Advertisement

ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಅಂಚೆ ನೌಕರರ ಪ್ರತಿಭಟನೆ

04:04 PM Mar 17, 2017 | Team Udayavani |

ಉಡುಪಿ: ಕನಿಷ್ಠ ವೇತನ ಹೆಚ್ಚಳ, 7ನೇ ವೇತನ ಆಯೋಗದ ಶಿಫಾರಸಿನಲ್ಲಿರುವ ತಪ್ಪುಗಳ ಪುನಃ ಪರಿಶೀಲನೆ ಸಹಿತ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಂಚೆ ನೌಕರರ ಸಂಘಗಳ ಜಂಟಿ ಕ್ರಿಯಾ ಸಮಿತಿ ಉಡುಪಿ ವತಿಯಿಂದ ಗುರುವಾರ ಬೆಳಗ್ಗೆಯಿಂದ ಸಂಜೆವರೆಗೆ ಉಡುಪಿಯ ಪ್ರಧಾನ ಅಂಚೆ ಕಚೇರಿ ಮುಂಭಾಗ ಪ್ರತಿಭಟನೆ ನಡೆಯಿತು. 

Advertisement

ದೇಶದಾದ್ಯಂತ ಅಂಚೆ ನೌಕರರ ಪ್ರತಿಭಟನೆಗಳು ನಡೆಯುತ್ತಿದ್ದು, ಉಡುಪಿಯ ಪ್ರಧಾನ ಅಂಚೆ ಕಚೇರಿಯ ಎಲ್ಲ ನೌಕರರು ತಮ್ಮ ಕೆಲಸವನ್ನು ಸ್ಥಗಿತಗೊಳಿಸಿ ಗುರುವಾರ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡರು. 

ಈ ವೇಳೆ ಮಾತನಾಡಿದ ಅಖೀಲ ಭಾರತ ಅಂಚೆ ನೌಕರರ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಬಿ. ವಿಜಯ ನಾಯರಿ ಪ್ರತಿಭಟನೆಗೆ ಕೇಂದ್ರ ಸರಕಾರವು ಸಕರಾತ್ಮಕವಾಗಿ ಸ್ಪಂದಿಸುವ ಭರವಸೆಯಿದೆ. ಒಂದು ವೇಳೆ ನಮ್ಮ ಬೇಡಿಕೆಯನ್ನು ನಿರ್ದಿಷ್ಟ ಅವಧಿಯೊಳಗೆ ಈಡೇರಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಎಲ್ಲ ಅಂಚೆ ನೌಕರರು, ಪೋಸ್ಟ್‌ಮನ್‌ಗಳು ಕೆಲಸ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎನ್ನುವ ಎಚ್ಚರಿಕೆ ನೀಡಿದರು. 

ಅಂಚೆ ನೌಕರರ ಬೇಡಿಕೆಗಳೇನು?
– 7ನೇ ವೇತನ ಆಯೋಗದ ಲೋಪದೋಷಗಳನ್ನು ಸರಿಪಡಿಸಬೇಕು, ಕನಿಷ್ಠ  ವೇತನದಲ್ಲಿ ಹೆಚ್ಚಳ.

-ಮನೆ ಬಾಡಿಗೆ ಭತ್ಯೆ, ಸಂಚಾರ ಭತ್ಯೆಯನ್ನು ಹೆಚ್ಚಿಸಬೇಕು.

Advertisement

-ಗ್ರಾಮೀಣ ಅಂಚೆ ನೌಕರರನ್ನು ಖಾಯಂಗೊಳಿಸಿ ಅವರಿಗೆ ವೇತನ ಹಾಗೂ ಎಲ್ಲ ಭತ್ಯೆ ನೀಡಬೇಕು.

-ಪಿಂಚಣಿದಾರರಿಗೆ ಜಂಟಿ ಕ್ರಿಯಾ ಸಮಿತಿ ನೀಡಿರುವ ಪಿಂಚಣಿ ಶಿಫಾರಸನ್ನು ಈಡೇರಿಸಬೇಕು.

– ದಿನಗೂಲಿ, ಗುತ್ತಿಗೆ, ಹಂಗಾಮಿ ನೌಕರರನ್ನು ಖಾಯಂಗೊಳಿಸಿ ಅವರಿಗೂ ಸಮಾನ ವೇತನ, ಸೌಲಭ್ಯಗಳನ್ನು ನೀಡಬೇಕು.

-ಸರಕಾರಿ ಕೆಲಸಗಳನ್ನು  ಹೊರಗುತ್ತಿಗೆಗೆ ನೀಡಿ ಖಾಸಗೀಕರಣಗೊಳಿಸಬಾರದು.

ಪ್ರತಿಭಟನೆಯಲ್ಲಿ  ಅಂಚೆ ನೌಕರರ ಸಂಘದ ಅಧ್ಯಕ್ಷ ಎಚ್‌. ಕೆ. ಭಾಸ್ಕರ ಶೆಟ್ಟಿ, ಕಾರ್ಯದರ್ಶಿ ರಾಜೇಶ್‌ ಎಂ. ಕೆ., ಖಜಾಂಚಿ ಎಚ್‌. ಉಮೇಶ್‌ ನಾಯಕ್‌, ರಾಜ್ಯ ಅಂಚೆ ನೌಕರರ ಸಂಘದ ಅಧ್ಯಕ್ಷ ಗುರುಪ್ರಸಾದ್‌, ಕಾರ್ಯದರ್ಶಿ ಸುರೇಶ್‌ ಕೆ., ಖಜಾಂಚಿ ಗುರುರಾಜ ಆಚಾರ್ಯ ಎಂ., ಎ. ನರಸಿಂಹ ನಾಯಕ್‌, ವಾಸುದೇವ ತೊಟ್ಟಂ, ಜನಾರ್ದನ  ಉಪಸ್ಥಿತರಿದ್ದರು. 

ಪಿಯು ಉತ್ತರ ಪತ್ರಿಕೆಗಳಿಗೆ ಸಮಸ್ಯೆಯಿಲ್ಲ
ಪ್ರತಿ ದಿನ ದ್ವಿತೀಯ ಪಿಯು ಪರೀಕ್ಷೆಯ ಉತ್ತರ ಪತ್ರಿಕೆಯನ್ನು ಅಂಚೆ ಇಲಾಖೆಯಿಂದಲೇ ಬೆಂಗಳೂರಿನ ಪಿಯು ಮಂಡಳಿಗೆ ಕಳುಹಿಸಲಾಗುತ್ತಿತ್ತು. ಆದರೆ ಗುರುವಾರದ ಅಂಚೆ ನೌಕರರ ಒಂದು ದಿನದ ಪ್ರತಿಭಟನೆಯಿಂದಾಗಿ ಈ ಪ್ರಕ್ರಿಯೆಗೆ ತೊಡಕಾಗಿದ್ದು, ಒಂದು ದಿನದ ಮಟ್ಟಿಗೆ ಉತ್ತರ ಪತ್ರಿಕೆಗಳೆಲ್ಲವನ್ನು ಜಿಲ್ಲಾ ಖಜಾನೆಯಲ್ಲಿಟ್ಟು ಶುಕ್ರವಾರ ಕಳಹಿಸುವ ವ್ಯವಸ್ಥೆ ಮಾಡಲಾಗುವುದು. ಇದರಿಂದ ಯಾವುದೇ ಸಮಸ್ಯೆ ಇಲ್ಲ ಎಂದು ಪಿಯು ಶಿಕ್ಷಣ ಮಂಡಳಿ ನಿರ್ದೇಶಕ ಬಿ. ರಾಮ್‌ ನಾಯಕ್‌ ತಿಳಿಸಿದ್ದಾರೆ. 
 

Advertisement

Udayavani is now on Telegram. Click here to join our channel and stay updated with the latest news.

Next