Advertisement

ಹೆರಿಗೆಯ ಬಳಿಕದ ಖಿನ್ನತೆ; ಕಾರಣವಾಗುವ ಅಪಾಯದ ಅಂಶಗಳೇನು?

03:17 PM Apr 16, 2023 | Team Udayavani |

ನವಜಾತ ಶಿಶುವಿನ ಆಗಮನ ಸಾಮಾನ್ಯವಾಗಿ ಒಂದು ಸಂತಸದ ಘಟನೆ. ಆದರೆ ಆ ಅವಧಿಯಲ್ಲಿ ಅನೇಕ ಹೊಂದಾಣಿಕೆಗಳನ್ನು ಮಾಡಿಕೊಳ್ಳಬೇಕಾಗಿರುವುದರಿಂದ ಅದು ಒತ್ತಡಮಯ ಸಮಯವಾಗಿಯೂ ಇರಬಲ್ಲುದು. ಮಗುವಿನ ಜನನದ ಬಳಿಕ ಭಾವನಾತ್ಮಕ ಬದಲಾವಣೆಗಳು ಸಾಮಾನ್ಯ ಹಾಗೂ ಅವು ಅಲ್ಪ ಪ್ರಮಾಣದಿಂದ ತೀವ್ರ ಪ್ರಮಾಣದವರೆಗೂ ಇರಬಲ್ಲವು ಎಂಬುದು ಅನೇಕ ಮಹಿಳೆಯರಿಗೆ ತಿಳಿದಿರುವುದಿಲ್ಲ.

Advertisement

ಒಬ್ಬರ ಜೀವಿತಾವಧಿಯಲ್ಲಿ ಗಮನಾರ್ಹ ಬದಲಾವಣೆಯೊಂದು ಸಂಭವಿಸುವ ಸಂದರ್ಭದಲ್ಲಿ ಮತ್ತು ನವಜಾತ ಶಿಶುವಿನ ಪಾಲನೆಯ ಹೆಚ್ಚುವರಿ ಜವಾಬ್ದಾರಿಯನ್ನು ನಿಭಾಯಿಸುವ ಸಂದರ್ಭದಲ್ಲಿ ಉಂಟಾಗಬಹುದಾಗಿರುವ ಸುದೀರ್ಘಾವಧಿಯ ಭಾವನಾತ್ಮಕ ಗೊಂದಲಗಳಿಂದ ಕೂಡಿದ ಒಂದು ಗಂಭೀರ ಸ್ವರೂಪದ ಮಾನಸಿಕ ಆರೋಗ್ಯ ಸಮಸ್ಯೆಯನ್ನೇ ಹೆರಿಗೆ ಬಳಿಕದ ಖನ್ನತೆ ಎಂದು ಗುರುತಿಸಲಾಗುತ್ತದೆ.

ಹೆರಿಗೆಯ ಬಳಿಕ ಕಾಣಿಸಿಕೊಳ್ಳುವ ಖಿನ್ನತೆಯು ಮಗು ಜನಿಸಿದ ಒಂದು ವರ್ಷದ ಅವಧಿಯಲ್ಲಿ ಯಾವಾಗ ಬೇಕಾದರೂ ಕಾಣಿಸಿಕೊಳ್ಳಬಹುದಾಗಿರುತ್ತದೆ. ಆದರಿದು ತೀರಾ ಸಾಮಾನ್ಯವಾಗಿ ಹೆರಿಗೆಯ ಅನಂತರದ ಪ್ರಾರಂಭಿಕ ಮೂರು ತಿಂಗಳುಗಳಲ್ಲಿ ಅನುಭವಕ್ಕೆ ಬರುತ್ತದೆ. ಈ ವಿಚಾರದಲ್ಲಿ ತಾಯಿ ಅಥವಾ ಆಕೆಯ ಕುಟುಂಬದವರಲ್ಲಿ ಒಂದು ರೀತಿಯ ಸಾಮಾಜಿಕ ತಪ್ಪು ಕಲ್ಪನೆ ಮೂಡಿರುತ್ತದೆ. ಮಾತ್ರವಲ್ಲದೆ ಇಂತಹ ಸಮಸ್ಯೆಗಳನ್ನು ಅಸಾಂಪ್ರದಾಯಿಕವೆಂದು ಪರಿಗಣಿಸಿ ಇವುಗಳನ್ನು ಒಪ್ಪಿಕೊಳ್ಳಲು ಮುಜುಗರಪಟ್ಟುಕೊಳ್ಳುತ್ತಾರೆ.

ಖಿನ್ನತೆಗೆ ಕಾರಣವಾಗುವ ಅಪಾಯದ ಅಂಶಗಳೇನು?
ಹೆರಿಗೆ ಬಳಿಕದ ಖಿನ್ನತೆ ಕಾಣಿಸಿಕೊಳ್ಳುವುದಕ್ಕೆ ಇಂಥದ್ದೇ ಎಂಬಂತಹ ನಿರ್ದಿಷ್ಟವಾಗಿರುವ ಕಾರಣಗಳಿರುವುದಿಲ್ಲ. ಸಾಮಾಜಿಕ – ಭೌಗೋಳಿಕ, ಜೀವಶಾಸ್ತ್ರೀಯ, ಮಾನಸಿಕ, ಗರ್ಭಾವಧಿ ಸಂಬಂಧಿ, ಆಚಾರ ವಿಚಾರ ಮತ್ತು ಕೌಟುಂಬಿಕ ಅಥವಾ ಸಾಮಾಜಿಕ ಅಂಶಗಳಂತಹ ಅನೇಕ ವಿಷಯಗಳು ಈ ಹೆರಿಗೆ ಬಳಿಕದ ಖಿನ್ನತೆಯ ಸಮಸ್ಯೆ ಕಾಣಿಸಿಕೊಳ್ಳಲು ಕಾರಣವಾಗಬಹುದಾಗಿರುತ್ತದೆ. ಈ ಹಿಂದಿನ ಅಧ್ಯಯನಗಳನ್ನು ಆಧರಿಸಿ ಹೇಳುವುದಾದರೆ, ಈ ಕೆಳಗಿನವುಗಳು ಅಪಾಯದ ಅಂಶಗಳಾಗಿರುತ್ತವೆ.
– ಜೀವಶಾಸ್ತ್ರೀಯ/ದೈಹಿಕ ಅಪಾಯದ ಅಂಶಗಳು
ಹಾರ್ಮೊನುಗಳ ಬದಲಾವಣೆ, ಗಂಭೀರ ಸ್ವರೂಪದ ನಿದ್ರಾಹೀನತೆ, ಗರ್ಭಿಣಿ ಅವಧಿಯಲ್ಲಿನ ಆರೋಗ್ಯ ಸಮಸ್ಯೆಗಳು, ಕುಟುಂಬ ಸದಸ್ಯರ ಆರೋಗ್ಯ ಸಮಸ್ಯೆ, ವಿಚ್ಛೇದನ, ಕೆಲಸ ಕಳೆದುಕೊಳ್ಳುವಿಕೆ ಅಥವಾ ಕುಟುಂಬ ಸದಸ್ಯರು ಇತ್ತೀಚೆಗೆ ಮರಣಿಸಿರುವುದು, ವ್ಯತಿರಿಕತ್ತ ಜೀವನ ಘಟನೆಗಳು, ಇತ್ಯಾದಿ.
– ಮಾನಸಿಕ ಅಪಾಯಕಾರಿ ಅಂಶಗಳು
ಈ ಹಿಂದೆ ಮಾನಸಿಕ ಕಾಯಿಲೆಯ ಪೂರ್ವಾಪರ, ಕುಟುಂಬ ಸದಸ್ಯರಿಗೆ ಮಾನಸಿಕ ಕಾಯಿಲೆ ಇದ್ದ ಇತಿಹಾಸ, ಈ ಹಿಂದಿನ ಗರ್ಭಾವಧಿ ಸಂದರ್ಭದಲ್ಲಿ ಖಿನ್ನತೆಯ ಸಮಸ್ಯೆಗೊಳಗಾಗಿದ್ದ ಇತಿಹಾಸ, ಗರ್ಭಿಣಿ ಸಮಯದಲ್ಲಿ ಒತ್ತಡದ ಭಾವನೆಗೊಳಗಾಗಿರುವುದು, ಯಾವುದೇ ರೀತಿಯ ಒತ್ತಡಭರಿತ ಜೀವನ ಘಟನೆಗಳು, ಮಗುವಿನ ಪಾಲನೆಯ ವಿಷಯದಲ್ಲಿ ಒತ್ತಡಕ್ಕೊಳಗಾಗಿರುವುದು, ಪತಿಯ ಮದ್ಯಪಾನ ಚಟ, ತಾಯ್ತನ ಪಾತ್ರ ನಿಭಾಯಿಸುವಿಕೆ ಕುರಿತಾಗಿರುವ ವರ್ತನೆಗಳು, ಮತ್ತು ಕುಗ್ಗುವಿಕೆ.
-ಗರ್ಭಾವಧಿ/ನವಜಾತ ಶಿಶು ಸಂಬಂಧಿ ಅಪಾಯ ಅಂಶಗಳು
ಈ ಹಿಂದೆ ಗರ್ಭಪಾತವಾಗಿರುವ ಅಥವಾ ಗರ್ಭದಲ್ಲಿಯೇ ಭ್ರೂಣ ಮರಣವಾಗಿರುವ ಪೂರ್ವಾಪರ, ಈ ಹಿಂದಿನ ಗರ್ಭಾವಧಿಯಲ್ಲಿ ಕಷ್ಟಕರ ಅನುಭವವಾಗಿರುವುದು, ಹಿಂದೆ ಮಗುವಿನಾ ವರ್ತನಾ ಬದಲಾವಣೆಗಳು, ಮಗುವಿನ ಆರೋಗ್ಯ ಸಮಸ್ಯೆಗಳು, ಮಗುವಿಗೆ ಎದೆಹಾಲುಣಿಸುವಲ್ಲಿನ ಸಮಸ್ಯೆಗಳು.
 ಆಚಾರ ವಿಚಾರ ಸಂಬಂಧಿ ಅಂಶಗಳು
ಯೋಜಿತ/ಯೋಜಿತವಲ್ಲದ ಗರ್ಭಧಾರಣೆ, ಅಪೇಕ್ಷಿತ/ಅನಪೇಕ್ಷಿತ ಮಗುವಿನ ಲಿಂಗ, ಗಂಡು ಮಗು ಬೇಕೆಂಬ ಯಾವುದೇ ರೀತಿಯ ಒತ್ತಡ.
 ಕೌಟುಂಬಿಕ/ಸಾಮಾಜಿಕ ಅಪಾಯ ಅಂಶಗಳು
ಪತಿಯೊಂದಿಗೆ, ಹೆತ್ತವರೊಂದಿಗಿನ ಮತ್ತು ಸೋದರ ಸಂಬಂಧಿಗಳೊಂದಿಗಿನ ಸಂಬಂಧ ಮತ್ತು ಬೆಂಬಲದ ಸಮಸ್ಯೆಗಳು, ಗೃಹ ಹಿಂಸೆ/ಸಂಗಾತಿಯಿಂದ ಹಿಂಸೆ, ವೈವಾಹಿಕ ಅಸಮಧಾನತೆ, ಕುಟುಂಬ ಸದಸ್ಯರಿಂದ ವ್ಯಕ್ತಿಗತ ಸಹಾಯದ ಕೊರತೆ ಮತ್ತು ಹಣಕಾಸಿನ ಸಮಸ್ಯೆಗಳು.

ಮಗು ಹುಟ್ಟಿದ ಬಳಿಕ ಮಹಿಳೆಯೊಬ್ಬರು ಖನ್ನತೆಯ ಸಮಸ್ಯೆಗೆ ಒಳಗಾಗುವಿಕೆಯು ಮಕ್ಕಳಿಲ್ಲದ ಮಹಿಳೆಯ ಖಿನ್ನತಾ ಸಾಧ್ಯತೆಗಿಂತ ಸ್ವಲ್ಪ ಕಡಿಮೆಯಿರುತ್ತದೆ ಮತ್ತು ಇನ್ನೊಂದು ಬಾರಿ ಗರ್ಭಾವಧಿಯ ಖಿನ್ನತೆಗೊಳಗಾಗುವಿಕೆಯ ಸಾಧ್ಯತೆಯು ಹೆಚ್ಚಿರುತ್ತದೆ.

Advertisement

ಚಿಹ್ನೆ ಮತ್ತು ಲಕ್ಷಣಗಳು
ಸಾಮಾನ್ಯ ಖಿನ್ನತೆಯ ಸಮಸ್ಯೆಯಂತೆಯೇ, ಹೆರಿಗೆ ಬಳಿಕದ ಖಿನ್ನತೆ ಸಮಸ್ಯೆಯು ಸಾಧಾರಣ ಸ್ವರೂಪದಿಂದ (ಕೆಲವು ತಿಂಗಳುಗಳವರೆಗೆ ಇರುವುದು) ತೀವ್ರ ಸ್ವರೂಪದವರೆಗೆ (ವರ್ಷಗಳವರೆಗೆ ಇರುವುದು) ಕಾಣಿಸಿಕೊಳ್ಳುವ ಸಾಧ್ಯತೆಗಳಿರುತ್ತದೆ. ಮಾತ್ರವಲ್ಲದೆ ಇದೇ ಸಂದರ್ಭದಲ್ಲಿ ಕೆಲವರು ಬಹಳಷ್ಟು ರೀತಿಯ ಲಕ್ಷಣಗಳನ್ನು ಅನುಭವಿಸುವ ಸಾಧ್ಯತೆಗಳಿರುತ್ತದೆ. ಇನ್ನು ಕೆಲವರಿಗೆ ಸ್ವಲ್ಪ ಪ್ರಮಾಣದ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಹೆಚ್ಚಿನ ಪ್ರಕರಣಗಳಲ್ಲಿ ಹೆರಿಗೆ ಬಳಿಕದ ಲಕ್ಷಣಗಳು ಮಗುವಿನ ಜನನವಾದ ತತ್‌ಕ್ಷಣವೇ ಪ್ರಾರಂಭವಾಗುತ್ತದೆ. ಮತ್ತು ಇದು ಈ ಕಾರಣಕ್ಕಾಗಿಯೇ ಪತ್ತೆಯಾಗದ ಸ್ವರೂಪದಲ್ಲಿಯೇ ಉಳಿದುಕೊಂಡುಬಿಡುತ್ತದೆ. ಕೆಲವೊಮ್ಮೆ ಇದನ್ನು ಹೆರಿಗೆ ಬಳಿಕದ ಭಾವನೆಗಳ ಬದಲಾವಣೆ (ಬೇಬಿ ಬ್ಲೂಸ್‌) ಎಂದೇ ತಪ್ಪಾಗಿ ಗುರುತಿಸಲಾಗುತ್ತದೆ.

ಹೆರಿಗೆ ಬಳಿಕದ ಖಿನ್ನತೆಯ ಲಕ್ಷಣಗಳು ಈ ರೀತಿಯಾಗಿವೆ:
ಭಾವನೆಗಳಲ್ಲಿ ಬದಲಾವಣೆ
ಭಾವನೆಗಳು ಕುಂದಿಹೋಗುವುದು ಅಥವಾ ತೀವ್ರಸ್ವರೂಪದಲ್ಲಿ ಬೇಸರದ ಭಾವಕ್ಕೊಳಗಾಗುವುದು, ಅಸಮಂಜಸ ಕಾರಣಗಳಿಗಾಗಿ ಅಳುವಿನ ವಿಚಾರಗಳು, ಸಂಬಂಧಗಳಲ್ಲಿ ಅಥವಾ ಸುತ್ತಮುತ್ತಲಿನವರಲ್ಲಿ ಆಸಕ್ತಿ ಕಡಿಮೆಯಾಗುವುದು, ಹತಾಶರಾಗಿರುವುದು ಅಥವಾ ತುಂಬಾ ಚಿಂತೆಗೊಳಗಾಗುವುದು. ತೀವ್ರ ಸ್ವರೂಪದಲ್ಲಿ ಆತಂಕಕ್ಕೊಳಗಾಗುವುದು ಮತ್ತು ಮಗುವನ್ನು ಅತೀಯಾಗಿ ಕಾಳಜಿ ಮಾಡುವುದು.

ನಿಭಾಯಿಸುವಿಕೆಯ ಅಸಮರ್ಥತೆಗಳು
ಭಾವನೆಗಳ ಸಂವೇದನಗಳು ಮನಸ್ಸನ್ನೆಲ್ಲ ತುಂಬಿಕೊಂಡು ಅವುಗಳನ್ನು ನಿಭಾಯಿಸಲು ಸಾಧ್ಯವಾಗದಿರುವುದು. ದೈನಂದಿನ ಕೆಲಸಕಾರ್ಯಗಳು, ಮಗುವಿನ ಪಾಲನೆ ಆಥವಾ ತನ್ನ ಬಗೆಗೆ ಕಾಳಜಿ ವಹಿಸಿಕೊಳ್ಳಲು ಅಸಾಧ್ಯವಾಗುವ ಪರಿಸ್ಥಿತಿ. ಈ ಹಿಂದೆ ಆಕೆ ಸುಲಭವಾಗಿ ನಿಭಾಯಿಸುತ್ತಿದ್ದ ಸಣ್ಣಪುಟ್ಟ ಬೇಡಿಕೆಗಳೂ ಈಗ ದೊಡ್ಡದಾಗಿ ಸಾಧಿಸಲಸಾಧ್ಯವಾಗಿ ಕಾಣಿಸಿಕೊಳ್ಳಬಹುದು. ತಾನೆಲ್ಲೋ ಕಳೆದು ಹೋದಂತೆ, ಅತಿಯಾಗಿ ದಣಿವಾದಂತೆ ಮತ್ತು ದೈಹಿಕವಾಗಿ ಹಾಗೂ ಭಾವನಾತ್ಮಕವಾಗಿ ಬಳಲಿದಂತೆ ಅನ್ನಿಸಬಹುದು ಅಥವಾ ಇವೆಲ್ಲವೂ ನಿವಾರಣೆಯಾಗಲಿ ಎಂದು ಆಕೆ ಹಂಬಲಿಸಬಹುದು.

ನಿದ್ರೆ ಅಥವಾ ಹಸಿವಿನಲ್ಲಿ ಬದಲಾವಣೆ
ನಿದ್ರೆ ಬರದಿರುವಿಕೆ ಅಥವಾ ಮುಂಜಾನೆಯ ಸಮಯದಲ್ಲಿ ಎಚ್ಚರಗೊಳ್ಳುವುದು ಮತ್ತು ಆನಂತರ ನಿದ್ರೆ ಬರದಿರುವುದು. ಆಹಾರ ಸೇವಿಸಲು ಆಗದಿರುವುದು ಅಥವಾ ಅತಿಯಾಗಿ ತಿನ್ನುವುದು.

ಶಕ್ತಿಹೀನತೆ
ನಿರಂತರವಾಗಿ ಸುಸ್ತಿನ ಅನುಭವವಾಗುವುದು. ನಿದ್ರೆಯಿಂದ ಎದ್ದೇಳಲು ಮತ್ತು ಯಾವುದೇ ಕೆಲಸವನ್ನು ಮಾಡಲು ಚೈತನ್ಯವಿಲ್ಲದಿರುವುದು, ಎಲ್ಲವೂ ನಿಮ್ಮ ಸುತ್ತಲೂ ಸುತ್ತಿಕೊಂಡಿದೆ ಎಂಬ ಭಾವನೆಯುಂಟಾಗುವುದು.

-ಸವಿತಾ ಪ್ರಭು
ಅಸಿಸ್ಟೆಂಟ್‌ ಪ್ರೊಫೆಸರ್‌
ಸೈಕಿಯಾಟ್ರಿಕ್‌ ನರ್ಸಿಂಗ್‌ ವಿಭಾಗ, ಮಣಿಪಾಲ ನರ್ಸಿಂಗ್‌ ಕಾಲೇಜು, ಮಾಹೆ, ಮಣಿಪಾಲ

-ಡಾ| ಶ್ಯಾಮಲಾ ಜಿ.
ಪ್ರಾಧ್ಯಾಪಕರು ಮತ್ತು ಯುನಿಟ್‌ ಮುಖ್ಯಸ್ಥರು
ಪ್ರಸೂತಿ ಮತ್ತು ಸ್ತ್ರೀರೋಗಶಾಸ್ತ್ರ ವಿಭಾಗ
ಕಸ್ತೂರ್ಬಾ ಆಸ್ಪತ್ರೆ, ಮಾಹೆ, ಮಣಿಪಾಲ

 

Advertisement

Udayavani is now on Telegram. Click here to join our channel and stay updated with the latest news.

Next