ಮಂಗಳೂರು: ಸಂಸ್ಕಾರ, ಸಂಸ್ಕೃತಿ ಎಂಬುವುದು ಪುನೀತ್ ರಾಜ್ ಕುಮಾರ್ ಅವರ ರಕ್ತದಲ್ಲಿ ಬೆಸೆದುಕೊಂಡಿತ್ತು. ಅಸಾಮಾನ್ಯ ಕಲಾವಿದರಾಗಿದ್ದ ಪುನೀತ್ ಕನ್ನಡಿಗರ ಹೃದಯ ಗೆದ್ದಿದ್ದರು. ಅಪ್ಪು ಅವರಿಗೆ ಯಾರಿಗೂ ಸಿಗದ ಯಶಸ್ಸು ಸಿಕ್ಕಿದ್ದು, ಅಂತಹ ವ್ಯಕ್ತಿಗೆ ಮರಣೋತ್ತರವಾಗಿ “ವಿಶುಕುಮಾರ್ ಪ್ರಶಸ್ತಿ’ ನೀಡಿರುವುದು ಪ್ರಸ್ತುತ ಎಂದು ಹಿರಿಯ ನಿರ್ಮಾಪಕ, ಕರ್ನಾಟಕ ವಾಣಿಜ್ಯ ಚಲನಚಿತ್ರ ಮಂಡಳಿಯ ಮಾಜಿ ಅಧ್ಯಕ್ಷ ಹಾಗೂ ಪುನೀತ್ ಅವರ ಸೋದರ ಮಾವ ಚಿನ್ನೇಗೌಡ ಹೇಳಿದರು.
ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಮತ್ತು ವಿಶುಕುಮಾರ್ ದತ್ತಿನಿಧಿ ಸಮಿತಿ ಸಹಯೋಗದಲ್ಲಿ ರವಿವಾರ ನಗರದ ಕುದು¾ಲ್ ರಂಗರಾವ್ ಪುರಭವನದಲ್ಲಿ ದಿ| ಡಾ| ಪುನಿತ್ ರಾಜ್‌ಕುಮಾರ್ ಅವರಿಗೆ ಮರಣೋತ್ತರವಾಗಿ ನೀಡಲಾದ 20ನೇ ವರ್ಷದ “ವಿಶುಕುಮಾರ್ ಪ್ರಶಸ್ತಿ’ ಯನ್ನು ಅಶ್ವಿನಿ ಪುನೀತ್ ರಾಜ್‌ಕುಮಾರ್ ಪರವಾಗಿ ಸ್ವೀಕರಿಸಿ ಅವರು ಮಾತನಾಡಿದರು.
ಪುನೀತ್ ಅವರ ಬಾಳಲ್ಲಿ ವಿಧಿ ಕ್ರೌರ್ಯ ಮೆರೆದಿದೆ. ಪುನೀತ್ ಎಂದಿಗೂ ಯಾರಿಗೂ ನೋವುಂಟು ಮಾಡಿದ ವ್ಯಕ್ತಿಯಲ್ಲ. ಮಿಂಚಿನಂತೆ ಬಂದು ಮಿಂಚಿನಂತೆ ನಿರ್ಗಮಿಸಿದರು. ಪುನೀತ್ ಹೆಸರಲ್ಲಿ ಮಾಯೆ ಅಡಗಿದ್ದು, ತಂದೆಯನ್ನೇ ಮೀರಿ ಬೆಳೆದು ನಿಂತರು ಎಂದರು.
ಚಲನಚಿತ್ರ ನಿರ್ದೇಶಕ ಸಿ.ಪಿ. ಶೇಷಾದ್ರಿ ಮಾತನಾಡಿ, “ವಿಶುಕುಮಾರ್ ಪ್ರಶಸ್ತಿ’ ಜನ ನೀಡುವ ಪ್ರಶಸ್ತಿಯಾಗಿದ್ದು, ಇದಕ್ಕೆ ವಿಶೇಷ ಮಹತ್ವವಿದೆ. ಪಾರದರ್ಶಕತೆ ಉಳಿಸಿಕೊಂಡ ಈ ಪ್ರಶಸ್ತಿಗೆ ಸೂಕ್ತ ವ್ಯಕ್ತಿಯ ಆಯ್ಕೆಯಾಗಿದೆ. ದಿ| ಪುನಿತ್ ರಾಜ್ ಕುಮಾರ್ ಅವರು ಚಲನಚಿತ್ರದ ಮೂಲಕ ಜನರ ಮನಗೆದ್ದು, ಅಲ್ಪಾವಧಿಯಲ್ಲಿ ಶ್ರೇಷ್ಠ ಸಾಧನೆಗೈದಿದ್ದಾರೆ ಎಂದು ತಿಳಿಸಿದರು. ಸುಪ್ರಿತಾ ಚರಣ್ ಪಾಲಪ್ಪೆ ಅವರಿಗೆ ಯುವವಾಹಿನಿ ಯುವ ಸಾಹಿತ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಚಲನಚಿತ್ರ ನಿರ್ದೇಶಕ ವಿಜಯ್ ಕುಮಾರ್ ಕೊಡಿಯಾಲಬೈಲು, ಹಿರಿಯ ಪತ್ರಕರ್ತ ಗಿರೀಶ್ ರಾವ್ ಹತ್ವಾರ್, ವಿಶುಕುಮಾರ್ ಅವರ ಪತ್ನಿ, ಹೈಕೋರ್ಟ್ ವಕೀಲೆ ವಿಜಯಲಕ್ಷ್ಮೀ ವಿಶುಕುಮಾರ್, ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ರಾಜೇಶ್ ಪಿ., ಪ್ರಮುಖ ರಾದ ಮೋಹಿನಿ, ಕುಸುಮಾಕರ್ ಕುಂಪಲ, ಶಂಕರ್ ಸುವರ್ಣ, ನರೇಶ್ ಕುಮಾರ್ ಸಸಿಹಿತ್ಲು ,ಭಾಸ್ಕರ್ ಕೊಟ್ಯಾನ್ ಕೂಳೂರು, ಮಹೇಶ್ ಕುಮಾರ್, ರಮೇಶ್ ಕಲ್ಮಾಡಿ, ರತ್ನಾವತಿ ಬೈಕಾಡಿ, ಸಂಜಿತ್ ಉಪಸ್ಥಿತರಿದ್ದರು.