಿತಂತೆ ಟ್ರೋಲ್‌ ಮಾಡಲಾಗಿದೆ. ಮದುವೆ ಆಗುತ್ತೆನೆಂದ ಹೆಣ್ಣು ಕೈ ಕೊಟ್ಟಳೆಂದು ಯುವಕ ಆತ್ಮಹತ್ಯೆ ಮಾಡಲು ಟ್ರಾನ್ಸ್‌ಫಾರ್ಮರ್‌ ಅಪ್ಪಿಕೊಂಡರೂ ಏನೂ ಆಗಲಿಲ್ಲ. ಏಕೆಂದು ಎಂದು ಪ್ರಶ್ನಿಸಿದಾಗ, ವಿದ್ಯುತ್‌ ಇಲ್ಲದ ಸುಳ್ಯದಲ್ಲಿ ಟ್ರಾನ್ಸ್‌ಫಾರ್ಮರ್‌ ತಬ್ಬಿದ ಕಾರಣ ಯುವಕನಿಗೆ ಏನೂ ಆಗಿಲ್ಲ ಎಂಬರ್ಥದಲ್ಲಿ ಇಬ್ಬರ ಸಂಭಾಷಣೆಯುಳ್ಳ ವೀಡಿಯೋ ಮಾಡಿ ಟ್ರೋಲ್‌ ಮಾಡಲಾಗಿದ್ದು, ಸಾಕಷ್ಟು ವೈರಲ್‌ ಆಗಿ ಜಾಲತಾಣದಲ್ಲಿ ಚರ್ಚೆಗೀಡಾಗಿದೆ.

ಕೃಷಿಕರಿಗೆ ಆತಂಕ
ಈಗಲೇ ವಿದ್ಯುತ್‌ ಕಣ್ಣಮುಚ್ಚಾಲೆ ಆರಂಭವಾದರೆ, ಎಪ್ರಿಲ್‌-ಮೇ ತಿಂಗಳ ಕಥೆ ಹೇಗಿರಬಹುದು ಎಂಬ ಆತಂಕ ಕೃಷಿಕರದ್ದು. ಹೊಳೆ, ತೋಡು, ನದಿಗಳಲ್ಲಿ ನೀರಿಲ್ಲ ಎಂದೂ ಕೊಳವೆ ಬಾವಿ ತೆಗೆದು ತಾತ್ಕಾಲಿಕವಾಗಿ ನೀರಿನ ಸಮಸ್ಯೆಗೆ ಪರಿಹಾರ ಸಿಕ್ಕಿತ್ತು ಎಂದು ಸಂಭ್ರಮಿಸಲು ವಿದ್ಯುತ್‌ ಬಿಡದು. ಪದೇ-ಪದೇ ಪವರ್‌ ಇದಕ್ಕೆ ಕಾರಣ ಎನ್ನುತ್ತಾರೆ ಕೃಷಿಕರು.

18 ತಾಸು ವಿದ್ಯುತ್‌ ಪೂರೈಕೆ
ಈಗ 18 ತಾಸು ವಿದ್ಯುತ್‌ ನೀಡುತ್ತಿದ್ದೇವೆ. ಧಾರಣ ಸಾಮರ್ಥ್ಯದ ಕೊರತೆಯಿಂದ ಕೆಲವೊಮ್ಮೆ ಸಮಸ್ಯೆ ಉಂಟಾಗುವುದು ಇದೆ. ಆದರೆ ಕೆಲ ದಿನಗಳಲ್ಲಿ ಇದಕ್ಕೆ ಪರಿಹಾರ ಕಂಡುಕೊಳ್ಳಲಾಗುವುದು.
– ಹರೀಶ್‌, ಪ್ರಭಾರ ಎ.ಇ., ಮೆಸ್ಕಾಂ ಸುಳ್ಯ

  ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next