ದಾವಣಗೆರೆ: ದಾವಣಗೆರೆ ತಾಲೂಕಿನ ಐಗೂರು ಗ್ರಾಮದ ಸಿ.ಎಸ್. ಶಿವಮೂರ್ತಪ್ಪ ಎಂಬ ಕೋಳಿ ಸಾಕಾಣಿಕೆದಾರರಿಗೆ ಖಾಸಗಿ ಕಂಪನಿಯಿಂದ ವಂಚನೆಯಾಗಿದೆ ಎಂದು ರಾಜ್ಯ ಕೋಳಿ ಸಾಕಾಣಿಕೆದಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮಲ್ಲಾಪುರದ ದೇವರಾಜ್ ದೂರಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೂರ್ತಪ್ಪ ಖಾಸಗಿ ಕಂಪನಿಯಿಂದ ಫೆ. 22ರಂದು ಪ್ರತಿ ಕೋಳಿಮರಿಗೆ 41 ರೂಪಾಯಿಯಂತೆ 20 ಸಾವಿರ ಕೋಳಿಮರಿ ಖರೀದಿಸಿದ್ದರು. ಕಂಪನಿಯವರು ಹೇಳಿದಂತೆ ಸಾಕಾಣಿಕೆ ಮಾಡಿದರೂ ನಿರೀಕ್ಷಿತ ಪ್ರಮಾಣದಲ್ಲಿ ಕೋಳಿ ಮರಿ ಬೆಳೆದಿಲ್ಲ. ಕಂಪನಿಯವರಿಗೆ ಕೇಳಿದರೆ ಉಡಾಫೆ ಉತ್ತರ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಕಂಪನಿ ನೀಡಿರುವ ಕೋಳಿ ಮರಿ ಸರಿಯಾದ ಪ್ರಮಾಣದಲ್ಲಿ ಬೆಳೆಯದೆ ನಷ್ಟಕ್ಕೆ ಒಳಗಾಗಿರುವ ರೈತರಿಗೆ ಕಂಪನಿ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಏ. 18ರಂದು ಸೋಮವಾರ ದಾವಣಗೆರೆಯ ಶಾಮನೂರು ರಸ್ತೆಯ ಲಕ್ಮ್ಷೀ ಫ್ಲೋರ್ ಮಿಲ್ ಬಳಿ ಇರುವ ಕಂಪನಿ ಕಚೇರಿಗೆ ಕೋಳಿಮರಿಗಳೊಂದಿಗೆ ಮುತ್ತಿಗೆ ಹಾಕಲಾಗುತ್ತದೆ. ಇತರೆ ಕೋಳಿ ಸಾಕಾಣಿಕೆದಾರರು ಈ ಹೋರಾಟದಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಐಗೂರು ಗ್ರಾಮದ ಶಿವಮೂರ್ತಪ್ಪ ಆಗಿರುವ ವಂಚನೆಗೆ ಸೂಕ್ತ ಪರಿಹಾರ ನೀಡಬೇಕು ಎಂದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗುವುದು. ಜಿಲ್ಲಾಡಳಿತ ಶನಿವಾರದ ಒಳಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ಸೋಮವಾರ ಹೋರಾಟ ನಡೆಸುತ್ತೇವೆ ಎಂದು ತಿಳಿಸಿದರು.
ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬುಳ್ಳಾಪುರದ ಹನುಮಂತಪ್ಪ, ಐಗೂರು ಶಿವಮೂರ್ತಪ್ಪ, ಬುಳ್ಳಾಪುರದ ಪರಮೇಶ್ವರಪ್ಪ, ನಾಗರಕಟ್ಟೆ ಜಯ ನಾಯ್ಕ, ಗೌಡ್ರುಬಸವರಾಜ ಇತರರು ಸುದ್ದಿಗೋಷ್ಠಿಯಲ್ಲಿದ್ದರು.