Advertisement

ಬೇಡಿಕೆಗಾಗಿ ಬೀದಿಗಿಳಿದ ಅಂಚೆ ನೌಕರರು

12:27 PM Jun 05, 2018 | |

ವಿಜಯಪುರ: 7ನೇ ವೇತನ ಜಾರಿ ಸೇರಿದಂತೆ ವಿವಿಧ ಬೇಡಿಕೆ ಈಡೆರಿಕೆಗೆ ಆಗ್ರಹಿಸಿ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿರುವ ಗ್ರಾಮೀಣ ಅಂಚೆ ನೌಕರರು, ಹೋರಾಟದ 14ನೇ ದಿನ ಕುಟುಂಬ ಸದಸ್ಯರೊಂದಿಗೆ ಬೀದಿಗಿಳಿದು ಪ್ರತಿಭಟಿಸಿದರು.

Advertisement

ಸೋಮವಾರ ಕುಟುಂಬದ ಸದಸ್ಯರೊಂದಿಗೆ ನಗರ ಸಿದ್ದೇಶ್ವರ ದೇವಸ್ಥಾನಕ್ಕೆ ಆಗಮಿಸಿ ಗ್ರಾಮೀಣ ಅಂಚೆ ನೌಕರರು, ಮಹಾತ್ಮ ಗಾಂಧೀಜಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಕೇಂದ್ರ ಸರ್ಕಾರ ತಮ್ಮ ಬೇಡಿಕೆ ಈಡೇರಿಸದ ಕುರಿತು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ಜೂ.
5ರಂದು ಬಸವರಾಜ ಹೂಗಾರ ಅವರ ನೇತೃತ್ವದಲ್ಲಿ ಧಾರವಾಡದಲ್ಲಿರುವ ಉತ್ತರ ಕರ್ನಾಟಕದ ಪೋಸ್ಟ್‌ ಮಾಸ್ಟರ್‌ ಜನರಲ್‌ ಕಚೇರಿ ಉತ್ತರ ಕರ್ನಾಟಕದ ಎಲ್ಲ ಜಿಲ್ಲೆಗಳ ಗ್ರಾಮೀಣ ಅಂಚೆ ನೌಕರರು ಮುತ್ತಿಗೆ ಹಾಕುವುದಾಗಿ ಪ್ರಕಟಿಸಿದರು. 

ಅಂಚೆ ನೌಕರರ ಹೋರಾಟ ಬೆಂಬಲಿಸಿ ಮಾತನಾಡಿದ ವಿವಿಧ ಕಾರ್ಮಿಕರ ಸಂಘಟನೆಗಳ ಮುಖಂಡರಾದ ಭೀಮಶಿ ಕಲಾದಗಿ, ಲಕ್ಷ್ಮಣ ಹಂದ್ರಾಳ ಮಾತನಾಡಿ, 14 ದಿನಗಳಿಂದ ರೈಲು ರೋಖ್‌, ರಸ್ತೆ ತಡೆ, ಅರೆ ಬೆತ್ತಲೆ ಹೀಗೆ ಹಲವು ರೀತಿ ಹೋರಾಟ ಮಾಡುತ್ತಿದ್ದರೂ ಪ್ರಧಾನಿ ನರೇಂದ್ರ ಮೋದಿ ಸ್ಪಂದಿಸುತ್ತಿಲ್ಲ. ಗ್ರಾಮೀಣ ಅಂಚೆ ಸಂಪೂರ್ಣ ಹದಗೆಟ್ಟಿದ್ದರೂ ಕೇಂದ್ರ ಸರ್ಕಾರ ಬೇಡಿಕೆ ಈಡೇರಿಕೆಗೆ ಮುಂದಾಗಿಲ್ಲ ಎಂದು ದೂರಿದರು.

ವಲಯ ಕಾರ್ಯದರ್ಶಿ ಬಸವರಾಜ ಹೂಗಾರ ಮಾತನಾಡಿ, ಅಖೀಲ ಭಾರತ ಗ್ರಾಮೀಣ ಅಂಚೆ ಸೇವಕರ ಸಂಘದ ಕರೆ ಮೇರೆಗೆ ಮೇ 22ರಿಂದ ದೇಶಾದ್ಯಂತ ಅನಿ ರ್ದಿಷ್ಟ ಮುಷ್ಕರ ಆರಂಭಿಸಿದ್ದು 14 ದಿನಗಳಾದರೂ ಗ್ರಾಮೀಣ ಅಂಚೆ ಸೇವಕರ ಬೇಡಿಕೆ ಇತ್ಯರ್ಥಗೊಳಿಸಲು ಸರ್ಕಾರ ಸ್ಪಂದಿಸಿಲ್ಲ. 

2 ವರ್ಷ 6 ತಿಂಗಳಾದರೂ ಏಳನೇ ವೇತನ ಬಿಡುಗಡೆ ಮಾಡಿಲ್ಲ. ಇದರಿಂದ ನೊಂದ ಹಲವು ಆತ್ಮಹತ್ಯೆ ಮಾಡಿಕೊಂಡಿದ್ದರೆ, ಮತ್ತೆ ಕೆಲವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇಷ್ಟಾದರೂ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ ಎಂದು ಕಿಡಿ ಕಾರಿದರು. ಇಂದು ಮುಷ್ಕರ 14ನೇ ದಿನಕ್ಕೆ ಕಾಲಿಟ್ಟ ದಿನವಾಗಿದ್ದು ಗ್ರಾಮೀಣ ಅಂಚೆ ಸೇವಕರ ಕುಟುಂಬ ಪರಿವಾರ ಸಮೇತರಾಗಿ ಇಂದು ವಿಜಯಪುರದ ಸಿದ್ದೇಶ್ವರ ದೇವಸ್ಥಾನದಿಂದ ಬೃಹತ್‌ ಪ್ರತಿಭಟನೆ ರ್ಯಾಲಿ ಮೂಲಕ ತಮ್ಮ ಪ್ರಭುಗಳಾದ ಜನತಾ ನ್ಯಾಯಾಲಯದ ಮುಂದೆ ತಮ್ಮ ಅಳಲನ್ನು ತೋಡಿಕೊಳ್ಳಲು ಇಚ್ಚಿಸಿದ್ದು ಇಂದು ಭಾರತ ಬಂದ್‌ಗೆ ಕರೆ ನೀಡಲಾಗಿದೆ. ಇನ್ನಾದರೂ ಬಡ ಕಾರ್ಮಿಕರ ಬದುಕಿಗೆ ಹೊಸ ಚೈತನ್ಯ ತುಂಬುವ ಮನಸ್ಸಿದ್ದಲ್ಲಿ ತಕ್ಷಣವೇ ಗ್ರಾಮೀಣ ಅಂಚೆ ಸೇವಕರು ಆಗ್ರಹಿಸುತ್ತಿರುವ ಕಮಲೇಶ ಚಂದ್ರ ಕಮೀಟಿ ವರದಿಯನ್ನು ಸಕಾರಾತ್ಮಕವಾಗಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

Advertisement

ಗ್ರಾಮೀಣ ಅಂಚೆ ನೌಕರರ ಮುಷ್ಕರ ಬೆಂಬಲಿಸಿ ಕಾರ್ಮಿಕರ ವಿವಿಧ ಸಂಘಟನೆಗಳಾದ ಸಿಐಟಿಯು, ಕಟ್ಟಡ ಕಾರ್ಮಿಕರ ಸಂಘ, ಕರ್ನಾಟಕ ಪ್ರಾಂಥ ರೈತ ಸಂಘ, ಎಪಿಎಂಸಿ ಹಮಾಲರ ಸಂಘ, ಜನವಾದಿ ಮಹಿಳಾ ಸಂಘಟನೆ, ಅಂಗನವಾಡಿ ಕಾರ್ಯಕರ್ತೆಯರ ಸಂಘ, ಲಾರಿ ಮಾಲೀಕರ ಸಂಘ, ಗ್ರಾಪಂ ನೌಕರರ ಸಂಘ, ಬಿಸಿಯೂಟ ನೌಕರರ ಸಂಘ, ಗುತ್ತಿಗೆ ನೌಕರರ ಸಂಘ, ಬಿಎಸ್‌ ಎನ್‌ಎಲ್‌, ಬಂಜಾರಾ ಕ್ರಾಂತಿದಳ, ಕರ್ನಾಟಕಾ ರಕ್ಷಣಾ ವೇದಿಕೆ, ಜಿಲ್ಲಾ ಕುರುಬರರ ಸಂಘದ ಪದಾಧಿಕಾರಿಗಳು ಬೆಂಬಲ ವ್ಯಕ್ತಪಡಿಸಿದರು.

ಎಸ್‌.ವೈ. ಥೋರತ, ಕೆ.ಪಿ. ಹೂಗಾರ, ವಿಠ್ಠಲಸಿಂಗ್‌ ರಜಪೂತ, ಕಿರಣ ಓಂಕಾರ, ಬಿ.ಎನ್‌. ಬಿರಾದಾರ, ಶಿವಾನಂದ ನರಳೆ, ಎಸ್‌.ಎಂ. ಹಿರೇಮಠ, ಎ.ಕೆ. ಜಲಾನಿ, ಪಾಯಪ್ಪ ಮಾಲಗತ್ತಿ, ಐ.ಸಿ.ಹಂಚನಾಳ, ವಿಜಯಲಕ್ಷ್ಮೀ ಹಿರೇಮಠ, ತಾಜ ಸಹೋದರರಿಯರು, ಕೆ.ಎ. ದೇಶಪಾಂಡೆ, ಆನಂದ ಕುಲಕರ್ಣಿ, ಪ್ರಶಾಂತ ಕುಲಕರ್ಣಿ, ಎಂ.ಆರ್‌. ಸಾಗರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next