Advertisement

ಕುದಿವ ಎಣ್ಣೆ ಸುರಿದು ಪತ್ನಿಗೆ ಹಿಂಸೆ

10:32 AM Nov 25, 2017 | Team Udayavani |

ಬೆಂಗಳೂರು: ವರದಕ್ಷಿಣೆ ಕಿರುಕುಳ ನೀಡುತ್ತಿದ್ದ ಪತಿ, ಪತ್ನಿಯ ಕಾಲಿಗೆ ಕುದಿಯುವ ಎಣ್ಣೆ ಸುರಿದು ಚಿಕಿತ್ಸೆ ಕೊಡಿಸದೆ ಮನೆಯಲ್ಲಿ ಕೂಡಿ ಹಾಕಿ ಹಿಂಸಿಸಿದ ಅಮಾನವೀಯ ಘಟನೆ ಬಾಗಲಗುಂಟೆ ಠಾಣೆ ವ್ಯಾಪ್ತಿಯ ಮಲ್ಲಸಂದ್ರದಲ್ಲಿ ನಡೆದಿದೆ.

Advertisement

ಈ ಸಂಬಂಧ ಹಾಸನ ಮೂಲದ ಕಾರು ಚಾಲಕ ಶ್ಯಾಮಸುಂದರ (38) ಎಂಬಾತನನ್ನು ಬಂಧಿಸಲಾಗಿದೆ. ತೀವ್ರ ಸುಟ್ಟ ಗಾಯಗಳಿಂದ ಬಳಲುತ್ತಿರುವ ಈತನ ಪತ್ನಿ ಶಕುಂತಲಾ ಅವರನ್ನು ರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಾಸನ ಮೂಲದ ಆರೋಪಿ ಶ್ಯಾಮಸುಂದರ ಮತ್ತು ನಾಗಮಂಗಲ ಮೂಲದ ಶಕುಂತಲಾ 10 ವರ್ಷಗಳ ಹಿಂದೆ ವಿವಾಹವಾಗಿದ್ದು, 9 ವರ್ಷದ ಒಂದು ಹೆಣ್ಣು ಮಗುವಿದೆ. ಕಾರು ಚಾಲಕನಾಗಿರುವ ಶ್ಯಾಮ ಮದ್ಯ ವ್ಯಸನಿಯಾಗಿದ್ದು, ನಿತ್ಯ ಕುಡಿದು ಮನೆಗೆ ಬಂದು ವರದಕ್ಷಿಣೆ ತರುವಂತೆ ಪತ್ನಿಯನ್ನು ಹಿಂಸಿಸುತ್ತಿದ್ದ.

ಆದರೆ ಶಕುಂತಲಾ ಅವರು ಈತ ನೀಡುವ ಎಲ್ಲ ಕಿರುಕುಳ ಸಹಿಸಿಕೊಂಡಿದ್ದರು. ಅವರು ಎಷ್ಟೇ ಸಹಿಸಿಕೊಂಡರೂ ಪತಿಯ ವರ್ತನೆ ಮಾತ್ರ ಬದಲಾಗಲಿಲ್ಲ. ಹೀಗಾಗಿ ಆತನ ಕುರುಕುಳ ತಾಳಲಾಗದೆ ನಾಲ್ಕು ವರ್ಷ ಹಿಂದೆ, ನಾಗಮಂಗಲದಲ್ಲಿನ ತವರು ಮನೆಗೆ ಹೋಗಿದ್ದು, ಮಗಳನ್ನು ಅಲ್ಲೇ ಶಾಲೆಗೆ ಸೇರಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ತಾನೇ ಹೋಗಿ ಕರೆತಂದಿದ್ದ: ಈ ಮಧ್ಯೆ ಐದು ತಿಂಗಳ ಹಿಂದೆ ಮಾವನ ಮನೆಗೆ ಹೋಗಿದ್ದ ಆರೋಪಿ, ಪತ್ನಿ ಮತ್ತು ಆಕೆಯ ಮನೆಯವರ ಮನವೊಲಿಸಿ ಶಕುಂತಲಾ ಅವರನ್ನು ಮಲ್ಲಸಂದ್ರದ ಮನೆಗೆ ಕರೆತಂದಿದ್ದ. ಆರಂಭದ ದಿನಗಳಲ್ಲಿ ಮಡದಿಯನ್ನು ಚೆನ್ನಾಗೇ ನೋಡಿಕೊಂಡ ಆರೋಪಿ ಶ್ಯಾಮ, ನಂತರ ಮತ್ತೆ ತನ್ನ ಹಳೇ ವರ್ತನೆ ಪುನರಾವರ್ತಿಸಿದ್ದ. ನಿತ್ಯ ಮದ್ಯ ಸೇವಿಸಿ ಮನೆಗೆ ಬಂದು ವರದಕ್ಷಿಣೆ ತರುವಂತೆ ಪೀಡಿಸಲು ಆರಂಭಿಸಿದ್ದ. 

Advertisement

ಅಡುಗೆ ಮನೆಗೆ ತೆರಳಿ ಎಣ್ಣೆ ಕಾಯಿಸಿದ: ಆತ ಎಷ್ಟೇ ಕಿರುಕುಳ ಕೊಟ್ಟರೂ ವರದಕ್ಷಿಣೆ ತರಲು ಶಕುಂತಲಾ ಒಪ್ಪಲಿಲ್ಲ. ಇದರಿಂದ ಕೋಪಗೊಂಡ ಆರೋಪಿ, ಅಡುಗೆ ಮನೆಗೆ ತೆರಳಿ ತಾನೇ ಎಣ್ಣೆ ಕಾಯಿಸಿ ತಂದು ಪತ್ನಿಯ ಕಾಲ ಮೇಲೆ ಹಾಕಿದ್ದ. ಇದರಿಂದ ಶಕುಂತಲಾರ ಬಲಗಾಲು ಬೊಬ್ಬೆ ಬಂದು, ನರಳಾಡುತ್ತಿದ್ದರು. ಆದರೆ, ಪತ್ನಿಯ ನರಳಾಟ ಕಂಡೂ ಮರುಗದ ಆರೋಪಿ, ಚಿಕಿತ್ಸೆ ಕೊಡಿಸುವ ಬದಲು ಆಕೆಯನ್ನು ಮನೆಯಲ್ಲೇ ಕೂಡಿ ಹಾಕಿದ್ದ. ಸಾಲದೆಂಬಂತೆ ಕೆಲ ಹೊತ್ತಿನ ನಂತರ ಮನೆಗೆ ಬಂದು ಮತ್ತೆ ಹಲ್ಲೆ ನಡೆಸಿದ್ದ. 

ನೆರೆಯವರಿಗೆ ಕೇಳಿತು ನರಳಾಟ: ಸುಮಾರು ಒಂದು ವಾರ ಪತ್ನಿಯನ್ನು ಮನೆಯಲ್ಲಿ ಕೂಡಿಹಾಕಿದ್ದ ಆರೋಪಿ, ಕುಡಿದು ಬಂದು ನಿತ್ಯ ಹಲ್ಲೆ ನಡೆಸುತ್ತಿದ್ದ. ಈ ವೇಳೆ ಶುಕುಂತಲಾ ನರಳುತ್ತಿದ್ದುದನ್ನು ಕೇಳಿಸಿಕೊಂಡ ಅಕ್ಕಪಕ್ಕದ ಮನೆಯವರು ಮೊದಲು ಮಾಧ್ಯಮಗಳಿಗೆ ವಿಷಯ ತಿಳಿಸಿದ್ದಾರೆ. ಮಧ್ಯಮದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ನಂತರ ಸ್ಥಳಕ್ಕೆ ಧಾವಿಸಿದ ಪೊಲೀಸರು, ಶಕುಂತಲಾ ಅವರನ್ನು ಆಸ್ಪತ್ರೆಗೆ ದಾಖಲಿಸಿ ಅವರ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ನಗರಕ್ಕೆ ಬಂದ ಶಕುಂತಲಾರ ಪೋಷಕರು, ನ.23ರಂದು ಶ್ಯಾಮಸುಂದರನ ವಿರುದ್ಧ ವರದಕ್ಷಿಣೆ ಕಿರುಕುಳ ದೂರ ನೀಡಿದ್ದು, ಅದರನ್ವಯ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next