Advertisement

ಹಸಿವು ಸೂಚ್ಯಂಕದ ಕನ್ನಡಿ

08:25 AM Oct 15, 2018 | |

ಬಡತನ ಕಡಿಮೆಯಾಗಿದೆ ಆದರೆ ಹಸಿದವರ ಸಂಖ್ಯೆ ಕಡಿಮೆಯಾಗಿಲ್ಲ ಎಂದರೆ ಏನರ್ಥ? ಜಿಎಚ್‌ಐ ಪಟ್ಟಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಉತ್ತರವೇನು? ಗ್ಲೋಬಲ್‌ ಹಂಗರ್‌ ಇಂಡೆಕ್ಸ್‌-2018ರಲ್ಲಿ ಭಾರತದ ಸ್ಥಿತಿ ಬಾಂಗ್ಲಾದೇಶ, ನೇಪಾಳಕ್ಕಿಂತಲೂ ಕೆಟ್ಟದಾಗಿದೆ.

Advertisement

ಜಗತ್ತಿನಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲೊಂದು ಎಂಬ ಹೆಗ್ಗಳಿಕೆ ಪಡೆದಿದೆ ಭಾರತ. ಆದರೆ ಈ ಬೆಳವಣಿಗೆಯನ್ನು ದೇಶದ ಬದಲಾದ ಚಿತ್ರಣದ ಪ್ರತಿಬಿಂಬ ಎಂದೇನೂ ಹೇಳಲು ಆಗುವುದಿಲ್ಲ.  ಆರ್ಥಿಕವಾಗಿ ದೇಶ ಎಷ್ಟೇ ಬೆಳೆದರೂ ಅಸಮಾನತೆ ಮಾತ್ರ ಕಡಿಮೆಯಾಗುತ್ತಿಲ್ಲ. ಈ ಮಾತಿಗೆ ಸಾಕ್ಷಿಯಾಗಿ ನಿಲ್ಲುತ್ತಿದೆ 2018ರ “ಜಾಗತಿಕ ಹಸಿವು ಸೂಚ್ಯಂಕ’ದಲ್ಲಿ(ಜಿಎಚ್‌ಐ) ಭಾರತ ಪಡೆದಿರುವ ಸ್ಥಾನ. ಒಟ್ಟು 119 ರಾಷ್ಟ್ರಗಳ ಪೈಕಿ ಭಾರತ 103ನೇ ಸ್ಥಾನದಲ್ಲಿದೆ. 2017ರ ಜಾಗತಿಕ ಹಸಿವು ಸೂಚ್ಯಂಕದ ಪಟ್ಟಿಯಲ್ಲಿ ಒಟ್ಟು 31.4 ಅಂಕ ಗಳಿಕೆಯ ಮೂಲಕ ಭಾರತ ನೂರನೇ ಸ್ಥಾನಕ್ಕೆ ಕುಸಿದಿತ್ತು. ಈಗ ಒಂದು ವರ್ಷದಲ್ಲಿ ಮತ್ತೆ ಮೂರು ಸ್ಥಾನದಲ್ಲಿ ಕುಸಿತ ಕಂಡಿರುವುದು ಕಳವಳಕ್ಕೆ ದೂಡುವಂಥ ವಿಷಯ.

ಗ್ಲೋಬಲ್‌ ಹಂಗರ್‌ ಇಂಡೆಕ್ಸ್‌-2018ರಲ್ಲಿ ಭಾರತದ ಸ್ಥಿತಿ ನೇಪಾಳ ಮತ್ತು ಬಾಂಗ್ಲಾದೇಶದಂಥ ನೆರೆಯ ರಾಷ್ಟ್ರಗಳಿಗಿಂತಲೂ ಕೆಟ್ಟದಾಗಿದೆ. ನೇಪಾಳ 72ನೇ ಸ್ಥಾನದಲ್ಲಿ, ಬಾಂಗ್ಲಾದೇಶ 86ನೇ ಸ್ಥಾನದಲ್ಲಿದ್ದರೆ, ಚೀನಾ 25ನೇ ಸ್ಥಾನದಲ್ಲಿದೆ. ಗಮನಿಸಬೇಕಾದ  ಅಂಶವೆಂದರೆ ಪಾಕಿಸ್ತಾನ 106ನೇ ಸ್ಥಾನದಲ್ಲಿದೆ ಎನ್ನುವುದು. ಆದರೆ ಇದೇನೂ ಬೆನ್ನುತಟ್ಟಿಕೊಳ್ಳುವಂಥ ಸಂಗತಿಯಲ್ಲ. 

ಜಗತ್ತಿನ ವಿವಿಧ ರಾಷ್ಟ್ರಗಳಲ್ಲಿ ಆಹಾರ ಸೇವನೆಯ ಸ್ಥಿತಿಯನ್ನು ವಿಸ್ತೃತವಾಗಿ ಅಧ್ಯಯನಿಸಿ ಪ್ರತಿ ವರ್ಷವೂ ಈ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ. ಒಂದು ದೇಶದಲ್ಲಿ ಜನರು ಯಾವ ರೀತಿಯ ಆಹಾರ ಸೇವಿಸುತ್ತಾರೆ, ಅವರಿಗೆ ಪೂರಕ ಪೌಷ್ಟಿಕಾಂಶಗಳು ಸಿಗುತ್ತಿವೆಯೇ, ಆಹಾರದ ಗುಣಮಟ್ಟ ಹೇಗಿದೆ, ಅದು ಎಷ್ಟು ಪ್ರಮಾಣದಲ್ಲಿ ಸಿಗುತ್ತಿದೆ ಎನ್ನುವುದನ್ನು ಪರಿಗಣಿಸಿ ಈ ವರದಿಯನ್ನು ಸಿದ್ಧಪಡಿಸಲಾಗುತ್ತದೆ.   ಇಲ್ಲಿ ನೆನಪಿಸಿಕೊಳ್ಳಬೇಕಾದ ವಿಚಾರವೆಂದರೆ ಕಳೆದ ವರ್ಷವೂ ಜಾಗತಿಕ ಹಸಿವು ಸೂಚ್ಯಂಕ ಬಹಳ ಸುದ್ದಿಯಾಗಿತ್ತು. ಮೋದಿ ಸರಕಾರದ ವೈಫ‌ಲ್ಯಕ್ಕೆ ಇದು ಕೈಗನ್ನಡಿ ಎಂದು ಮಾಧ್ಯಮಗಳು ವಿಶ್ಲೇಷಿಸಿದ್ದವು. 

2014ರಲ್ಲಿ ಭಾರತ 55ನೇ ಸ್ಥಾನದಲ್ಲಿತ್ತು, ಮೋದಿ ಅಧಿಕಾರಕ್ಕೆ ಬಂದ ನಂತರ ದೇಶದಲ್ಲಿ ಬಡತನದ ಪ್ರಮಾಣ ವಿಪರೀತವಾಗಿದೆ ಎಂದು ಈ ವರದಿಯ ಆಧಾರದಲ್ಲಿ ಟೀಕಿಸಲಾಯಿತು. ಆದರೆ  ನಂತರ ತಿಳಿದದ್ದೇನೆಂದರೆ, ಕಳೆದ ವರ್ಷದ ಸೂಚ್ಯಂಕವನ್ನು ಭಾರತೀಯ ಮಾಧ್ಯಮಗಳು ತಪ್ಪಾಗಿ ವ್ಯಾಖ್ಯಾನಿಸಿದ್ದವು ಎನ್ನುವುದು. ಕಳೆದ ಬಾರಿಯ ಸೂಚ್ಯಂಕದಲ್ಲಿ 5ಕ್ಕಿಂತ ಕಡಿಮೆ ಶ್ರೇಣಿ ಹೊಂದಿರುವ ದೇಶಗಳನ್ನು ಪಟ್ಟಿಯಿಂದ ಕೈಬಿಟ್ಟು ಪ್ರತ್ಯೇಕ ಸೂಚ್ಯಂಕ ಸಿದ್ಧಪಡಿಸಲಾಗಿತ್ತು. 5ಕ್ಕಿಂತ ಕಡಿಮೆ ಶ್ರೇಣಿ ಪಡೆದ ದೇಶಗಳನ್ನೂ ಪಟ್ಟಿಯಲ್ಲಿ ಸೇರಿಸಿದ್ದರೆ, ಈ ಲೆಕ್ಕಾಚಾರದ ಪ್ರಕಾರ ಭಾರತ 2013ರಲ್ಲಿ 105ನೇ ಸ್ಥಾನದಲ್ಲಿರಬೇಕಿತ್ತು. 

Advertisement

ಹಾಗಾಗಿ ಇದರಿಂದ ಸೂಚ್ಯಂಕದಲ್ಲಿ ಭಾರತದ ಸ್ಥಾನದಲ್ಲಿ ಭಾರೀ ಬದಲಾವಣೆಯಾಗಿಲ್ಲ. ಆದರೆ ಇದೇನೂ ಸಮಾಧಾನ ಅಥವಾ ಸಂತಸ ಪಡುವ ವಿಷಯವೇನೂ ಅಲ್ಲ.  ಏಕೆಂದರೆ ಇಷ್ಟೆಲ್ಲ ಬೃಹತ್‌ ಔದ್ಯೋಗಿಕ, ಆಹಾರ ಕಾರ್ಯಕ್ರಮಗಳು ಮತ್ತು ನೀತಿಗಳ ಹೊರತಾಗಿಯೂ  ಭಾರತದಲ್ಲಿ ಹಸಿದು ನಿದ್ದೆಗೆ ಹೋಗುವವರ ಪ್ರಮಾಣ ಈ ಪರಿಯಿದೆ ಎನ್ನುವುದೇ ದುಃಖದ ವಿಷಯ. ದೇಶದ ಒಂದು ವರ್ಗ ಬದಲಾವಣೆಯ ಓಟದಲ್ಲಿ  ಮುನ್ನುಗ್ಗುತ್ತಾ ಸಾಗುತ್ತಿದ್ದರೆ, ಇನ್ನೊಂದು ವರ್ಗ ಓಡುವುದಕ್ಕೂ ತ್ರಾಣವಿಲ್ಲದೇ ಕುಸಿದುಕೂಡುತ್ತಿರುವುದು ಕಟುಸತ್ಯ.

ಇಲ್ಲಿ ಗೊಂದಲ ಮೂಡಿಸುತ್ತಿರುವುದೆಂದರೆ, ವಿಶ್ವ ಬಡತನ ಸೂಚ್ಯಂಕವು “2005-06  ಮತ್ತು 2015-16ರ ನಡುವೆ ಭಾರತದಲ್ಲಿ 27 ಕೋಟಿ ಜನರು ಬಡತನ ರೇಖೆಯನ್ನು ದಾಟಿ ಬಂದಿದ್ದಾರೆ’ ಎಂದು ಹೇಳಿತ್ತು. ಇತ್ತೀಚೆಗಷ್ಟೇ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಭಾರತ ಲಕ್ಷಾಂತರ ಜನರನ್ನು ಬಡತನದ ರೇಖೆಯಿಂದ ಹೊರತಂದಿದೆ ಎಂದು ಶ್ಲಾ ಸಿದ್ದರು.  ಬಡತನ ಕಡಿಮೆಯಾಗಿದೆ ಆದರೆ ಹಸಿದವರ ಸಂಖ್ಯೆ ಕಡಿಮೆಯಾಗಿಲ್ಲ ಎಂದರೆ ಏನರ್ಥ? ಜಾಗತಿಕ ಹಸಿವು ಸೂಚ್ಯಂಕ ಎದುರಿಡುತ್ತಿರುವ ಪ್ರಶ್ನೆಗೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಉತ್ತರವೇನು?

Advertisement

Udayavani is now on Telegram. Click here to join our channel and stay updated with the latest news.

Next