Advertisement
ಕುಡಿಯುವ ನೀರಿಗಾಗಿ ಮಹಾರಾಷ್ಟ್ರದ ಉಜಿನಿ ಜಲಾಶಯದಿಂದ ಭೀಮಾ ನದಿಗೆ ಹರಿಸುತ್ತಿರುವ ನೀರನ್ನು ಕೃಷಿ ಬಳಕೆ ಮಾಡದಂತೆ ಜಿಲ್ಲಾಡಳಿತ ನಿಷೇಧಾಜ್ಞೆ ಜಾರಿಗೊಳಿಸಿದೆ. ಅಲ್ಲದೇ ನದಿ ಪಾತ್ರದ ಹಳ್ಳಿಗಳ ವಿದ್ಯುತ್ ಸಂಪರ್ಕ ಕಡಿತ ಮಾಡಲಾಗಿದೆ.
Related Articles
Advertisement
ಇದರಿಂದ ಭೀಮಾ ನದಿ ನೀರನ್ನು ಅವಲಂಬಿತ ಬಹು ಹಳ್ಳಿ ಕುಡಿಯುವ ನೀರಿನ ಯೋಜನೆಗಳಿಗೂ ನೀರಿನ ಸಮಸ್ಯೆ ಎದುರಾಗಿದೆ. ಅಧಿಕಾರಿಗಳ ಈ ಕ್ರಮಕ್ಕೆ ಕುಪಿತರಾಗಿರುವ ಭೀಮಾ ನದಿ ತೀರದ ಹಳ್ಳಗಳ ರೈತರು ಆಕ್ರೋಶಗೊಂಡು ಬೀದಿಗಿಳಿದಿದ್ದಾರೆ.
ಶನಿವಾರ ಚಡಚಣ ತಾಲೂಕ ಕೇಂದ್ರದಲ್ಲಿರುವ ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿದ ರೈತರು, ಅಧಿಕಾರಿಗಳ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದರು. ಈ ಹಂತದಲ್ಲಿ ಸ್ಥಳಕ್ಕೆ ಆಗಮಿಸಿ ತಹಶೀಲ್ದಾರರು, ಹೆಸ್ಕಾಂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ರೈತರು, ಭೀಕರ ಬರ ಪರಿಸ್ಥಿತಿ ಎದುರಾಗಿರುವ ಈ ಹಂತದಲ್ಲಿ ನೀರಿಲ್ಲದೇ ಜನರು ಬದುಕುವುದಾದೂ ಹೇಗೆ ಎಂದು ಕಿಡಿ ಕಾರಿದರು.
ಮೇಲಾಧಿಕಾರಿಗಳ ಆದೇಶದಂತೆ ನಾವು ಕರ್ತವ್ಯ ನಿರ್ವಹಿಸಿದ್ದೇವೆ ಎಂದು ಅಧಿಕಾರಿಗಳು ಹೇಳುತ್ತಲೇ, ರೈತರು ಹಾಗೂ ಅಧಿಕಾರಿಗಳ ಮಧ್ಯೆ ಮಾತಿನ ಚಕಮಕಿ ನಡೆಯಿತು.
ಜಿಲ್ಲಾಡಳಿತ ನದಿ ನೀರನ್ನು ಕೃಷಿ ಬಳಕೆ ಮಾಡದಂತೆ ಕ್ರಮ ಕೈಗೊಳ್ಳಬೇಕೆ ಹೊರತು, ನದಿ ತೀರತ ಹಳ್ಳಿಗಳನ್ನೇ ಕತ್ತಲಲ್ಲಿ ಕೂಡಿ ಹಾಕುವುದಲ್ಲ. ನಮ್ಮ ಭಾಗದಲ್ಲಿ ನದಿ ನೀರು ಮಾತ್ರವಲ್ಲದೇ ಕೊಳವೆ ಭಾವಿ, ಕೆರೆಗಳಿಂದ ರೈತರು ಕೃಷಿ ಮಾಡಿಕೊಂಡಿದ್ದು, ಅಂಥ ರೈತರು, ಬೆಳೆಗಳ ಪರಿಸ್ಥಿತಿ ಏನು ಎಂದು ಪ್ರಶ್ನಿಸಿದರು.
ಆದರೆ ಮುನ್ಸೂಚನೆ ಇಲ್ಲದೇ ಅಧಿಕಾರಿಗಳು ವಿದ್ಯುತ್ ಸಂಪರ್ಕ ಕಡಿತ ಮಾಡಿರುವುದು ಬೆಳೆದುನಿಂತ ಬೆಳೆಗಳ ಸಂರಕ್ಷಣೆಗೆ ಸಂಕಷ್ಟ ತಂದಿದೆ ಎಂದು ವಾಗ್ವಾದ ನಡೆಸಿದರು. ವಿದ್ಯುತ್ ಸಂಪರ್ಕ ಕಡಿತದಿಂದ ನದಿ ನೀರು ಆಧಾರಿತ ಬಹುಹಳ್ಳಿ ಕುಡಿಯುವ ನೀರಿನ ಯೋಜನೆಗಳೂ ಸ್ಥಗಿತಗೊಂಡಿವೆ ಎಂದು ಕಿಡಿ ಕಾರಿದರು.
ಈ ಹಂತದಲ್ಲಿ ಭದ್ರತೆಗಾಗಿ ಸ್ಥಳಕ್ಕೆ ಧಾವಿಸಿದ ಪೊಲೀಸ್ ಅಧಿಕಾರಿಗಳ ವಾಹನಕ್ಕೆ ದೀರ್ಘ ದಂಡ ನಮಸ್ಕಾರ ಹಾಕಿದ ವೃದ್ದ ರೈತರೊಬ್ಬರು, ಜನ-ಜಾನುವಾರುಗಳು ಬದುಕುವುದಕ್ಕೂ ನೀರಿಲ್ಲ ದುಸ್ಥಿತಿ ತಂದಿದ್ದೀರಿ. ನಮ್ಮ ಸಮಸ್ಯೆ ಇತ್ಯರ್ಥವಾಗದ ಹೊರತು ಸ್ಥಳದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದರು.
ಕೂಡಲೇ ಜಿಲ್ಲಾಡಳಿತ ತಮ್ಮ ಗ್ರಾಮಗಳಿಗೆ ವಿದ್ಯುತ ಸಂಪರ್ಕ ಕಲ್ಪಿಸದಿದ್ದಲ್ಲಿ ಬೆಳೆದುನಿಂದ ಬೆಳೆಗಳನ್ನು ಉಳಿಸಿಕೊಳ್ಳಲಾಗದೇ ರೈತರು ಆತ್ಮಹತ್ಯೆ ಮಾಡಿಕೊಳ್ಳುವುದು ಖಚಿತ ಎಂದು ಎಚ್ಚರಿಸಿದ್ದಾರೆ.
ಜಿಲ್ಲಾಡಳಿತ ನಿಷೇದಾಜ್ಞೆ ತೆರವು ಮಾಡಬೇಕು. ಕಡಿತಗೊಂಡಿರುವ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡುವುದಾಗಿಯೂ ರೈತರು ಎಚ್ಚರಿಸಿದರು. ಆಗ ಅಧಿಕಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ರೈತರ ಮನವೊಲಿಸಿ, ರಸ್ತೆಗೆ ಅಡ್ಡ ಮಲಗಿದ್ದ ರೈತರನ್ನು ಸ್ಥಳದಿಂದ ತೆರವುಗೊಳಿಸಿದರು.
ಉಮರಾಣಿ ಗ್ರಾಮದ ಜಗ್ಗು ಸಾಹುಕಾ ಭೈರಗೊಂಡ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಭೀಮಾ ತೀರದ ಹಳ್ಳಿಗಳ ನೂರಾರು ರೈತರು ಪಾಲ್ಗೊಂಡಿದ್ದರು.