ಬೆಂಗಳೂರು: ರಸ್ತೆ ಅಪಘಾತದಲ್ಲಿ ಗಾಯಗೊಂಡ ಜೈನ ಮುನಿಗಳ ಮೇಲೆ ಅನ್ಯ ಕೋಮಿನ ಯುವಕರು ದಾಳಿ ನಡೆಸಿದ್ದಾರೆ ಎಂದು ತಮ್ಮ ಪೋಸ್ಟ್‌ಕಾರ್ಡ್ ನ್ಯೂಸ್ ವೆಬ್‌ಸೈಟ್‌ನಲ್ಲಿ ಸುಳ್ಳು ಸುದ್ದಿ ಪ್ರಕಟಿಸಿದ ಆರೋಪದ ಮೇಲೆ ಮಹೇಶ್ ವಿಕ್ರಂ ಹೆಗಡೆಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಒಂದು ಧರ್ಮದ ಯುವಕರು ಇನ್ನೊಂದು ಧರ್ಮದ ಸನ್ಯಾಸಿಯ ಮೇಲೆ ದಾಳಿ ನಡೆಸಿದ್ದಾರೆ ಎಂಬ ಅರ್ಥದಲ್ಲಿ ಮಹೇಶ್ ವಿಕ್ರಂ ಹೆಗಡೆ ತಮ್ಮ ವೆಬ್‌ಸೈಟ್‌ನಲ್ಲಿ ವರದಿ ಪ್ರಕಟಿಸಿದ್ದರು. ಈ ಹಿನ್ನೆಲೆಯಲ್ಲಿ ಐಟಿ ಕಾಯ್ದೆ ಅಡಿಯಲ್ಲಿ ಬಂಧಿಸಲಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.
ಮಾ.11ರಂದು ಸಂಜೆ ನಂಜನಗೂಡಿನಿಂದ ಕನಕಗಿರಿಗೆ ಹೊರಟಿದ್ದ ಮಾರ್ಗ ಮಧ್ಯೆ ಕವಲಂದೆ ಗ್ರಾಮದ ಬಳಿ ಸಂಜೆ 6.30ರ ಸುಮಾರಿಗೆ ತೆರಳುವಾಗ ಕಂಠಪೂರ್ತಿ ಮದ್ಯ ಸೇವಿಸಿ ಹಿಂದಿನಿಂದ ವೇಗವಾಗಿ ಬಂದ ಬೈಕ್ ಸವಾರನೊಬ್ಬ ಜೈನಮಹಾಮುನಿ ಹಾಗೂ ಸಹಾಯಕರಿಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಮುನಿಗಳ ಬಲತೋಳು, ಬಲಮೊಣಕೈ, ಹಣೆ ಹಾಗೂ ಮುಖಕ್ಕೆ ಗಾಯಗಳಾಗಿವೆ. ಅನಂತರ ಮುನಿಗಳನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದು, ಗುಣಮುಖರಾಗಿದ್ದಾರೆ.
ಆದರೆ, ಆರೋಪಿ ಮಹೇಶ್ ವಿಕ್ರಂ ಹೆಗಡೆ, ತನ್ನ ಪೋಸ್ಟ್‌ಕಾರ್ಡ್ ನ್ಯೂಸ್ ವೆಬ್‌ಸೈಟ್‌ನಲ್ಲಿ ಎರಡು ಧರ್ಮಗಳ ನಡುವೆ ಕೋಮು ದ್ವೇಷ ಬಿತ್ತಲು ಹಾಗೂ ರಾಜ್ಯ ಸರ್ಕಾರದ ಬಗ್ಗೆ ಕೆಟ್ಟ ಹೆಸರು ತರುವ ದುರುದ್ದೇಶದಿಂದ ಸುಳ್ಳು ಸುದ್ದಿ ಪ್ರಕಟಿಸಿದ್ದಾರೆ. ಇದನ್ನು ಇನ್ನಿಬ್ಬರು ತಮ್ಮ ಟ್ವಿಟರ್‌ನಲ್ಲಿ ಶೇರ್ ಮಾಡಿದ್ದಾರೆ.
ಈ ಸರ್ಕಾರದಲ್ಲಿ ಯಾರು ಸುರಕ್ಷಿತರಲ್ಲ ಎಂಬ ಭಾವನೆಯನ್ನು ಪ್ರಚಾರ ಮಾಡುವ ಉದ್ದೇಶದಿಂದ ಅನ್ಯ ಕೋಮಿನ ಯುವಕರು ಮತ್ತೂಂದು ಧರ್ಮದ ಸನ್ಯಾಸಿಗಳ ಮೇಲೆ ದಾಳಿ ನಡೆಸಿದ್ದಾರೆ ಎಂದು ಸುಳ್ಳು ಸುದ್ದಿ ತಿಳಿಸಿದ್ದಾರೆ ಎಂದು ಗಫರ್ ಎಂಬುವರು ಸೈಬರ್ ಠಾಣೆಗೆ ದೂರು ನೀಡಿದ್ದರು ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.
ಗುರುವಾರ ಬೆಳಗ್ಗೆ ಹೇಡಿ ಕಾಂಗ್ರೆಸ್ ರಾಜ್ಯ ಸರ್ಕಾರವು ಮಹೇಶ್ ವಿಕ್ರಂ ಹೆಗ್ಡೆ ಅವರನ್ನು ಸಂಬಂಧವೇ ಇಲ್ಲದ ಮಾಹಿತಿ ತಂತ್ರಜ್ಞಾನ ಕಾಯ್ದೆ ನಿಯಮ 66ರಡಿ ಬಂಧಿಸಿದೆ. ಸಿಸಿಬಿಯನ್ನು ಈ ಕೃತ್ಯಕ್ಕೆ ಬಳಸಿಕೊಂಡಿದ್ದು, ಕರ್ನಾಟಕ ಕಾಂಗ್ರೆಸ್‌ಗೆ ನಾಚಿಕೆಯಾಗಬೇಕು.
-ಪ್ರತಾಪ್ ಸಿಂಹ, ಸಂಸದ
ವಿಕ್ರಂ ಹೆಗ್ಡೆ ಅವರನ್ನು ಬಂಧಿಸುವ ಮೂಲಕ ಸರ್ವಾಧಿಕಾರಿಯಂತೆ ವರ್ತಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರಕ್ಕೆ ನಾಚಿಕೆಯಾಗಬೇಕು. ನೈಜ ಪ್ರಜಾಪ್ರಭುತ್ವದ ಆಶಯದಂತೆ ನಮ್ಮನ್ನು ಎದುರಿಸುವ ಬದಲಿಗೆ ಹೇಡಿತನದ ಕೃತ್ಯಕ್ಕೆ ಮೊರೆ ಹೋಗಿದೆ.
-ಅನಂತಕುಮಾರ್ ಹೆಗಡೆ, ಕೇಂದ್ರ ಸಚಿವ