Advertisement

ಸುರಿಯಿತು ಮಳೆ: ತಪ್ಪಿತು ರಣಬಿಸಿಲಿನ ರಗಳೆ

04:11 PM Jun 09, 2017 | Team Udayavani |

ವಾಡಿ: ಬಿಸಿಲಿನ ಧಗೆಯಿಂದ ತತ್ತರಿಸಿದ್ದ ಸಿಮೆಂಟ್‌ ನಗರಿ ವಾಡಿ ಪಟ್ಟಣದಲ್ಲಿ ಕಳೆದ ಎರಡು ದಿನಗಳಿಂದ ಮಳೆಯಾಗುತ್ತಿದ್ದು, ನೆಲಗಳು ನೀರುಂಡು ಎಲ್ಲೆಡೆ ತಂಪಿನ ವಾತಾವರಣ ಮೂಡಿದೆ. ನಗರದ ಸುತ್ತಲೂ ಕಲ್ಲು ಗಣಿಗಳು. ನರನ ನೆತ್ತಿಯ ಮೇಲೆ ಸುಡು ಬಿಸಿಲು.

Advertisement

ರಣಬಿಸಿಲ ಮಧ್ಯೆ ಬೆವರು ಸುರಿಸುತ್ತಿದ್ದ ಕಾರ್ಮಿಕರು, ನೀರು ನೆರಳಿಗಾಗಿ ನರಳುವಂತಾಗಿತ್ತು. ಸದ್ಯ ಅರಂಭದಲ್ಲೇ ವರುಣ ಅಶಾದಾಯಕ ಕೃಪೆ ತೋರಿದ್ದು, ಸಾರ್ವಜನಿಕರಲ್ಲಿ ಹರ್ಷ ಮೂಡಿಸಿದೆ. ಪಟ್ಟಣ ಸೇರಿದಂತೆ ಹಳಕರ್ಟಿ, ಲಾಡ್ಲಾಪುರ, ಇಂಗಳಗಿ, ಕುಂದನೂರ, ರಾವೂರ, ಕಮರವಾಡಿ, ಸೂಲಹಳ್ಳಿ, ಆಲೂರ, ನಾಲವಾರ, ಅಳ್ಳೊಳ್ಳಿ, ಸನ್ನತಿ, ಕೊಲ್ಲೂರ ಗ್ರಾಮಗಳಲ್ಲಿ ಗುರುವಾರ  ಬೆಳಗ್ಗೆಯಿಂದ ಮೋಡಗಟ್ಟಿದ ವಾತವಾರಣ ಸೃಷ್ಟಿಯಾಗಿ ಸಂಜೆ ಮಳೆಯಾಗಿದೆ.

ಕಾದು ಕೆಂಡದಂತಿದ್ದ ನೆಲ ತಣ್ಣಗಾಗಿದೆ. ಮುಂಗಾರಿಗೂ ಮುಂಚೆ ಬಿತ್ತನೆಗೆ ಸಿದ್ಧತೆ ಮಾಡಿಕೊಂಡಿರುವ ರೈತರ ಜಮೀನುಗಳಲ್ಲಿನ ಮೇಲ್ಲೆ ಪದರಿನ ಮಣ್ಣು ಹಸಿಯಾಗಿದೆ. ಮಳೆ ಆಗಮನದಿಂದ ಅನ್ನದಾತರ ಮನಸ್ಸು ಖುಷಿಯಾಗಿದೆ. ಪಟ್ಟಣದ ರಸ್ತೆಗಳ  ಮೇಲೆ ನೀರು ಹರಿದಾಡಿದ್ದು, ಗಲ್ಲಿ ರಸ್ತೆಗಳಲ್ಲಿ ಚರಂಡಿ ನೀರಿನ ರಗಳೆ ಸೃಷ್ಟಿಯಾಗಿದೆ. ಗುರುವಾರದ ಸಂತೆ ಸಂಜೆ ಕೊನೆಗೊಳ್ಳುತ್ತಿದ್ದಂತೆ ಮಳೆ ಸುರಿದಿದ್ದರಿಂದ ವಿವಿಧ  ಗ್ರಾಮಗಳಿಂದ ಬಂದವರು ಬೇಗ ಊರು ಸೇರಿಕೊಂಡರು.

ಹಗಲು ಖಡಕ್‌ ಬಿಸಿಲು-ಝಳ, ರಾತ್ರಿ ವಿಪರೀತ ಧಗೆ, ಬಾಯಾರಿಕೆ ಸಂಕಟ, ನೆರಳಿಗಾಗಿ ಪರದಾಟ, ಗಾಳಿಗಾಗಿ  ಹುಡುಕಾಟ. ಹೀಗೆ ಬೇಸಿಗೆಯ ವಿವಿಧ  ಪರಿಪಾಟಿಲುಗಳನ್ನು ಅನುಭವಿಸಿದ್ದ ಜನರು, ಶುಭಾರಂಭ ನೀಡಿರುವ ಮಳೆಯಿಂದ ವಾತಾವರಣದ ಜತೆಗೆ ಮನಸ್ಸೂ ತಂಪಾಗಿಸಿಕೊಂಡಿದ್ದಾರೆ. ಮಳೆ ಹನಿಗಳಲ್ಲಿ ನೆನೆದು ವಿದ್ಯಾರ್ಥಿಗಳು ಖುಷಿಪಟ್ಟ ಸನ್ನಿವೇಶಗಳು ಕಂಡು ಬಂದವು.

Advertisement

Udayavani is now on Telegram. Click here to join our channel and stay updated with the latest news.

Next