Advertisement

Katpadi: ರಾ.ಹೆ. 66ರಲ್ಲಿ ಬಾಯ್ದೆರೆದ ಗುಂಡಿಗಳು

04:19 PM Aug 07, 2024 | Team Udayavani |

ಕಟಪಾಡಿ: ರಾಷ್ಟ್ರೀಯ ಹೆದ್ದಾರಿ 66ರ ಕಟಪಾಡಿ ಪ್ರದೇಶದಲ್ಲಿ ಹೆದ್ದಾರಿಯಲ್ಲಿ ಬಾಯ್ದೆರೆದ ಅಪಾಯಕಾರಿ ಗುಂಡಿಗಳು ಮುಕ್ತಿಗಾಗಿ ಕಾಯುತ್ತಿದೆ. ಕಟಪಾಡಿಯಿಂದ ಮಂಗಳೂರು ಭಾಗಕ್ಕೆ ತೆರಳುವ ರಾ.ಹೆ.66ರ ಪೂರ್ವ ಪಾರ್ಶ್ವದ ಹೆದ್ದಾರಿ ಮೇಲೆಯೇ ಮಳೆಯ ನೀರು ಹರಿದು ಅಪಾಯಕಾರಿ ಹೊಂಡ ಗುಂಡಿಗಳು ಪ್ರತ್ಯಕ್ಷವಾಗಿದೆ.

Advertisement

ಕಟಪಾಡಿ ಜಂಕ್ಷನ್‌ನಿಂದ ವಾಹನಗಳು ಈ ಭಾಗದಲ್ಲಿನ ಇಳಿಜಾರು ಹೆದ್ದಾರಿಯಲ್ಲಿ ವೇಗವಾಗಿ ಸಾಗುವ ಸಂದರ್ಭ ಈ ಅಪಾಯಕಾರಿ ಗುಂಡಿಗಳನ್ನು ಗಮನಿಸದೆ ಏಕಾಏಕಿಯಾಗಿ ಬ್ರೇಕ್‌ ಹಾಕುವಾಗ ಅಥವಾ ಹೊಂಡವನ್ನು ತಪ್ಪಿಸಲು ಎಡಕ್ಕೆ-ಬಲಕ್ಕೆ ವಾಹನವನ್ನು ಚಲಾಯಿಸುವಾಗ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ. ಸದಾ ವಾಹನ ದಟ್ಟಣೆಯಿಂದ ಕೂಡಿದ ಈ ಪ್ರದೇಶದಲ್ಲಿ ಹೆದ್ದಾರಿ ತಿರುವು ಹಾಗೂ ಸರ್ವೀಸ್‌ ರಸ್ತೆಯೂ ಸೇರುವ ಜಂಕ್ಷನ್‌ ಪ್ರದೇಶವೂ ಆಗಿದೆ. ಹಾಗಾಗಿ ಈ ಭಾಗದಲ್ಲಿ ರಾ.ಹೆ. ಸಮರ್ಪಕ ನಿರ್ವಹಣೆಯ ಆವಶ್ಯಕತೆ ಇದೆ.

ಮಳೆ ಬಂದಾಗ ನೀರು ನಿಂತು, ಕತ್ತಲಾವರಿಸುತ್ತಿದ್ದಂತೆ ಹೊಂಡಗಳು ಗಮನಕ್ಕೆ ಬಾರದೆ ಕೆಲವು ದ್ವಿಚಕ್ರ ಮತ್ತು ರಿಕ್ಷಾ ಸಹಿತ ಕೆಲ ಲಘು ವಾಹನಗಳ ಬಿಡಿಭಾಗಗಳು ಕಳಚಿಕೊಂಡಿದ್ದು ಇದೆ ಎಂದು ವಾಹನ ಸವಾರರು ಆತಂಕವನ್ನು ವ್ಯಕ್ತಪಡಿಸುತ್ತಿದ್ದಾರೆ.

ಶಾಶ್ವತ ಪರಿಹಾರ ಕಲ್ಪಿಸಿ

ಬಹಳಷ್ಟು ಅಪಾಯಕಾರಿ ಗುಂಡಿಗಳು ಕಂಡು ಬರುತ್ತಿದೆ. ವಾಹನ ಚಲಾಯಿಸುವುದೇ ಸವಾಲಾಗಿದೆ. ಸ್ವಲ್ಪ ಎಡವಟ್ಟು ಆದಲ್ಲಿ ಅಪಘಾತ ಗ್ಯಾರಂಟಿ. ಕೂಡಲೇ ರಾ.ಹೆ. ಇಲಾಖೆ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ವಾಹನ ಸವಾರರ ಅಮೂಲ್ಯ ಜೀವಗಳ ಬಗ್ಗೆ ಹೆಚ್ಚಿನ ಸುರಕ್ಷತೆಗೆ ಆದ್ಯತೆಯನ್ನು ನೀಡಲಿ. ಹೆದ್ದಾರಿ ಗುಂಡಿಗೆ ಶಾಶ್ವತ ಪರಿಹಾರವನ್ನು ಕಲ್ಪಿಸಬೇಕೆಂದು ಕಟಪಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಅಶೋಕ್‌ ರಾವ್‌ ಹೇಳಿದರು.

Advertisement

ಸವಾರರಿಗೆ ಸಂಕಷ್ಟ

ಬೃಹತ್‌ ಗಾತ್ರದ ಗುಂಡಿಗಳು ಈ ಭಾಗದಲ್ಲಿ ವಾಹನ ಸವಾರರ ನಿದ್ದೆಗೆಡಿಸಿದ್ದು, ಸುರಕ್ಷಿತ ಸಂಚಾರದ ಹಿತದೃಷ್ಟಿಯಿಂದ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ದೊಡ್ಡ ಮಟ್ಟದ ಅಪಘಾತಗಳು ಸಂಭವಿಸುವ ಮುನ್ನವೇ ಎಚ್ಚೆತ್ತು ಶಾಶ್ವತ ಪರಿಹಾರ ಕಲ್ಪಿಸುವಂತೆ ಆಗ್ರಹಿಸುತ್ತಿದ್ದಾರೆ.

ಅಪಘಾತಕ್ಕೂ ಕಾರಣ

ಇಲ್ಲಿ ವಾಹನ ಸಂಚಾರವೇ ಸವಾಲಾಗಿದೆ. ಮಳೆ ಸುರಿದಾಗಲಂತೂ ಬಹಳಷ್ಟು ಅಪಾಯಕಾರಿ. ಬೈಕ್‌ ಸಹಿತ ಇತರೇ ವಾಹನದವರ ಸಂಚಾರದ ಸರ್ಕಸ್‌ ಅಪಘಾತಕ್ಕೂ ಕಾರಣವಾಗಲಿದೆ. ತೀವ್ರ ತರಹದ ಅಪಘಾತ ಸಂಭವಿಸುವ ಮುನ್ನವೇ ಇಲಾಖೆಯು ಹೆದ್ದಾರಿ ನಿರ್ವಹಣೆಯನ್ನು ಕೈಗೊಂಡು ಈ ಪ್ರದೇಶದಲ್ಲಿ ಆದ್ಯತೆಯ ಮೇರೆಗೆ ನಿರ್ವಹಣೆಯನ್ನು ನಡೆಸುವ ಮೂಲಕ ಸುರಕ್ಷಿತ ಸಂಚಾರಕ್ಕೆ ಗಮನ ಹರಿಸಬೇಕಿದೆ.

-ಗೀತಾಂಜಲಿ ಎಂ. ಸುವರ್ಣ, ಜಿ.ಪಂ. ಮಾಜಿ ಸದಸ್ಯರು, ಕಟಪಾಡಿ.

ಪರಿಹಾರ ಕ್ರಮ

ಹೆದ್ದಾರಿ ಪಾಟ್‌ಹೋಲ್ಸ್‌ಗಳ ನಿರ್ವಹಣೆಗೆ ಮೂರು ತಂಡಗಳು ಕೆಲಸ ನಿರ್ವಹಿಸುತ್ತಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯ ನಡುವೆಯೂ ನಿರ್ವಹಣೆ ನಡೆಯುತ್ತಿದೆ. ಕಟಪಾಡಿ ಪ್ರದೇಶದ ಪಾಟ್‌ ಹೋಲ್ಸ್‌ಗಳನ್ನು ನಿರ್ವಹಣೆ ಮಾಡಲಾಗಿತ್ತು. ವಿಪರೀತ ಮಳೆಯ ಕಾರಣದಿಂದ ಮತ್ತೆ ಪಾಟ್‌ ಹೋಲ್ಸ್‌ ಕಾಣುತ್ತಿದೆ. ಪರಿಹಾರವಾಗಿ ಪೇವರ್‌ ಬ್ಲಾಕ್ಸ್‌ ಅಳವಡಿಸುವ ಮೂಲಕ ಅಥವಾ ಹೆಚ್ಚು ಬಾಳಿಕೆ ಬರುವ ವಿಧಾನವನ್ನು ಅನುಸರಿಸಿ ಆದ್ಯತೆಯ ಮೇರೆಗೆ ಹೆಚ್ಚಿನ ಸುರಕ್ಷತೆಯುಳ್ಳ ನಿರ್ವಹಣೆಯನ್ನು ಮಾಡಲಾಗುತ್ತದೆ. ಒಂದೆರೆಡು ದಿನಗಳೊಳಗಾಗಿ ಈ ಭಾಗದ ಸಮಸ್ಯೆಗೆ ಪರಿಹಾರವನ್ನು ಕಲ್ಪಿಸಲಾಗುತ್ತದೆ.

– ತಿಮ್ಮಯ್ಯ, ಟೋಲ್‌ ಪ್ರಬಂಧಕರು, ಹೈವೇ ಕನ್‌ಸ್ಟ್ರಕ್ಷನ್ಸ್‌

– ವಿಜಯ ಆಚಾರ್ಯ ಉಚ್ಚಿಲ

Advertisement

Udayavani is now on Telegram. Click here to join our channel and stay updated with the latest news.

Next