ಆಧಾರ್ ಸೇವೆಯನ್ನು ಇನ್ನಷ್ಟು ಸುಲಭಗೊಳಿಸುವ ಸರಕಾರದ ಪ್ರಯತ್ನ ಸ್ವಾಗತಾರ್ಹ. ಗ್ಯಾಸ್ ಸಬ್ಸಿಡಿಯಿಂದ ಹಿಡಿದು ಆದಾಯ ಕರ ಪಾವತಿ ಸುವಲ್ಲಿಯ ತನಕ ಈಗ ಪ್ರತಿಯೊಂದು ಸರಕಾರಿ ಸೌಲಭ್ಯಕ್ಕೆ ಆಧಾರ್ ಕಡ್ಡಾಯಗೊಳಿಸಿರುವಾಗ ಅದಕ್ಕೆ ಸಂಬಂಧಿಸಿದ ದೂರುದುಮ್ಮಾನಗಳ ಪರಿಹಾರವೂ ಜನರ ಕೈಗೆಟುಕಿನಲ್ಲಿ ಇರಬೇಕಾದುದು ಅಪೇಕ್ಷಣೀಯ. ಈ ನಿಟ್ಟಿನಲ್ಲಿ ಎಲ್ಲ ಅಂಚೆ ಕಚೇರಿಗಳಲ್ಲಿ, ತಾಲೂಕು ಕಚೇರಿಗಳಲ್ಲಿ ಮತ್ತು ಪಂಚಾಯತ್ ಕಚೇರಿಗಳಲ್ಲಿ ಆಧಾರ್ ಸೇರ್ಪಡೆ, ತಿದ್ದುಪಡಿ ಇತ್ಯಾದಿ ಸೌಲಭ್ಯಗಳನ್ನು ಒದಗಿಸಿರುವುದರಿಂದ ಜನರ ದೊಡ್ಡದೊಂದು ಸಮಸ್ಯೆ ನಿವಾರಣೆಯಾದಂತಾಗಿದೆ.
ಆಧಾರ್ ಪ್ರಾರಂಭವಾಗಿ 10 ವರ್ಷವಾಗುತ್ತಾ ಬಂದರೂ ಅದರ ಗೊಂದಲವಿನ್ನೂ ಪೂರ್ತಿಯಾಗಿ ಬಗೆಹರಿದಿಲ್ಲ. ಆರಂಭದಿಂದಲೇ ಆಧಾರ್ ಕಾರ್ಡ್ ಮಾಡಿಸುವ ಕಾರ್ಯ ಅಧ್ವಾನಗಳಿಂದ ಕೂಡಿತ್ತು. ಅಂತೂ ಇಂತೂ ಬಹುತೇಕ ಜನರಿಗೆ ಆಧಾರ್ ಹಂಚಿಕೆಯಾಗಿದೆ. ಆದರೆ ಅದರಲ್ಲಿ ನೂರಾರು ತಪ್ಪುಗಳಿರುವ ಕುರಿತು ಪುಂಖಾನುಪುಂಖವಾಗಿ ದೂರುಗಳು ಬರುತ್ತಿವೆ. ಈ ಹಿನ್ನೆಲೆಯಲ್ಲಿ ತಾಲೂಕು ಕಚೇರಿಗಳಲ್ಲಿ ಮತ್ತು ಅಂಚೆ ಕಚೇರಿಗಳಲ್ಲಿ ಆಧಾರ್ ತಿದ್ದುಪಡಿ ಸೌಲಭ್ಯವನ್ನು ಕಳೆದ ವರ್ಷವೇ ಪ್ರಾರಂಭಿಸಿದ್ದರೂ ಅದು ಇನ್ನಷ್ಟು ಗೊಂದಲಕ್ಕೆ ಕಾರಣವಾಗಿತ್ತು.
ಎಲ್ಲಿಯೂ ಸಮರ್ಪಕ ಆಧಾರ್ ಸೇವೆ ದೊರಕದೆ ಜನರು ಕಂಗಾಲಾಗಿದ್ದರು. ತಾಲೂಕಿನ ಒಂದು ಅಥವಾ ಎರಡು ಅಂಚೆ ಕಚೇರಿಗಳಲ್ಲಿ ಮಾತ್ರ ಆಧಾರ್ ಸೇವೆ ಲಭಿಸುತ್ತಿತ್ತು. ಇದು ಕೂಡಾ ಅಂಚೆ ಸಿಬಂದಿಗಳ ಮರ್ಜಿಯನ್ನು ಹೊಂದಿಕೊಂಡಿತ್ತು.ಮೊದಲು ಬಂದ ಐದು ಅಥವಾ ಹತ್ತು ಜನರಿಗೆ ಮಾತ್ರ ಸೇವೆ ಸಿಗುತ್ತಿದ್ದ ಕಾರಣ ಜನರು ಮುಂಜಾನೆಯೇ ಎದ್ದು ಅಂಚೆ ಕಚೇರಿ ಮುಂದೆ ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದರು. ಕಚೇರಿ ಮತ್ತಿತರ ನಿತ್ಯ ಕಾರ್ಯಗಳಿಗೆ ಹೋಗುವವರಿಗೆ, ಹಿರಿಯರಿಗೆ ಇದರಿಂದ ತೊಂದರೆಯಾಗಿತ್ತು. ಇದೀಗ ಎಲ್ಲ ಅಂಚೆ ಕಚೇರಿಗಳಲ್ಲಿ ಈ ಸೌಲಭ್ಯ ಬಂದರೆ ದೊಡ್ಡದೊಂದು ಸಮಸ್ಯೆ ಬಗೆಹರಿದಂತಾಗುತ್ತದೆ. ಬ್ಯಾಂಕುಗಳಲ್ಲೂ ಆಧಾರ್ ಸೌಲಭ್ಯ ಪ್ರಾರಂಭಿಸಬೇಕೆಂದು ಹೇಳಲಾಗಿತ್ತು. ಆದರೆ ಈ ಹೆಚ್ಚುವರಿ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಎಲ್ಲ ಬ್ಯಾಂಕ್‌ಗಳು ಮುಂದಾಗಿರಲಿಲ್ಲ.
ಇದಕ್ಕೂ ಮಿಗಿಲಾಗಿ ಆಧಾರ್ ನೋಂದಣಿ ಸರಕಾರಿ ವ್ಯವಸ್ಥೆಯಡಿಗೆ ಬಂದಿರುವುದು ಅದರ ಸುರಕ್ಷತೆಯ ಕುರಿತಾಗಿದ್ದ ಆತಂಕವನ್ನು ದೂರ ಮಾಡಿದೆ. ಹಿಂದೆ ಆಧಾರ್ ನೋಂದಣಿ ಮಾಡುವ ಹೊಣೆಯನ್ನು ಖಾಸಗಿಯವರಿಗೆ ಹೊರಗುತ್ತಿಗೆ ವಹಿಸಿದ ಪರಿಣಾಮವಾಗಿ ಹಲವು ಅವ್ಯವಹಾರಗಳಿಗೆ ರಹದಾರಿ ಮಾಡಿಕೊಟ್ಟಂತಾಗಿತ್ತು. ಆಧಾರ್ ನೋಂದಣಿ ಸಿಬಂದಿ ಲಂಚ ಪಡೆದುಕೊಂಡು ಅನರ್ಹ ವ್ಯಕ್ತಿಗಳಿಗೂ ಆಧಾರ್ ನೀಡಿರುವ ಕುರಿತು ಹಲವಾರು ದೂರುಗಳು ಬಂದಿದ್ದವು.
ಇದೀಗ ಸರಕಾರದಡಿಯಲ್ಲಿರುವ ಕಚೇರಿಯಲ್ಲೇ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಆಗುತ್ತದೆ ಉತ್ತರದಾಯಿ ವ್ಯವಸ್ಥೆಯೊಂದರ ಸುಪರ್ದಿಯಲ್ಲಿ ತಮ್ಮ ರಹಸ್ಯ ಮಾಹಿತಿಗಳು ಇವೆ ಎಂಬ ಭರವಸೆಯಾದರೂ ಇರುತ್ತದೆ. ಆದರೆ ಅಂಚೆ ಕಚೇರಿಗಳು ಅಥವ ಪಂಚಾಯತ್ ಕಚೇರಿಗಳ ಮೇಲೆ ಆಧಾರ್ ಸೇವೆ ಹೊಣೆ ವಹಿಸುವ ಮೊದಲು ಸಮರ್ಪಕ ಮೂಲಸೌಕರ್ಯ ಮತ್ತು ತರಬೇತಿ ನೀಡಬೇಕು.ಆಧಾರ್‌ಗಾಗಿ ಪ್ರತ್ಯೇಕ ಕಂಪ್ಯೂಟರ್ ಹಾಗೂ ಇನ್ನಿತರ ಉಪಕರಣಗಳನ್ನು ಒದಗಿಸುವುದರ ಜತೆಗೆ ವಿದ್ಯುತ್ ಕೈಕೊಟ್ಟರೆ ಮಾಹಿತಿ ದಾಖಲೀಕರಣ ಮುಂದುವರಿಸಲು ಅನುಕೂಲವಾಗುವಂತೆ ವಿದ್ಯುತ್ ಬ್ಯಾಕ್‌ಅಪ್ ವ್ಯವಸ್ಥೆಯನ್ನು ಮಾಡಿಕೊಡಬೇಕು.
ಹಳ್ಳಿಗಳಲ್ಲಿ ವಿದ್ಯುತ್ ಮತ್ತು ಅಂತರ್ಜಾಲ ಆಗಾಗ ಕೈಕೊಡುವ ಸಮಸ್ಯೆಯಿರುತ್ತದೆ. ಈಗಾಗಲೇ ಪಡಿತರ ಅಂಗಡಿಯಲ್ಲಿ ಬಯೋ ಮೆಟ್ರಿಕ್ ವ್ಯವಸ್ಥೆ ಅಳವಡಿಸಿದ ಬಳಿಕ ಜನರು ಅನುಭವಿಸುತ್ತಿರುವ ಬವಣೆಯೇ ಸಾಕಷ್ಟಿದೆ. ಸರ್ವರ್ ಸಮಸ್ಯೆ ಸಾಮಾನ್ಯವಾಗಿದ್ದು ಒಂದು ತಿಂಗಳ ಪಡಿತರ ಒಯ್ಯಲಿಕ್ಕಾಗಿ ಜನರು ಐದಾರು ಸಲ ಬಂದು ಹೋಗುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಇನ್ನು ಆಧಾರ್ ಸೇವೆಯೂ ಇದೇ ರೀತಿ ಆಗದಂತೆ ಪರ್ಯಾಯ ವ್ಯವಸ್ಥೆಯನ್ನು ಮಾಡಿಕೊಡುವುದು ಸರಕಾರದ ಹೊಣೆ. ಆಧಾರ್‌ಗೆ ಇನ್ನೂ ಸಾಂವಿಧಾನಿಕ ಮಾನ್ಯತೆ ದೊರಕಿಲ್ಲ. ಲೋಕಸಭೆಯಲ್ಲಿ ಹಣಕಾಸು ಮಸೂದೆ ರೂಪದಲ್ಲಿ ಆಧಾರ್ ಮಸೂದೆಯನ್ನು ಮಂಡಿಸಲಾಗಿದೆ. ಈ ನಡುವೆ ಬೃಹತ್ ಪ್ರಮಾಣದಲ್ಲಿ ಆಧಾರ್ ಮಾಹಿತಿ ಸೋರಿಕೆಯಾಗುತ್ತಿರುವ ಕುರಿತು ಹಾಹಾಕಾರ ಉಂಟಾಗಿತ್ತು.
ಆಧಾರ್‌ನ ಕಾನೂನು ಮಾನ್ಯತೆಯನ್ನು ಪ್ರಶ್ನಿಸಿದ 30ಕ್ಕೂ ಹೆಚ್ಚು ದೂರುಗಳು ನ್ಯಾಯಾಲಯಗಳಲ್ಲಿ ವಿಚಾರಣೆಗೆ ಬಾಕಿಯಿವೆ. ಆಧಾರ್‌ನಿಂದ ಖಾಸಗಿತನದ ಹಕ್ಕು ಉಲ್ಲಂಘನೆಯಾಗುತ್ತಿದೆಯೇ ಎಂಬ ಪ್ರಶ್ನೆಗೂ ಇನ್ನೂ ಸಮರ್ಪಕ ಉತ್ತರ ಸಿಕ್ಕಿಲ್ಲ. ಈ ಎಲ್ಲ ಗೊಂದಲಗಳು ಬಗೆಹರಿದರೆ ಮಾತ್ರ ಆಧಾರ್ ನಂಬಿಕಾರ್ಹವಾಗಬಹುದು.