ಶಿರಸಿ: ಯಕ್ಷಗಾನ ಅಕಾಡೆಮಿ ನೀಡುವ 2020 ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರದಾನಕ್ಕೆ ಮತ್ತೆ ವಿಘ್ನ ಎದುರಾಗಿದೆ.
ಫೆ, 12 ರಂದು ಬನವಾಸಿಯಲ್ಲಿ 110 ಕೇವಿ ವಿದ್ಯುತ್ ಗ್ರಿಡ್‌ಗೆ ಶಿಲಾನ್ಯಾಸ ನೆರವೇರಿಸಿ ಶಿರಸಿಯಲ್ಲಿ ಮಧ್ಯಾಹ್ನ 12 ಕ್ಕೆ ಪ್ರಶಸ್ತಿ ಪ್ರದಾನ ಮಾಡಬೇಕಿದ್ದ ಸಚಿವ ವಿ.ಸುನೀಲಕುಮಾರರು ಅನ್ಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದರಿಂದ ಕಾರ್ಯಕ್ರಮ ಮುಂದಕ್ಕೆ ಹೋಗುತ್ತಿದೆ ಎಂದು ಮೂಲಗಳು ಅಧಿಕೃತವಾಗಿ ತಿಳಿಸಿವೆ.
ಕಳೆದ 2020 ರಲ್ಲೇ ಪ್ರಶಸ್ತಿ ಪ್ರದಾನ ಆಗಬೇಕಿದ್ದ ಪಾರ್ತಿಸುಬ್ಬ, ಯಕ್ಷಸಿರಿ, ಯಕ್ಷ ಗೌರವ ಪ್ರಶಸ್ತಿಗಳು 2021 ರಲ್ಲಾದರೂ ಆಗಬೇಕಿತ್ತು. ಕೋವಿಡ್ ಹಾಗೂ ಹಿಂದಿನ ಅಧ್ಯಕ್ಷ ಪ್ರೋ. ಎಂ.ಎ.ಹೆಗಡೆ ಅವರ ಅಗಲಿಕೆಯಿಂದ ಮತ್ತೆ ಮುಂದಕ್ಕೆ ಹೋಗಿತ್ತು. ನೂತನ ಅಧ್ಯಕ್ಷ ಡಾ. ಜಿ.ಎಲ್.ಹೆಗಡೆ ಅವರು ಎಂ.ಎ.ಹೆಗಡೆ ಅವರು ಬಯಸಿದ್ದಂತೆ ಶಿರಸಿಯಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಸಲು ಯೋಜಿಸಿದ್ದರು.
ಬನವಾಸಿಯ ಗ್ರಿಡ್ ಶಿಲಾನ್ಯಾಸ ಹಾಗೂ ಶಿರಸಿ ಕಾರ್ಯಕ್ರಮ ಜೋಡಿಸಲಾಗಿತ್ತು. ಸ್ಪೀಕರ್ವಿಶ್ವೇಶ್ವರ ಹೆಗಡೆ ಕಾಗೇರಿ, ಕಾರ್ಮಿಕ ಇಲಾಖೆಯ ಸಚಿವ ಶಿವರಾಮ ಹೆಬ್ಬಾರ, ಜಿಲ್ಲಾ ಮಂತ್ರಿ ಕೋಟ ಶ್ರೀನಿವಾಸ ಪೂಜಾರಿ, ಇಲಾಖೆಯ ನಿರ್ದೇಶಕ ರಂಗಪ್ಪ ಸೇರಿದಂತೆ ಅನೇಕ ಗಣ್ಯರು ಬರುವದೂ ಖಾತ್ರಿಯಾಗಿತ್ತು.
ಪಾರ್ತಿಸುಬ್ಬ ಪ್ರಶಸ್ತಿಗೆ ಡಿ.ಎಸ್.ಶ್ರೀಧರ, ಅಕಾಡೆಮಿ ವಾರ್ಷಿಕ ಗೌರವಕ್ಕೆ ಸಂಜೀವ ಸುವರ್ಣ, ವಿಜಯನಳಿನಿ ರಮೇಶ, ದಿ. ಕೆ.ತಿಮ್ಮಪ್ಪ, ಡಾ. ಚಕ್ಕರೆ ಶಿವಶಂಕರ,ಬಿ.ಪರಶುರಾಮ, ಯಕ್ಷಸಿರಿಗೆ ಹರಿನಾರಾಯಣ ಬೈಪಡಿತ್ತಾಯ, ಗೋಪಾಲ ಆಚಾರ್, ಬೆಲ್ತೂರುರಮೇಶ, ಸಂಜಯಕುಮಾರ ಶೆಟ್ಟಿ, ಶ್ರೀನಿವಾಸ ಮಡಿವಾಳ, ಎಂ.ಆರ್.ಕಾನಗೋಡ, ಸುಬ್ರಹ್ಮಣ್ಯ ಧಾರೇಶ್ವರ, ಶಂಭು ಶರ್ಮಾ, ಮುಳವಾಗಲಪ್ಪ ಎ .ಎಂ., ಹನುಮಂತರಾಯಪ್ಪ ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ. 12ರಂದು ಬೆಳಿಗ್ಗೆ ಅಕಾಡೆಮಿಯಿಂದ ಎಂ.ಎ.ಹೆಗಡೆ ಸಂಸ್ಮರಣ ಕಾರ್ಯಕ್ರಮ ಕೂಡ ನಡೆಯಬೇಕಿತ್ತು.
ಮೂಲವೊಂದರ ಪ್ರಕಾರ ಫೆ.20 ಭಾನುವಾರ ಶಿರಸಿಯಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ ಎಂದು ಮೂಲವೊಂದು ದೃಢೀಕರಿಸಿದೆ.