Advertisement

ದಲಿತ ಡಿಸಿಎಂ ಹುದ್ದೆ; ಮಹಿಳೆಯರಿಗೂ ಡಿಸಿಎಂ ಸ್ಥಾನ: ಎಚ್‌.ಡಿ.ಕುಮಾರಸ್ವಾಮಿ

09:58 PM Nov 22, 2022 | Team Udayavani |

ಕೋಲಾರ: ಸಾಮಾಜಿಕ ನ್ಯಾಯ ನೀಡಲು ಈಗಾಗಲೇ ದಲಿತ ಸಮುದಾಯದಲ್ಲಿ ಉಪಮುಖ್ಯಮಂತ್ರಿ ಮಾಡುತ್ತೇನೆಂದು ಘೋಷಣೆ ಮಾಡಿದ್ದೇನೆ. ಮಹಿಳೆಯರ ಸಬಲೀಕರಣಕ್ಕಾಗಿ ಒಂದು ವೇಳೆ ಅವಶ್ಯಕತೆ ಬಿದ್ದಲ್ಲಿ ಯಾವುದೇ ಸಮುದಾಯದ ಮಹಿಳೆಯನ್ನು ಉಪಮುಖ್ಯಮಂತ್ರಿ ಮಾಡಲು ಜೆಡಿಎಸ್‌ ತಯಾರಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಘೋಷಣೆ ಮಾಡಿದರು.

Advertisement

ತಾಲೂಕಿನ ಕ್ಯಾಲನೂರಿನಲ್ಲಿ ಗ್ರಾಮ ವಾಸ್ತವ್ಯದ ಬಳಿಕ ಸುದ್ದಿಗಾರರ ಜತೆ ಮಾತನಾಡಿ, ದಲಿತ ಸಮುದಾಯದವರಿಗೆ ಡಿಸಿಎಂ ಸ್ಥಾನ ನೀಡುತ್ತೇನೆಂದು ಈಗಾಗಲೇ ಹೇಳಿದ್ದೇನೆ. ನಾನು ದಲಿತ ಸಮುದಾಯದ ಮತಗಳನ್ನು ಸೆಳೆಯಲು ಹೀಗೆ ಹೇಳಿಲ್ಲ. ಆ ಸಮುದಾಯದ ಸಮಸ್ಯೆಗಳನ್ನು ಆಲಿಸಿದ ಮೇಲೆ ಸಾಮಾಜಿಕ ನ್ಯಾಯ ಒದಗಿಸಲು ಹೇಳಿದ್ದೇನೆ. ಹಾಗೇ ಮಹಿಳೆಯರ ಸಮಸ್ಯೆಗಳನ್ನು ಆಲಿಸಿದ ಬಳಿಕ ಮಹಿಳೆಯರ ಸಬಲೀಕರಣಕ್ಕಾಗಿ ಡಿಸಿಎಂ ಸ್ಥಾನ ಕೊಡಲು ಬದ್ಧನಾಗಿದ್ದೇನೆ. ಆದರೆ ನಮ್ಮ ಪಕ್ಷದಲ್ಲಿ ಹೆಬ್ಬೆಟ್ಟಿನ ಉಪಮುಖ್ಯಮಂತ್ರಿ ಇರುವುದಿಲ್ಲ. ಪ್ರಾಮಾಣಿಕವಾಗಿ ಕೆಲಸ ಮಾಡುವವರನ್ನು ಡಿಸಿಎಂ ಮಾಡುತ್ತೇವೆ ಎಂದರು.

ಸರ್ಕಾರದಿಂದ ಹಣ ಮೀಸಲಿಟ್ಟಿದ್ದರೂ ಆ ಹಣ ಜನರಿಗೆ ತಲುಪುತ್ತಿಲ್ಲ. ಹಾಗಾಗಿ ನನಗೆ ಪೂರ್ಣ ಪ್ರಮಾಣದಲ್ಲಿ ಐದು ವರ್ಷ ಅಧಿಕಾರ ನೀಡಿದರೆ ಪಂಚರತ್ನ ಯೋಜನೆ ಸಂಪೂರ್ಣವಾಗಿ ಜಾರಿಗೆ ತರುತ್ತೇನೆ. ಒಂದು ವೇಳೆ ಪಂಚರತ್ನ ಯೋಜನೆಗಳನ್ನು ಜಾರಿಗೆ ತರದಿದ್ದರೆ ಮುಂದೆ ಯಾವುದೇ ಚುನಾವಣೆಯಲ್ಲಿ ಮತ ಕೇಳಲು ಜನರ ಬಳಿ ಬರುವುದಿಲ್ಲ ಎಂದು ಕುಮಾರಸ್ವಾಮಿ ಘೋಷಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next