Advertisement

ಪಿಲಿಕಲ: ಅಂತೂ ಮಲೆಕುಡಿಯ ಕುಟುಂಬಗಳಿಗೆ ವಿದ್ಯುತ್‌ ಬಂತು

07:50 AM Aug 05, 2017 | Team Udayavani |

ಬೆಳ್ತಂಗಡಿ: ಶತಮಾನಗಳಿಂದ ವಿದ್ಯುತ್‌ ಸೇರಿದಂತೆ ಮೂಲಸೌಕರ್ಯಗಳಿಂದ ವಂಚಿತರಾಗಿರುವ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ನಿವಾಸಿಗಳು ಕತ್ತಲೆಯಿಂದ ಬೆಳಕಿನೆಡೆಗೆ ಬಂದ ಐತಿಹಾಸಿಕ ಕ್ಷಣಕ್ಕೆ ಸವಣಾಲು ಗ್ರಾಮದ ಪಿಲಿಕಲ ಸಾಕ್ಷಿಯಾಯಿತು.

Advertisement

ಇತರ ಗ್ರಾಮಗಳಿಗೂ ವಿಸ್ತರಣೆ
ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಸವಣಾಲು – ನಡ ಗ್ರಾಮದ ಕಂಬುಜೆ, ಪಿಲಿಕಲ ಪ್ರದೇಶದಲ್ಲಿ ಒಂಬತ್ತು ಮಲೆಕುಡಿಯ ಕುಟುಂಬಗಳಿಗೆ ಸುಮಾರು 23 ಲಕ್ಷ ವೆಚ್ಚದ ವಿದ್ಯುದೀಕರಣ ಯೋಜನೆಯನ್ನು ಶಾಸಕ, ಸಣ್ಣಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ವಸಂತ ಬಂಗೇರ ಅವರು ಉದ್ಘಾಟಿಸಿ ಮಾತನಾಡಿ, ದ.ಕ. ಜಿಲ್ಲೆಯ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಕುದುರೆಮುಖ ರಾಷ್ಟ್ರೀಯ ಉದ್ಯಾನವನದೊಳಗಿನ ಆದಿವಾಸಿ ಮಲೆಕುಡಿಯ ಕುಟುಂಬಗಳಿಗೆ ವಿದ್ಯುತ್‌ ಸಂಪರ್ಕ ನೀಡಲಾಗಿದೆ. ಇದನ್ನು ತಾಲೂಕಿನ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಗ್ರಾಮಗಳಿಗೂ ವಿಸ್ತರಿಸಲಾಗುವುದು ಎಂದರು.

ತಾ|ನ ಎಲ್ಲ ಮನೆಗೂ ವಿದ್ಯುತ್‌ ಗುರಿ
ನನ್ನ ಅವಧಿಯಲ್ಲಿ ತಾಲೂಕಿನ ಎಲ್ಲ ಮನೆಗಳು ವಿದ್ಯುತ್‌ನಿಂದ ಬೆಳಗುವಂತಾಗಬೇಕು. ಈಗಾಗಲೇ ಶೇ. 95 ಮನೆಗಳು ವಿದ್ಯುತ್‌ ಸಂಪರ್ಕ ಹೊಂದಿದ್ದು, ಉಳಿದ ಮನೆಗಳಿಗೆ ವಿದ್ಯುತ್‌ ಸಂಪರ್ಕ ನೀಡಲಾಗುವುದು ಎಂದರು.

ಮೊದಲ ಸ್ಥಾನ
ಜಿಲ್ಲಾ ಪಂಚಾಯತ್‌ ಸದಸ್ಯ ಶೇಖರ್‌ ಕುಕ್ಕೇಡಿ ಮಾತನಾಡಿ, ಈ ಭಾಗಕ್ಕೆ ವಿದ್ಯುತ್‌ ಸಂಪರ್ಕ ಕಲ್ಪಿಸಲು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ  ಸಲ್ಲಿಸಿದರು. ತಾಲೂಕಿನಲ್ಲಿ ಅತೀ ಹೆಚ್ಚು ಆದಿವಾಸಿ, ದಲಿತ ಸಮುದಾಯದ ಕಾಲನಿಗಳು ಅಭಿವೃದ್ಧಿಗೊಂಡಿದ್ದು, ದಲಿತ, ಆದಿವಾಸಿ ಪ್ರದೇಶಗಳ ಅಭಿವೃದ್ಧಿಯಲ್ಲಿ ಜಿಲ್ಲೆಯಲ್ಲಿಯೇ ನಮ್ಮ ತಾಲೂಕು ಮೊದಲ ಸ್ಥಾನದಲ್ಲಿದೆ ಎಂದರು. ಈ ಸಂದರ್ಭದಲ್ಲಿ ವಿದ್ಯುತ್‌ ಸಂಪರ್ಕ ನೀಡುವಲ್ಲಿ ಮಹತ್ವದ ಪಾತ್ರ ವಹಿಸಿದ ಶಾಸಕ ಕೆ. ವಸಂತ ಬಂಗೇರ ಅವರನ್ನು ಸಮ್ಮಾನಿಸಲಾಯಿತು.

ತಾಲೂಕು ಪಂಚಾಯತ್‌ ಉಪಾಧ್ಯಕ್ಷೆ ವೇದಾವತಿ, ತಾ.ಪಂ. ಸದಸ್ಯೆ ಜಯಶೀಲ, ನಡ ಗ್ರಾ.ಪಂ. ಅಧ್ಯಕ್ಷೆ ಪೂರ್ಣಿಮಾ, ಮೆಸ್ಕಾಂ ಎಂಜಿನಿಯರ್‌ ಸಜಿ ಕುಮಾರ್‌ ಉಪಸ್ಥಿತರಿದ್ದರು. ಸುಬ್ರಹ್ಮಣ್ಯ ಭಟ್‌ ಸ್ವಾಗತಿಸಿ, ವಂದಿಸಿದರು. ಜಯಾನಂದ ಪಿಲಿಕಲ ಸಹಕರಿಸಿದರು. ನಡ, ಸವಣಾಲು ಗ್ರಾಮದ ಗ್ರಾಮ ಪಂಚಾಯತ್‌ ಸದಸ್ಯರು, ಎರಡೂ ಗ್ರಾಮಗಳ ಗ್ರಾಮಸ್ಥರು, ವಿದ್ಯುತ್‌ ಸಂಪರ್ಕವನ್ನು ಕೊಡಿಸುವಲ್ಲಿ ಪ್ರಥಮದಿಂದ ಕೊನೆಯವರೆಗೂ ಸಂಪೂರ್ಣ ಸಹಕಾರವನ್ನು ನೀಡಿದ ದಲಿತ ಮುಖಂಡರಾದ ಬಿ.ಕೆ. ವಸಂತ್‌ ಬೆಳ್ತಂಗಡಿ, ದಲಿತ ಹಕ್ಕುಗಳ ಹೋರಾಟಗಾರ ಶೇಖರ್‌ ಲಾೖಲ  ಮತ್ತಿತರರು ಉಪಸ್ಥಿತರಿದ್ದರು.

Advertisement

ಎಬಿ ಕೇಬಲ್‌ ಅಳವಡಿಕೆ 
ಸುಮಾರು 23 ಲಕ್ಷ ರೂ. ವೆಚ್ಚದ ವಿದ್ಯುದ್ದೀಕರಣ ಯೋಜನೆಯಲ್ಲಿ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ 1 ಕಿ.ಮೀ ದೂರ ಎಬಿ ಕೇಬಲ್‌ ಅಳವಡಿಸಲಾಗಿದೆ. 1 ಕಿ.ಮೀ ಎಚ್‌ಟಿ ಲೆ„ನ್‌, 2 ಕಿ.ಮೀ . ಎಲ್‌ಟಿ ಲೈನ್‌ ಎಳೆಯಲಾಗಿದೆ. 25 ಕೆ.ವಿ. ಸಾಮರ್ಥ್ಯದ ವಿದ್ಯುತ್‌ ಪರಿವರ್ತಕವನ್ನು ಅಳವಡಿಸಲಾಗಿದ್ದು, ಎಬಿ ಕೇಬಲ್‌ ಅಳವಡಿಕೆಯಿಂದ ಮರದ ಕೊಂಬೆಗಳು ಬಿದ್ದರೂ ಯಾವುದೇ ತೊಂದರೆ ಸಂಭವಿಸುವುದಿಲ್ಲ .
– ಶಿವಶಂಕರ್‌, ಮೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರ 

Advertisement

Udayavani is now on Telegram. Click here to join our channel and stay updated with the latest news.

Next