ಭಟ್ಕಳ: ನಾಮಧಾರಿ ಸಮಾಜದ ಕುಲಗುರುಗಳಾದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ವಿರುದ್ದ ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಕಿಡಿಗೇಡಿಗಳು ಇಲ್ಲದ ಸಲ್ಲದ ಮೆಸೇಜ್‍ಗಳನ್ನು ಹರಿಬಿಡುತ್ತಿರುವುದನ್ನು ಸಮಾಜ ತೀವ್ರವಾಗಿ ಖಂಡಿಸುತ್ತದೆ ಎಂದು ಮಾವಳ್ಳಿ-ಸಾರದೊಳೆ ನಾಮಧಾರಿ ಅಭಿವೃದ್ಧಿ ಸಂಘದ ಅಧ್ಯಕ್ಷ ಸುಬ್ರಾಯ ನಾಯ್ಕ ಹೇಳಿದರು.
ಅವರು ಈ ಕುರಿತು ಶನಿವಾರ ಸಂಜೆ ಸಾರದಹೊಳೆಯ ಹಳೇಕೋಟೆ ಹನುಮಂತ ದೇವಸ್ಥಾನದ ಸಭಾಭವನದಲ್ಲಿ ಕರೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡುತ್ತಿದ್ದರು.
ನಮ್ಮ ಸಮಾಜದ ಕುಲಗುರುಗಳಾದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಹಳೇಕೋಟೆ ಹನುಮಂತ ದೇವಸ್ಥಾನದ ಪುನರ್ ನಿರ್ಮಾಣ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಯಾವುದೇ ಫಲಾಫೇಕ್ಷೆ ಇಲ್ಲದೇ ಏಳು ದಿನಗಳ ಕಾಲ ಅತ್ಯಂತ ಸಂತಸದಿಂದ ಕಾರ್ಯಕ್ರಮದ ದಿವ್ಯ ಉಪಸ್ಥಿತಿ ವಹಿಸಿದ್ದರು. ಶ್ರೀಗಳ ಆಶೀರ್ವಾದದಿಂದ ಹಾಗೂ ಹನುಮಂತ ದೇವರ ಅನುಗ್ರಹದಿಂದ ನಮ್ಮ ಕಾರ್ಯಕ್ರಮ ನ ಭೂತೋ ನ ಭವಿಷ್ಯತಿ: ಎನ್ನುವಂತೆ ನಡೆದು ಎಲ್ಲರ ಮನ ಗೆಲ್ಲುವಂತಾಯಿತು. ಅತ್ಯಂತ ಉತ್ತಮ ಕಾರ್ಯಕ್ರಮವಾಗಿದ್ದನ್ನು ನೋಡಲು ಸಾಧ್ಯವಾಗದ ಕೆಟ್ಟ ಮನಸ್ಸಿನ ಕೆಲವರು ಇಂತಹ ಕುಕೃತ್ಯಕ್ಕೆ ಮುಂದಾಗಿರುವುದು ಖಂಡನೀಯ. ಇದೇ ರೀತಿಯಾಗಿ ಮುಂದುವರಿದರೆ ಸಮಾಜ ಕಠಿಣ ಕ್ರಮಕ್ಕೆ ಮುಂದಾಗುವುದಲ್ಲದೇ ಅವರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೂ ಮುಂದಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿದರು.
ಇಂತಹ ಅವಹೇಳನಕಾರಿ ಪೋಸ್ಟನ್ನು ನಾಮಧಾರಿ ಸಮಾಜ ತೀವ್ರವಾಗಿ ಖಂಡಿಸುತ್ತದೆ. ಇಂತಹ ಕೆಲಸ ಯಾರೇ ಮಾಡಿರಲಿ ಅದು ಅವರ ಕುತ್ಸಿತ ಮನಸ್ಥಿತಿಯನ್ನು ತೋರಿಸುತ್ತದೆ. ಇಂತಹ ಕೃತ್ಯ ಮರುಕಳಿಸಿದರೆ ಸಮಾಜ ಸುಮ್ಮನೇ ಕೂರುವುದಿಲ್ಲ ಎಂದ ಅವರು ಹಳೇಕೋಟೆ ಹನುಮಂತ ದೇವಸ್ಥಾನದ ಕಾರ್ಯಕ್ರಮವನ್ನು ನಾಮಧಾರಿ ಸೇರಿದಂತೆ ಎಲ್ಲಾ ಸಮಾಜದವರ ಸಹಕಾರದಿಂದ ಯಶಸ್ವಿಯಾಗಿ ಮಾಡಲಾಗಿದೆ.
ಕಾರ್ಯಕ್ರಮದ ಯಶಸ್ಸಿಗೆ ಎಲ್ಲರ ಶ್ರಮವೂ ಇದೆ. ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರಿಗೆ ಅನ್ಯ ಕಾರ್ಯಗಳಿದ್ದರೂ ನಮ್ಮ ಕೋರಿಕೆಯ ಮೇರೆಗೆ ಅವರು ಸತತ ಏಳು ದಿನಗಳ ಕಾಲ ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವುದರ ಜೊತೆಗೆ ದೇವಸ್ಥಾನಕ್ಕೆ ಆಗಮಿಸಿದ ಸರ್ವ ಸಮಾಜದವರನ್ನೂ ಪ್ರೀತಿ, ವಿಶ್ವಾಸದಿಂದ ನೋಡಿ ಆಶೀರ್ವದಿಸಿದ್ದಾರೆ ಎಂದರು.
ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಕೃಷ್ಣಾ ನಾಯ್ಕ ಮಾತನಾಡಿ ಸ್ವಾಮೀಜಿಯವರ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಕಿಡಿಗೇಡಿಗಳು ಮಾಡಿದ ಆರೋಪ ಸತ್ಯಕ್ಕೆ ದೂರವಾಗಿದೆ. ದೇವಸ್ಥಾನ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿರುವುದನ್ನು ಸಹಿಸಲಾಗದೇ ಇಂತಹ ಅಪಪ್ರಚಾರ ನಡೆಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸ್ವಾಮೀಜಿಯವರ ವಿರುದ್ದ ಇಲ್ಲದ ಸಲ್ಲದ ಅಂಶಗಳುಳ್ಳ ವಿಷಯವನ್ನು ಬರೆಯುತ್ತಿರುವುದು ಮುಂದುವರಿದರೆ ಸಮಾಜದದಿಂದ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ದೇವಸ್ಥಾನದ ಧರ್ಮದರ್ಶಿ ಸುಬ್ರಾಯ ಜೆ. ನಾಯ್ಕ, ಆಡಳಿತ ಮಂಡಳಿ ಗೌರವ ಕಾರ್ಯದರ್ಶಿ ಜೆ. ಜೆ. ನಾಯ್ಕ, ಸದಸ್ಯರಾದ ಮಂಜುನಾಥ ನಾಯ್ಕ, ಮೋಹನ ನಾಯ್ಕ, ರಾಜು ನಾಯ್ಕ, ಟಿ. ಆರ್. ನಾಯ್ಕ, ಚಂದ್ರಕಾಂತ ನಾಯ್ಕ, ಗಣಪತಿ ಡಿ. ನಾಯ್ಕ, ಲಕ್ಷ್ಮಣ ನಾಯ್ಕ ಮುಂತಾದವರಿದ್ದರು.