Advertisement

15 ದಿನ ಪೂರೈಸಿದ ಗ್ರಾಮೀಣ ಅಂಚೆ ನೌಕರರ ಪ್ರತಿಭಟನೆ

02:35 AM Jun 06, 2018 | Team Udayavani |

ಪುತ್ತೂರು: ಏಳನೇ ವೇತನ ಆಯೋಗದ ವರದಿಯನ್ನು ಜಾರಿಗೊಳಿಸುವಂತೆ ಆಗ್ರಹಿಸಿ ಪುತ್ತೂರು ಪ್ರಧಾನ ಅಂಚೆ ಕಚೇರಿಯ ಎದುರು ಗ್ರಾಮೀಣ ಅಂಚೆ ನೌಕರರು ನಡೆಸುತ್ತಿರುವ ಧರಣಿ ಮಂಗಳವಾರ 15 ದಿನಗಳನ್ನು ಪೂರೈಸಿದೆ. 150 ಕ್ಕೂ ಮಿಕ್ಕಿ ಮಂದಿ ಗ್ರಾಮೀಣ ಅಂಚೆ ನೌಕರರು ಪ್ರಧಾನ ಅಂಚೆ ಕಚೇರಿ ಮುಂಭಾಗದಲ್ಲಿ ಧರಣಿ ಕುಳಿತು ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿದರು. ಮಹಿಳಾ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡರು.

Advertisement

ಶಾಸಕರ ಭೇಟಿ
ದ.ಕ. ಸಂಸದ ನಳಿನ್‌ ಕುಮಾರ್‌ ಕಟೀಲು ಹಾಗೂ ಪುತ್ತೂರು ಶಾಸಕ ಸಂಜೀವ ಮಠಂದೂರು ಅವರು ಮಂಗಳವಾರ ಧರಣಿ ಸ್ಥಳಕ್ಕೆ ಭೇಟಿ ನೀಡುವುದಾಗಿ ನೌಕರರಿಗೆ ಭರವಸೆ ನೀಡಿದ್ದರು. ನೌಕರರು ನಿರೀಕ್ಷೆಯಲ್ಲಿದ್ದರೂ ಶಾಸಕರು ಮಾತ್ರ ಭೇಟಿ ನೀಡಿದರು. ಮುಂದಿನ ಎರಡು ದಿನಗಳಲ್ಲಿ ಸಂಸದರನ್ನು ಕರೆತರುವುದಾಗಿ ಮಠಂದೂರು ಭರವಸೆ ನೀಡಿದರು.

ಕೇಂದ್ರಕ್ಕೆ ಒತ್ತಡ
ಧರಣಿ ನಿರತರ ಅಹವಾಲು ಕೇಳಿಕೊಂಡ ಶಾಸಕ ಸಂಜೀವ ಮಠಂದೂರು, ಗ್ರಾಮೀಣ ಅಂಚೆ ನೌಕರರ ವೇತನ ಹೆಚ್ಚಳ ಸಹಿತ ವಿವಿಧ ಬೇಡಿಕೆಗಳ ಈಡೇರಿಕೆ ನನ್ನ ವ್ಯಾಪ್ತಿಯಲ್ಲಿ ಇಲ್ಲ. ಆದರೆ ನೌಕರರ ನ್ಯಾಯಯುತ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ಈ ನಿಟ್ಟಿನಲ್ಲಿ ಸಂಸದರ ಮೂಲಕ ಕೇಂದ್ರ ಸರಕಾರಕ್ಕೆ ಒತ್ತಡ ಹೇರುತ್ತೇನೆ. ಕೇಂದ್ರ ಸರಕಾರ ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ಇದೆ ಎಂದರು ಹೇಳಿದರು. ದ.ಕ. ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಜಿ.ಪಂ. ಸದಸ್ಯೆ ಶಯನಾ ಜಯಾನಂದ, ತಾ.ಪಂ. ಸದಸ್ಯ ಸಾಜ ರಾಧಾಕೃಷ್ಣ ಆಳ್ವ, ಬಿಜೆಪಿ ವಕ್ತಾರ ಆರ್‌.ಸಿ. ನಾರಾಯಣ ಶಾಸಕರ ಜತೆಗಿದ್ದರು.

ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘದ ಕರ್ನಾಟಕ ವಲಯ ಉಪಾಧ್ಯಕ್ಷ ಬಿ. ಪ್ರಮೋದ್‌ ಕುಮಾರ್‌, ವಿಭಾಗೀಯ ಅಧ್ಯಕ್ಷ ವಿಠಲ ಪೂಜಾರಿ, ಗೌರವಾಧ್ಯಕ್ಷ ಜಗತ್ಪಾಲ ಹೆಗ್ಡೆ, ಪುತ್ತೂರು ವಿಭಾಗ ವ್ಯಾಪ್ತಿಯ ಪುತ್ತೂರು, ಸುಳ್ಯ, ಬೆಳ್ತಂಗಡಿ, ಬಂಟ್ವಾಳ, ಕಾರ್ಕಳ ವಲಯಗಳ ನೂರಾರು ನೌಕರರು ಪಾಲ್ಗೊಂಡರು.

ಡಿ.ವಿ. ಜತೆ ಮಾತುಕತೆ
ಧರಣಿ ನಿರತರ ಬೇಡಿಕೆಯ ಮೇರೆಗೆ ಸಂಜೀವ ಮಠಂದೂರು ಅವರು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಅವರನ್ನು ದೂರವಾಣಿ ಕರೆಯ ಮೂಲಕ ಸಂಪರ್ಕಿಸಿದರು. ಪ್ರಧಾನಿ ನರೇಂದ್ರ ಮೋದಿಯವರ ಜತೆ ಮಧ್ಯಾಹ್ನದ ಬಳಿಕ ಸಭೆ ನಡೆಯಲಿದ್ದು, ಈ ಸಂದರ್ಭದಲ್ಲಿ ಅಂಚೆ ನೌಕರರ ಪ್ರತಿಭಟನೆ ಹಾಗೂ ಬೇಡಿಕೆಗಳ ಕುರಿತು ಅವರ ಗಮನಕ್ಕೆ ತಂದು ಚರ್ಚಿಸುವುದಾಗಿ ಧರಣಿ ನಿರತ ನೌಕರರಿಗೆ ಡಿ.ವಿ. ಸದಾನಂದ ಗೌಡ ಅವರು ಭರವಸೆ ನೀಡಿದರು.

Advertisement

ಆಶಾಕಿರಣ ಮೂಡಿದೆ
ಡಿ.ವಿ. ಸದಾನಂದ ಗೌಡರು ಪುತ್ತೂರಿನಂತಹ ಗ್ರಾಮೀಣ ಭಾಗದವರಾಗಿರುವುದರಿಂದ ಇಲ್ಲಿನ ಶಾಸಕರ ಮೂಲಕ ಕೇಂದ್ರ ಸಚಿವರ ನೆಲೆಯಲ್ಲಿ ಅವರನ್ನು ಸಂಪರ್ಕಿಸಿದ್ದೇವೆ. ಪ್ರಧಾನಿಯವರ ಜತೆ ಅವರು ಮಾತನಾಡುವ ಭರವಸೆ ನೀಡಿದ್ದಾರೆ. ಈ ಭರವಸೆ ನಮಗೆ ಆಶಾಕಿರಣವನ್ನು ಹೆಚ್ಚಿಸಿದೆ. 
– ಪ್ರಮೋದ್‌ ಕುಮಾರ್‌, ಕರ್ನಾಟಕ ವಲಯ ಉಪಾಧ್ಯಕ್ಷರು

Advertisement

Udayavani is now on Telegram. Click here to join our channel and stay updated with the latest news.

Next