ಕಲಬುರಗಿ: ಗ್ರಾಮೀಣ ಅಂಚೆ ಸೇವಕರ ಸೇವೆಯನ್ನು ಗುರುತಿಸಿ ಜನತೆ ಪ್ರೀತಿಯಿಂದ “ಅಂಚೆ ಅಣ್ಣ’ ಎಂದು
ಕರೆಯುತ್ತಾರೆ. ಆದರೆ, ನಮ್ಮನ್ನು ಆಳುವ ಸರ್ಕಾರಗಳು ಮಾತ್ರ ಅಂಚೆ ಸೇವಕರ ಶ್ರಮ ಗುರುತಿಸದೆ ಕಡೆಗಣಿಸುತ್ತಿವೆ
ಎಂದು ಅಖೀಲ ಭಾರತ ಗ್ರಾಮೀಣ ಅಂಚೆ ಸೇವಕರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಎಸ್. ಮಹಾದೇವಯ್ಯ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಕನ್ನಡ ಭವನದಲ್ಲಿ ರವಿವಾರ ಅಖೀಲ ಭಾರತ ಗ್ರಾಮೀಣ ಅಂಚೆ ಸೇವಕರ ಸಂಘ (ಎಐಜಿಡಿಎಸ್‌ಯು) ಕಲಬುರಗಿ ವಿಭಾಗದ ವತಿಯಿಂದ ಆಯೋಜಿಸಲಾಗಿದ್ದ ದ್ವೈವಾರ್ಷಿಕ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಲ್ಲಿ 120 ವರ್ಷಗಳಿಂದ ಅಂಚೆ ಇಲಾಖೆಯಲ್ಲಿ ಅಂಚೆ ಸೇವಕರ ಹುದ್ದೆ ಇದೆ. ಅಂದಿನಿಂದ ಇಂದಿನವರೆಗೂ
ಅಂಚೆ ಸೇವಕರನ್ನು ಕಾಯಂಗೊಳಿಸುವ ಕ್ರಮವನ್ನು ಯಾವುದೇ ಸರ್ಕಾರಗಳು ಕೈಗೊಂಡಿಲ್ಲ ಎಂದು ಹೇಳಿದರು.
ದಿನಕ್ಕೆ ಎಷ್ಟೇ ಗಂಟೆ ದುಡಿದರೂ ಕೇವಲ 5 ಗಂಟೆ ಕೆಲಸಕ್ಕೆ ಮಾತ್ರ ವೇತನ ನೀಡಲಾಗುತ್ತಿದೆ. ಒಬ್ಬ ಸಾಮಾನ್ಯ
ನೌಕರನಿಗೆ ಸಿಗಬೇಕಾದ ಕನಿಷ್ಠ ವೇತನ, ಬಡ್ತಿ, ಪಿಂಚಣಿ, ರಜೆ ಸೇರಿದಂತೆ ಯಾವುದೇ ಸೌಲಭ್ಯಗಳು ಅಂಚೆ ಸೇವಕರಿಗೆ ಸಿಗುತ್ತಿಲ್ಲ ಎಂದರು.
ಬ್ರಿಟಿಷರ ಕಾಲದ ಕಾನೂನನ್ನೇ ಅನುಸರಿಸಿ ಅಂಚೆ ಸೇವಕರನ್ನು ತುಳಿಯಲಾಗುತ್ತಿದೆ. ಇಲಾಖೆಯಲ್ಲಿ
ಕಾಯಂ ನೌಕರರು ಮತ್ತು ಅಂಚೆ ಸೇವಕರ ನಡುವೆ ಇಬ್ಬಗೆ ನೀತಿಯನ್ನು ಸರ್ಕಾರಗಳು ಹೊಂದಿವೆ. ದೇಶಾದ್ಯಂತ ಅಂಚೆ ಸೇವಕರ ಸ್ಥಿತಿಗತಿ ಸುಧಾರಣೆ ನಿಟ್ಟಿನಲ್ಲಿ ಕಮಲೇಶ್ಚಂದ್ರ ಸಮಿತಿ ಅನೇಕ ಶಿಫಾರಸುಗಳನ್ನು ಮಾಡಿದೆ. ಆದರೆ, ಕೇಂದ್ರ ಸರ್ಕಾರ ಕಮಲೇಶ್ಚಂದ್ರ ಸಮಿತಿ ವರದಿ ಅನುಷ್ಠಾನಗೊಳಿಸುವಲ್ಲಿ ನಿರ್ಲಕ್ಷé ವಹಿಸಿದೆ. ಅಂಚೆ ಸೇವಕರ
ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುವವರೆಗೂ ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು.
ಕಲಬುರಗಿ ಸಹಾಯಕ ಅಂಚೆ ಅಧೀಕ್ಷಕ ಆರ್.ಎಚ್. ಶಿವಾನಂದ, ಯಾದಗಿರಿ ಸಹಾಯಕ ಅಂಚೆ ಅಧೀಕ್ಷಕ ವಿ.ಎಲ್. ಚಿತಕೋಟೆ, ಧಾರವಾಡ ವಲಯ ಸಹಾಯಕ ಕಾರ್ಯದರ್ಶಿ ಎಂ.ಎನ್. ಕುರಹಟ್ಟಿ, ಎಐಜಿಡಿಎಸ್‌ಯು ಕಲಬುರಗಿ ವಿಭಾಗದ ಅಧ್ಯಕ್ಷ ಶಿವರಾಜ ಬಿರಾದಾರ, ಯಾದಗಿರಿ ಉಪ ವಿಭಾಗದ ಅಧ್ಯಕ್ಷ ನಾಗಪ್ಪ, ದಿಂಗಬರ್ ಸಜ್ಜನ, ಪ್ರಫುಲ್‌ಕುಮಾರ ಬೋರಗಾಂವಕರ್, ದೊಡ್ಡಯ್ಯನಾಯಕ, ಕೆ.ಪಿ. ಹೂಗಾರ ಹಾಗೂ ಮತ್ತಿತರರು ಇದ್ದರು.
ದೇಶದಲ್ಲಿ ಕಲಬುರಗಿ ವಿಭಾಗವನ್ನು ಮಾದರಿ ಮಾಡುವ ಉದ್ದೇಶ ಹೊಂದಲಾಗಿದೆ. ಇಲಾಖೆಯಲ್ಲಿ ಶೇ.70ರಷ್ಟು ಗ್ರಾಮೀಣ ಅಂಚೆ ಸೇವಕರಿದ್ದು, ನಿಮ್ಮ ಸಹಕಾರ ಬೇಕಾಗಿದೆ. ಸುಕನ್ಯಾ ಸಮೃದ್ಧಿ, ಅಟಲ್ ಪಿಂಚಣಿ ಉತ್ತಮ ಯೋಜನೆಗಳಾಗಿದ್ದು, ಹೆಚ್ಚಿನ ಖಾತೆ ತೆಗೆದಲ್ಲಿ ಅಂಚೆ ಸೇವಕರಿಗೆ 20ರಿಂದ 42 ವರ್ಷ ನಿರಂತರವಾಗಿ ಕೆಲಸ ಸಿಗುತ್ತದೆ. ಅಧಿಕ ಹಣವೂ ಸಂಪಾದಿಸಬಹುದು. ಬಿ.ಆರ್. ನನಜಿಗ, ಹಿರಿಯ ಅಂಚೆ ಅಧೀಕ್ಷಕ, ಕಲಬುರಗಿ ವಿಭಾಗ