ಮಹಾನಗರ: ಭಾರತೀಯ ಅಂಚೆ ಇಲಾಖೆಯ ಮಂಗಳೂರು ವಿಭಾಗದಿಂದ ಕರ್ನಾಟಕದಲ್ಲೇ ಪ್ರಥಮ ಬಾರಿಗೆ ಜನನ/ಮರಣ ಪ್ರಮಾಣ ಪತ್ರಗಳನ್ನು ಅಂಚೆ ಮೂಲಕ ಮನೆ ಬಾಗಿಲಿಗೆ ತಲುಪಿಸುವ ವಿಶಿಷ್ಟ ಸೇವೆ ಕೆಲವು ತಿಂಗಳುಗಳ ಹಿಂದೆ ಆರಂಭಗೊಂಡಿದ್ದು, ಮೂರೂವರೆ ತಿಂಗಳುಗಳಲ್ಲಿ ದೇಶದ 7 ರಾಜ್ಯಗಳ 34 ಜಿಲ್ಲೆಯ 1,048 ಮಂದಿ ಇದರ ಪ್ರಯೋಜನ ಪಡೆದುಕೊಂಡಿದ್ದಾರೆ.
ಮಂಗಳೂರು ಅಂಚೆ ವಿಭಾಗವು ಮಂಗಳೂರು ಮಹಾನಗರ ಪಾಲಿಕೆಯೊಂದಿಗೆ ಒಡಂಬಡಿಕೆ ಮಾಡಿಕೊಳ್ಳುವ ಮೂಲಕ ಕಳೆದ ಮಾರ್ಚ್ ತಿಂಗಳಿನಲ್ಲಿ ಈ ಸೇವೆಗೆ ಚಾಲನೆ ನೀಡಲಾಗಿತ್ತು. ಬಳಿಕ ವೆನ್ಲಾಕ್, ಲೇಡಿಗೋಶನ್ ಆಸ್ಪತ್ರೆ, ಕೋಟೆಕಾರ್, ಕಿನ್ನಿಗೋಳಿ, ಬಜಪೆ, ಮೂಲ್ಕಿ ಪಟ್ಟಣ ಪಂಚಾಯತ್, ಸೋಮೆಶ್ವರ ಪುರಸಭೆ ಹಾಗೂ ಉಳ್ಳಾಲ ನಗರ ಪುರಸಭೆಗಳಿಗೆ ವಿಸ್ತರಿಸಲಾಯಿತು.
ಈ ಮೊದಲು ಜನನ/ಮರಣ ಪ್ರಮಾಣ ಪತ್ರವನ್ನು ಪಡೆಯಲು ಅರ್ಜಿ ದಾರರು ಸಂಬಂಧಪಟ್ಟ ಸಂಸ್ಥೆಗೆ 2 ಬಾರಿ ಭೇಟಿ ನೀಡಬೇಕಿತ್ತು. ಈ ವ್ಯವಸ್ಥೆ ಯಿಂದಾಗಿ ದೂರದ ಸ್ಥಳಗಳಿಂದ ಬರುವ ಸಾರ್ವಜನಿಕರು ಪ್ರಮಾಣ ಪತ್ರಗಳನ್ನು ಪಡೆಯಲು ಸಮಯ, ಹೆಚ್ಚಿನ ಹಣವನ್ನು ವ್ಯಯಿಸಬೇಕಾಗುತ್ತಿತ್ತು. ಆದರೆ ಈ ಹೊಸ ಸೇವೆಯ ಪ್ರಾರಂಭದಿಂದ ಅರ್ಜಿದಾರರು ಜನನ/ಮರಣ ಪ್ರಮಾಣ ಪತ್ರವನ್ನು ಮನೆಬಾಗಿಲಿನಲ್ಲಿ ಪಡೆಯಲು ಈಗ ಸಾಧ್ಯವಾಗಿದೆ. ಈ ಸೇವೆಯನ್ನು ಪಡೆಯಲು ಸಾರ್ವಜನಿಕರು ಜನನ/ ಮರಣ ಪ್ರಮಾಣ ಪತ್ರದ ಅರ್ಜಿಯೊಂದಿಗೆ ಮತ್ತೂಂದು ಸರಳವಾದ ಅರ್ಜಿಯನ್ನು ಭರ್ತಿಮಾಡಿಕೊಟ್ಟಲ್ಲಿ, ಜನನ/ಮರಣ ಪ್ರಮಾಣ ಪತ್ರವನ್ನು ಕೆಲವೇ ದಿನಗಳಲ್ಲಿ ಅರ್ಜಿದಾರರ ಮನೆಬಾಗಿಲಿಗೆ ಸ್ಪೀಡ್ ಪೋಸ್ಟ್ ಮೂಲಕ ತಲುಪಿಸಲಾಗುವುದು.
ವಿಶೇಷತೆಗಳೇನು?
ಜನನ/ಮರಣ ಪ್ರಮಾಣ ಪತ್ರವನ್ನು ಭಾರತದಾದ್ಯಂತ ಯಾವುದೇ ಊರಿಗೂ ತಲುಪಿಸುವ ವ್ಯವಸ್ಥೆ ಇದೆ. ಪ್ರಮಾಣ ಪತ್ರದ ಪ್ರತಿಗಳು ಎಷ್ಟೇ ಇದ್ದರೂ ಮತ್ತು ಯಾವುದೇ ಊರಿಗಾದರೂ 100 ರೂ. ನಿಗದಿತ ಶುಲ್ಕ ಪಾವತಿ ಮಾಡಬೇಕಾಗುತ್ತದೆ. ಬಟವಾಡೆಯ ಸಂದರ್ಭದಲ್ಲಿ ಪೋಸ್ಟ್‌ಮ್ಯಾನ್ ಮೂಲಕ ಶುಲ್ಕ ಪಾವತಿ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಬಟವಾಡೆಯಾಗಬೇಕಾಗಿರುವ ವಿಳಾಸವು ಪ್ರಮಾಣ ಪತ್ರದ ಅರ್ಜಿಯಲ್ಲಿ ನಮೂದಿಸಲಾದ ವಿಳಾಸಕ್ಕಿಂತ ಬೇರೆಯೂ ಆಗಿರಬಹುದು. ಪಾಲಿಕೆಗೆ ಅರ್ಜಿ ಸಲ್ಲಿಸಿದ ಮೂರರಿಂದ ಮೂವತ್ತು ದಿನಗಳ ಒಳಗಾಗಿ ಪ್ರಮಾಣ ಪತ್ರವು ಮುದ್ರಣಗೊಂಡು ಅನಂತರ ಅದನ್ನು ಎರಡರಿಂದ ಐದು ದಿನಗಳ ಒಳಗಾಗಿ ಸ್ಪೀಡ್ ಪೋಸ್ಟ್ ಮೂಲಕ ಅಂಚೆ ಇಲಾಖೆಯು ನಿಮ್ಮ ಮನೆ ಬಾಗಿಲಿಗೆ ತಲುಪಿಸುತ್ತದೆ.
ಗ್ರಾಹಕ ಸ್ನೇಹಿ ಯೋಜನೆ: ಅಂಚೆ ಇಲಾಖೆಯು ಗ್ರಾಹಕ ಸ್ನೇಹಿ ಯೋಜನೆಯನ್ನು ಜಾರಿಗೊಳಿಸುತ್ತಿದೆ. ನೀರಿನ ಬಿಲ್ ಪಾವತಿ ವ್ಯವಸ್ಥೆಯನ್ನು ಈಗಾಗಲೇ ಜಾರಿಗೆ ಬಂದಿದ್ದು, ಇದೀಗ ಜನನ/ ಮರಣ ಪ್ರಮಾಣ ಪತ್ರ ಅಂಚೆ ಮುಖೇನ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ ಇದರಿಂದ ಸಮಯ ಮತ್ತು ಹಣದ ಉಳಿತಾಯವಾಗುತ್ತದೆ. ಈ ಸೇವೆಯನ್ನು ಈಗ ಪುತ್ತೂರು ಅಂಚೆ ವಿಭಾಗದ ವ್ಯಾಪ್ತಿಯಲ್ಲಿರುವ ಪುತ್ತೂರು ನಗರಸಭೆ, ಬೆಳ್ತಂಗಡಿ ಪಟ್ಟಣ ಪಂಚಾಯತ್ ಹಾಗೂ ಸುಳ್ಯ ಪಟ್ಟಣ ಪಂಚಾಯತ್‌ಗಳಿಗೆ ವಿಸ್ತರಿಸಲಾಗಿದೆ. ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲೂ ಪ್ರಾರಂಭಿಸುವ ಪ್ರಕ್ರಿಯೆಯು ಪ್ರಾರಂಭಗೊಂಡಿದೆ. –
ಶ್ರೀಹರ್ಷ, ಹಿರಿಯ ಅಂಚೆ ಅಧೀಕ್ಷಕ ಮಂಗಳೂರು ವಿಭಾಗ