ಮದುವೆ, ಮುಂಜಿ ಮತ್ತು ಇತರ ಸಮಾರಂಭಗಳಲ್ಲಿ ತಾಂಬೂಲ ಅಥವಾ”ರಿಟರ್ನ್ ಗಿಫ್ಟ್ ಗಳನ್ನುಕೆಲವೊಮ್ಮೆ ಚಿಕ್ಕಪುಟ್ಟ ಬಟ್ಟೆಯ ಪೊಟ್ಟಣಗಳಲ್ಲಿ ನೀಡುತ್ತಿದ್ದರು. ಗೊತ್ತಿಧ್ದೋ,ಗೊತ್ತಿಲ್ಲದೆಯೋ ಅದನ್ನು ಬಿಸಾಕಲು ಮನಸ್ಸು ಬಾರದೆ ಹಾಗೆ ಇಟ್ಟಿದ್ದೂ ಉಂಟು, ಅಲ್ಲವೆ? ಮುಂದೊಂದು ದಿನ ಆ ಪೊಟ್ಟಣಗಳು ಫ್ಯಾಷನ್ ಲೋಕದಲ್ಲಿ ಟ್ರೆಂಡ್ ಆಗಲಿವೆ ಎಂದು ಯಾರು ತಾನೇ ಯೋಚಿಸಿದ್ದರು, ಹೇಳಿ? ಪೋಟ್ಲಿ ಎಂದು ಕರೆಯಲಾಗುವ ಈ ಪೊಟ್ಟಣಗಳು ಇದೀಗ ಬಹುತೇಕ ಎಲ್ಲಾ ಮಹಿಳೆಯರಕೈಯಲ್ಲಿ ಕಾಣಿಸಿಕೊಳ್ಳುತ್ತಿವೆ. ಇವು ಎಲ್ಲಾ ಬಗೆಯ ಸಾಂಪ್ರದಾಯಿಕ ಉಡುಗೆಗಳ ಜೊತೆ ಚೆನ್ನಾಗಿಯೇಕಾಣುತ್ತವೆ.
ಸೀರೆ – ರವಿಕೆ, ಲಂಗ – ದಾವಣಿ, ಉದ್ದ ಲಂಗ, ಚೂಡಿದಾರ, ಸಲ್ವಾರ್‌ಕಮೀಜ್, ಪಟಿಯಾಲ ಸೂಟ್, ಘಾಗ್ರಾ – ಚೋಲಿ,ಕುರ್ತಿ ಮುಂತಾದ ಉಡುಗೆಗಳ ಜೊತೆ ಇವು ಇನ್ನಷ್ಟು ಸ್ಟೈಲಿಶ್ ಆಗಿ ಕಾಣುತ್ತವೆ. ಅಲ್ಲದೆ, ಮೊಬೈಲ್ ಫೋನ್, ಪರ್ಸ್, ಬೀಗದ ಕೈ,ಕರವಸ್ತ್ರ, ಸ್ಯಾನಿಟೈಸರ್ ಮತ್ತಿತರ ಚಿಕ್ಕ ಪುಟ್ಟ ಅಗತ್ಯ ವಸ್ತುಗಳನ್ನು ಇಟ್ಟು ಕೊಳ್ಳಲು ಉಪಯುಕ್ತ ಕೂಡ. ಲಿಪ್ ಸ್ಟಿಕ್,ಕಣ್ಣುಕಪ್ಪು, ಪರ್ಫ್ಯೂಮ್ ಮತ್ತು ಕಾಂಪ್ಯಾಕ್ಟ್ ಪೌಡರ್ ನಂಥ ಮೇಕ್ ಅಪ್ ಸಾಮಗ್ರಿಗಳನ್ನೂ ಇಟ್ಟುಕೊಂಡು ಓಡಾಡಬಹುದು. ಉಡುಪು ಹೊಲಿಸಿದ ಬಟ್ಟೆಯಲ್ಲಿ ಸ್ವಲ್ಪ ಬಟ್ಟೆ ಉಳಿದಿದ್ದರೆ ಅದರಲ್ಲೂ ಪೋಟ್ಲಿ ಹೊಲಿಸಬಹುದು ಅಥವಾ ತಯಾರಿಸ ಬಹುದು. ಪೋಟ್ಲಿ ತಯಾರಿಸುವುದು ಹೇಗೆ ಎಂಬುದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋಗಳು ಲಭ್ಯ ಇವೆ. ತೊಟ್ಟ ಬಟ್ಟೆಗೆ ಮ್ಯಾಚಿಂಗ್ ಪೋಟ್ಲಿಯೂ ಆಯಿತು, ಉಪಯುಕ್ತ ಅಗತ್ಯ ವಸ್ತುಗಳನ್ನು ಕೊಂಡೊಯ್ಯಲು ಚಿಕ್ಕ ಹ್ಯಾಂಡ್ ಬ್ಯಾಗ್ ಕೂಡ ಆಯಿತು. ಪೋಟ್ಲಿಗಳು ಅಂಗಡಿ, ಮಾರುಕಟ್ಟೆಯಲ್ಲೂ ಲಭ್ಯ ಇವೆ. ಆನ್ಲೈನ್ ಮೂಲಕವೂ ಆಯ್ದು ತರಿಸಿಕೊಳ್ಳಬಹುದು.
ಎಲ್ಲಾ ಉಡುಗೆಗೂ ಮ್ಯಾಚ್ ಆಗಲು ಅದೆಷ್ಟು ಪೋಟ್ಲಿ ಖರೀದಿಸಲು ಸಾಧ್ಯ? ಅದಕ್ಕೆ ಅನೇಕರು ಚಿನ್ನದ ಬಣ್ಣಕ್ಕೆ ಹೋಲುವ ಬಟ್ಟೆಯಿಂದ ತಯಾರಿಸಿದ ಪೋಟ್ಲಿಗಳನ್ನು ಖರೀದಿಸುತ್ತಾರೆ. ಏಕೆಂದರೆ, ಇವು ಬಹುತೇಕ ಎಲ್ಲಾ ರೀತಿಯ ಉಡುಗೆಗೂ ಮ್ಯಾಚ್ ಆಗುತ್ತವೆ. ಸೀರೆಯ ಜರಿಗೆ ಹೋಲುವಂಥ ಬಟ್ಟೆಯಿಂದಲೂ ಪೋಟ್ಲಿಗಳನ್ನು ತಯಾರಿಸುತ್ತಾರೆ. ಹಾಗಾಗಿ ಚಿನ್ನ ಮತ್ತು ಬೆಳ್ಳಿಯ ಬಣ್ಣಕ್ಕೆ ಹೋಲುವ ಬಟ್ಟೆಯಿಂದ ಮಾಡಲಾದ ಪೋಟ್ಲಿಗಳನ್ನುಕೊಂಡುಕೊಂಡರೆ ಆಯಿತು. ಮುತ್ತು, ರತ್ನ, ಬಣ್ಣದ ಗಾಜಿನ ಚೂರು,ಕನ್ನಡಿ, ಕವಡೆ, ಬಣ್ಣದಕಲ್ಲುಗಳು, ಗೆಜ್ಜೆ, ಮಣಿ, ಟ್ಯಾಝೆಲ್, ಲೇಸ್ ಮುಂತಾದ ಅಲಂಕಾರಿಕವಸ್ತುಗಳಿಂದಕಸೂತಿ ಮಾಡಲಾಗುತ್ತದೆ. ಫ್ಲೋರಲ್, ಇಂಡಿಯನ್, ಬ್ಲಾಕ್, ವೆಜಿಟಬಲ್, ಹೀಗೆ ಬಗೆಬಗೆಯ ಪ್ರಿಂಟ್‌ಗಳು, ವಾರ್ಲಿ, ಮಧುಬಾನಿ,ಕಲಮ್‌ಕಾರಿ ಯಂಥ ಚಿತ್ರಕಲೆ, ಚಿಕನ್‌ಕಾರಿ, ಜರ್ದೋಸಿ, ಫುಲ್ಕಾರಿಯಂಥ ಕಸೂತಿ ಬಳಸಿ ಮಾಡಲಾದ ಪೋಟ್ಲಿಗಳುಕೂಡ ಮಾರುಕಟ್ಟೆಯಲ್ಲಿ ಲಭ್ಯ ಇವೆ.
ಗ್ರಾಂಡ್ ಲುಕ್ ಸಿಗುತ್ತೆ… : ಪೋಟ್ಲಿ ಯಾವುದೇ ಉಡುಗೆಯನ್ನೂ ಗ್ರಾಂಡ್ ಆಗಿಸಬಲ್ಲದು. ಸಿಂಪಲ್ ಸಲ್ವಾರ್ ಕಮೀಜ್ ತೊಟ್ಟರೂ ಕೈಯಲ್ಲಿರುವ ಪೋಟ್ಲಿ ಗ್ರಾಂಡ್ ಆಗಿದ್ದರೆ ಫುಲ್ ಗೆಟಪ್ಪೇ ಗ್ರಾಂಡ್ ಆದಂತೆ. ಸೆಣಬು ಅಂದರೆ ಜೂಟ್, ರೇಷ್ಮೆ, ಸ್ಯಾಟಿನ್, ಶಿಫಾನ್,ಖಾದಿ, ಮಖ್ಮಲ್, ಚೈನಾ ಸಿಲ್ಕ್ ಬಟ್ಟೆಯಿಂದ ತಯಾರಿಸಿದ ಪೋಟ್ಲಿಗಳಿಗೆ ಬೇಡಿಕೆ ಹೆಚ್ಚು. ಲಾಡಿ, ಮುತ್ತಿನ ಹಾರ ಅಥವಾ ಬಣ್ಣದ ದಾರಗಳಿಂದ ಇವುಗಳನ್ನು ಕಟ್ಟಲಾಗುತ್ತದೆ. ವೆಲ್ಕ್ರೊ, ಜಿಪ್, ಬಟನ್ (ಗುಂಡಿ), ಮುಂತಾದ ಆಯ್ಕೆಗಳೂ ಲಭ್ಯ ಇವೆ.
-ಅದಿತಿಮಾನಸ ಟಿ. ಎಸ್