Advertisement
ಕಳೆದ ಹತ್ತು ವರ್ಷಗಳಿಂದ ಒಂದೂವರೆ ಎಕರೆಯಲ್ಲಿ ಆಲೂಗಡ್ಡೆ ನಾಟಿ ಮಾಡುತ್ತಿದ್ದಾರೆ. ಗೆಡ್ಡೆ ನಾಟಿ ಹಂತದಲ್ಲಿ ಮಳೆ ಚೆನ್ನಾಗಿ ಬಂದರೆ ಉತ್ತಮ ಫಸಲು ದೊರೆಯುತ್ತದೆ. ಸಾಕಷ್ಟು ಬಾರಿ ನಷ್ಟವನ್ನು ಅನುಭವಿಸಿದ್ದೂ ಇದೆ. ಹಾಗಂತ ಆಂಡಿ ಕೈಕಟ್ಟಿ ಕುಳಿತುಕೊಂಡಿಲ್ಲ. ಆಲೂಗಡ್ಡೆ ಮೂರು ತಿಂಗಳ ಬೆಳೆ. ಅಧಿಕ ಇಳುವರಿ ಪಡೆಯುವ ನಿಟ್ಟಿನಲ್ಲಿ ಕೊಪ್ರಿಜ್ಯೋತಿ ತಳಿಯನ್ನು ಬಿತ್ತಿದ್ದಾರೆ. ಗಡ್ಡೆಯನ್ನು ಹಾಸನದಿಂದ ತಂದಿದ್ದಾರೆ. ಒಂದು ಎಕರೆಗೆ ಆರು ಕ್ವಿಂಟಾಲ್ ಗಡ್ಡೆ ಬೇಕು. ಕ್ವಿಂಟಾಲ್‌ಗೆ ರೂ. 1,000 ದರವಿದೆ. ಇದು ಮೂರು ತಿಂಗಳ ಬೆಳೆಯಾಗಿದ್ದು, ಮಳೆಗಾಲದ ಆರಂಭ ನಾಟಿಗೆ ಸೂಕ್ತ. ಆಲೂಗಡ್ಡೆ ಕಲ್ಲು ಭೂಮಿಯಲ್ಲೂ ಚೆನ್ನಾಗಿ ಬೆಳೆಯುತ್ತದೆ.
ಗೊಬ್ಬರ ನೀಡಿದರೆ ಒಳ್ಳೆಯದು. ಮುಂದಿನ ಎರಡು ತಿಂಗಳ ನಂತರ ಗಿಡ ಬಾಡುತ್ತದೆ. ಅಷ್ಟರಲ್ಲಿ ಮಣ್ಣಿನೊಳಗೆ ಗಡ್ಡೆ ಬೆಳೆದು ಕಟಾವಿಗೆ ಸಿದ್ಧಗೊಂಡಿರುತ್ತದೆ. ಕೆಲವೊಮ್ಮೆ ಗಡ್ಡೆಗಳು ಮಣ್ಣಿನ ಮೇಲ್ಭಾಗಕ್ಕೆ ಬರುವುದೂ ಇದೆ. ಆ ಗಡ್ಡೆಗಳು ಹಸಿರು ಬಣ್ಣವನ್ನು
ಪಡೆಯುತ್ತವೆ. ಮಾರುಕಟ್ಟೆಯಲ್ಲಿ ಇಂಥ ಗಡ್ಡೆಗಳಿಗೆ ಬೇಡಿಕೆ ಇರುವುದಿಲ್ಲ. ಒಂದು ಗಿಡದಲ್ಲಿ ಐದರಿಂದ ಇಪ್ಪತ್ತು ಗಡ್ಡೆಗಳು ಬೆಳೆಯುತ್ತವೆ. ಕಳೆದ ವರ್ಷ ಒಂದು ಎಕರೆಯಲ್ಲಿ ನೂರು ಕ್ವಿಂಟಾಲ್ ಇಳುವರಿಯನ್ನು ಅಂಡಿಯವರು ಪಡೆದಿದ್ದಾರೆ. ಕೆ.ಜಿ.ಗೆ ಕಡಿಮೆಯೆಂದರೆ ಹದಿನೆಂಟು ರೂ. ದೊರೆಯುತ್ತದೆ. ತೋಟಕ್ಕೇ ಬಂದು ಖರೀದಿಸುವವರ ಸಂಖ್ಯೆ ಹೆಚ್ಚಿರುವುದರಿಂದ ಸಾಗಾಟದ ಖರ್ಚಿಲ್ಲ. ಆಲೂಗಡ್ಡೆಗೆ ಎಲೆಸುಡುವ, ಕೊಳೆರೋಗ ಬಾಧಿಸುವುದು ಸಾಮಾನ್ಯ. ಒಂದು ಎಕರೆಗೆ ಎಲ್ಲಾ ಸೇರಿ 50 ಸಾವಿರ ರೂಪಾಯಿ ಖರ್ಚು ತಗಲುತ್ತದೆ. ಕೆ. ಜಿ. ಗೆ ಹತ್ತರಿಂದ 20 ರೂಪಾಯಿ ಇದ್ದರೆ ಕೈತುಂಬಾ ಲಾಭ ಸಿಗುತ್ತದೆಯಂತೆ. ಪಂಜಾಬ್, ಹರಿಯಾಣ, ಛತ್ತಿಸ್‌ಗಢದಲ್ಲಿ ಹೆಚ್ಚು ಬೆಳೆಗಾರರಿದ್ದಾರೆ. ಅಲ್ಲಿ ಆಲೂಗಡ್ಡೆಯನ್ನು ಸಂಗ್ರಹಿಸಿಡಲು ಸಂಗ್ರಹಣಾ ಘಟಕವೂ ಇದೆ. ರಾಜ್ಯಕ್ಕೆ ಅಲ್ಲಿಂದ ಆಲೂಗಡ್ಡೆ ಆಮದಾಗುತ್ತಿದೆ. ಆದ್ದರಿಂದ ರಾಜ್ಯದ ರೈತರು ಬೆಳೆದ ಗಡ್ಡೆಗೆ ಸರಿಯಾದ ಬೆಲೆ ಸಿಗುತ್ತಿಲ್ಲ ಎಂಬುವುದು ಅವರ ಅನುಭವದ ಮಾತು. ಆಂಡಿಯವರು ನಾಟಿ, ಕಳೆಕೀಳುವುದು ಹೀಗೆ ಹೆಚ್ಚಿನ ಕೆಲಸಗಳನ್ನು
ತಾವೇ ಮಾಡಿ ಮುಗಿಸುತ್ತಿದ್ದಾರೆ. ಕೆಲವು ಕೆಲಸಗಳನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ‘ದುರ್ಗಾಂಬ’ ಪ್ರಗತಿಬಂಧು ತಂಡದ ಶ್ರಮವಿನಿಮಯದ ಮೂಲಕ ಮಾಡಿ ಮುಗಿಸುತ್ತಿದ್ದಾರೆ. ಆದ್ದರಿಂದ ತಗಲುವ ಖರ್ಚು ಕೂಡಾ ಕಡಿಮೆ. ಒಂದು ಬೆಳೆಯಲ್ಲಿ ನಷ್ಟವಾದರೂ ಎರಡನೆ ಬೆಳೆಯಲ್ಲಿ ಲಾಭವಾಗುತ್ತದೆಯಂತೆ. ನೀರಾವರಿ ವ್ಯವಸ್ಥೆ ಇದ್ದರೆ ರಾಜ್ಯದ ಇತರ ಭಾಗಗಳಲ್ಲೂ ಆಲೂಗಡ್ಡೆ ಬೆಳೆಯಬಹುದಾಗಿದೆ.
Related Articles
Advertisement