Advertisement

Poster Dispute: ಭಾರತ ಭೂಶಿರ ವಿರೂಪ: ಬಿಜೆಪಿಯ ಇಂದಿನ ಪ್ರತಿಭಟನೆ ರದ್ದು

04:37 AM Dec 27, 2024 | Team Udayavani |

ಬೆಂಗಳೂರು: ಭಾರತದ ಭೂಶಿರವನ್ನು ಕಾಂಗ್ರೆಸ್‌ ವಿರೂಪಗೊಳಿಸಿದ್ದು, ಇದರ ವಿರುದ್ಧ ಶುಕ್ರವಾರ ಬೆಂಗಳೂರಿನ ವಿಧಾನಸೌಧ ಆವರಣದಲ್ಲಿನ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಪ್ರತಿಭಟಿಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಪಕ್ಷದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಆದರೆ ಗುರುವಾರ ರಾತ್ರಿ ವೇಳೆಗೆ ಮಾಜಿ ಪ್ರಧಾನ ಮಂತ್ರಿ ನಿಧನರಾದ ಸುದ್ದಿ ತಿಳಿದು ಪ್ರತಿಭಟನೆ ಕೈಬಿಟ್ಟಿರುವುದಾಗಿ ಬಿಜೆಪಿ ಹೇಳಿದೆ.

Advertisement

ಶುಕ್ರವಾರ ಬೆಳಗ್ಗೆ 10.30ಕ್ಕೆ ಪಕ್ಷದ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಇದು ರದ್ದಾಗಿದೆ. ಜನರ ತೆರಿಗೆ ಹಣ ಬಳಸಿ ಬೆಳಗಾವಿಯಲ್ಲಿ ಮಹಾಧಿವೇಶನ ಮಾಡುತ್ತಿರುವ ಕಾಂಗ್ರೆಸ್‌, ಗಾಂಧಿ ಭಾರತ ಹೆಸರಿನಲ್ಲಿ ಭಾರತದ ಭೂಪಟವನ್ನೇ ಬದಲಿಸಿ ಬೆಳಗಾವಿಯ ತುಂಬೆಲ್ಲಾ ಪೋಸ್ಟರ್‌ ಹಾಕಿದೆ ಎಂದರು.

ಕಾಂಗ್ರೆಸ್‌ ಪಕ್ಷ ಇತ್ತೀಚೆಗೆ ಅಂಬೇಡ್ಕರ್‌ರನ್ನು ಹೆಚ್ಚು ಸ್ಮರಣೆ ಮಾಡಿಕೊಳ್ಳುತ್ತಿದೆ. ಸ್ವಾತಂತ್ರ್ಯ  ನಂತರ ತಾತ್ಕಾಲಿಕ ಸರಕಾರಕ್ಕೆ ಪ್ರಧಾನಿ ಆಗಿದ್ದ ಜವಾಹರ್‌ಲಾಲ್‌ ನೆಹರೂ ಅವರಿಂದ ಹಿಡಿದು ಈವರೆಗಿನ ಕಾಂಗ್ರೆಸ್‌ ಪಕ್ಷದವರು ಅವಕಾಶ ಸಿಕ್ಕಾಗಲೆಲ್ಲಾ ಅಂಬೇಡ್ಕರ್‌ರನ್ನು ಅಪಮಾನಿಸಿದ್ದೇ ಹೆಚ್ಚು. ಅಂಬೇಡ್ಕರ್‌ ಅವರು ಮಂತ್ರಿಯಾಗಿ ಜನಪ್ರಿಯತೆ ಗಳಿಸಿದ್ದನ್ನು ಕಾಂಗ್ರೆಸ್‌ ಸಹಿಸಲಿಲ್ಲ. ಅವರ ಪ್ರಭಾವ ಹೆಚ್ಚಾದರೆ ಇವರ ಬೇಳೆ ಬೇಯುವುದಿಲ್ಲ ಎಂದು ಅವರು ಹಿಂಸೆ ಕೊಟ್ಟರು. ಅದರಿಂದಲೇ ಅಂಬೇಡ್ಕರ್‌ ಮಂತ್ರಿಮಂಡಲದಿಂದ ಹೊರಬಂದಿದ್ದರು. ಕಾಂಗ್ರೆಸಿನ ಸುಡುವ ಮನೆಯಲ್ಲಿ ಪರಿಶಿಷ್ಟರಿಗೆ ಭವಿಷ್ಯವಿಲ್ಲ ಎಂದಿದ್ದರು ಅಂಬೇಡ್ಕರ್‌ ಎಂದು ವಿಜಯೇಂದ್ರ ಹೇಳಿದರು.

ಸರಕಾರದ ಹಣದಲ್ಲಿ ಪಕ್ಷದ ಕಾರ್ಯಕ್ರಮ
ಸರಕಾರದ ಹಣವನ್ನು ಬಳಸಿ ಬೆಳಗಾವಿಯಲ್ಲಿ ಕಾಂಗ್ರೆಸ್‌ ಸರಕಾರ ತನ್ನ ಪಕ್ಷದ ಸಮಾವೇಶವನ್ನು ಮಾಡುತ್ತಿರುವುದು ಖಂಡನೀಯ. ಇದರ ವಿರುದ್ಧ ವಿಧಾನಸೌಧ ಮುಂಭಾಗ ಶುಕ್ರವಾರ ಪ್ರತಿಭಟಿಸಲಾಗುವುದು ಎಂದು ವಿಪಕ್ಷ ನಾಯಕ ಆರ್‌. ಅಶೋಕ್‌ ಹೇಳಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ದೇಶದ ಪ್ರಧಾನಿಯನ್ನಾಗಲೀ, ಕೇಂದ್ರದ ಸಚಿವರುಗಳನ್ನಾಗಲೀ ಆಹ್ವಾನಿಸದೆ ಕಾಂಗ್ರೆಸ್‌ ಪಕ್ಷದ ನಾಯಕರನ್ನು ಮಾತ್ರ ಸಮಾವೇಶಕ್ಕೆ ಆಹ್ವಾನಿಸಲಾಗಿದೆ. ಇದು ಸರಕಾರಿ ಕಾರ್ಯಕ್ರಮವಲ್ಲ, ಕಾಂಗ್ರೆಸ್‌ ಪಕ್ಷದ ಕಾರ್ಯಕ್ರಮ. ಹೀಗಾಗಿ ನಾವ್ಯಾರೂ ಹೋಗುವುದಿಲ್ಲ. ವಿಧಾನಸೌಧ ಮುಂಭಾಗದ ಗಾಂಧಿ ಪ್ರತಿಮೆಗೆ ನಾವೆಲ್ಲರೂ ಪುಷ್ಪ ನಮನ ಸಲ್ಲಿಸಲಿದ್ದೇವೆ ಎಂದು ತಿಳಿಸಿದರು.

Advertisement

ಕಾಂಗ್ರೆಸ್‌ನವರು ಅಖಂಡ ಭಾರತವನ್ನು ಒಡೆದು ಹಾಕಿದ್ದರು. ನಾವು ಅಖಂಡ ಭಾರತದ ಚಿತ್ರ ತೋರಿಸಿದರೆ, ಕಾಂಗ್ರೆಸ್‌ನವರು ಜಮ್ಮು-ಕಾಶ್ಮೀರ ಇಲ್ಲದ ಭಾರತದ ಚಿತ್ರ ತೋರಿಸುತ್ತಿದ್ದಾರೆ. ಭಾರತದ ಭೂಪಟವನ್ನೇ ಛಿದ್ರ ಮಾಡಿರುವುದು ಖಂಡನೀಯ. ಕಾಂಗ್ರೆಸ್‌ ಇಡೀ ದೇಶವನ್ನು ಒಡೆಯುವ ಮನಸ್ಥಿತಿ ಹೊಂದಿದೆ. ಅವರ ಈ ಮನಸ್ಥಿತಿ ವಿರುದ್ಧ ಪ್ರತಿಭಟಿಸುತ್ತೇವೆ.
– ಆರ್‌.ಅಶೋಕ್‌, ವಿಧಾನಸಭೆ ವಿಪಕ್ಷ ನಾಯಕ

ಅಂಬೇಡ್ಕರರನ್ನು ತುಚ್ಚವಾಗಿ ನಡೆಸಿಕೊಂಡ ಕಾಂಗ್ರೆಸ್‌, 370ನೇ ವಿಧಿ ಹೇರುವ ಮೂಲಕ ಓಲೈಕೆ ರಾಜಕಾರಣ ಆರಂಭಿಸಿತ್ತು. ಕಾಂಗ್ರೆಸಿನ ಈ ತಪ್ಪು ನೀತಿಗಳ ವಿರುದ್ಧ ಆರಂಭವಾದ ಜನಸಂಘ, ಇಂದು 370ನೇ ವಿಧಿಯನ್ನು ರದ್ದು ಮಾಡುವ ಮೂಲಕ ದೇಶದ ಅಖಂಡತೆಯನ್ನು ಎತ್ತಿ ಹಿಡಿದಿದೆ. ಅಂಬೇಡ್ಕರ್‌ ಅವರ ಸಿದ್ಧಾಂತಗಳನ್ನು ಬೆಂಬಲಿಸಲೆಂದೇ ಬಿಜೆಪಿ ಹುಟ್ಟಿದ್ದು.
ಛಲವಾದಿ ನಾರಾಯಣಸ್ವಾಮಿ, ಮೇಲ್ಮನೆ ವಿಪಕ್ಷ ನಾಯಕ

ಕಾಂಗ್ರೆಸ್‌ ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮಕ್ಕೆ ನನಗೆ ಆಹ್ವಾನ ನೀಡಿಲ್ಲ. ಮುಖ್ಯಮಂತ್ರಿಗಳು ತಮ್ಮ ಸಮ್ಮುಖದಲ್ಲೇ ಶೆಟ್ಟರ್‌ ಅವರಿಗೆ ಕರೆ ಮಾಡಿ ಖುದ್ದು ಆಹ್ವಾನ ನೀಡಿದ್ದಾರೆಂಬ ಡಿ.ಕೆ. ಶಿವಕುಮಾರ್‌ ಹೇಳಿಕೆ ಶುದ್ಧ ಸುಳ್ಳು.
– ಜಗದೀಶ ಶೆಟ್ಟರ್‌, ಸಂಸದ

Advertisement

Udayavani is now on Telegram. Click here to join our channel and stay updated with the latest news.

Next