ಮುಂಬಯಿ : ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ವಿರುದ್ಧ ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ ಆರೋಪದಲ್ಲಿ ಕಳೆದ ತಿಂಗಳು ಬಂಧಿಸಲ್ಪಟ್ಟಿದ್ದ ಮರಾಠಿ ನಟಿ ಕೇತಕಿ ಚಿತಾಲೆ ಅವರಿಗೆ ಥಾಣೆ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ.
ಚಿತಾಲೆ (29) ಅವರನ್ನು ಮೇ 14 ರಂದು ಬಂಧಿಸಲಾಗಿತ್ತು. ಅವರ ವಿರುದ್ಧ ಮಾನನಷ್ಟ ಮತ್ತು ಧರ್ಮ ಮತ್ತು ಜನಾಂಗದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸಿದ ಪ್ರಕರಣ ದಾಖಲಿಸಲಾಗಿತ್ತು.
ತನ್ನ ಫೇಸ್‌ಬುಕ್ ಪುಟದಲ್ಲಿ ಪದ್ಯದ ರೂಪದಲ್ಲಿ ಮತ್ತು ಬೇರೊಬ್ಬರು ಬರೆದಿದ್ದಾರೆ ಎಂದು ಹೇಳಲಾದ ಪೋಸ್ಟ್ ಅನ್ನು ಹಂಚಿಕೊಂಡಿದ್ದಕ್ಕಾಗಿ ಚಲನಚಿತ್ರ ಮತ್ತು ಟಿವಿ ನಟಿಯನ್ನು ಕಳೆದ ತಿಂಗಳು ಥಾಣೆ ಪೊಲೀಸರು ಬಂಧಿಸಿದ್ದರು.
ಇದನ್ನೂ ಓದಿ : ಹಿಂದುತ್ವ ನಮ್ಮ ಜೀವನ ; ಸಿಎಂ ಸ್ಥಾನ ಬಿಡಲು ಸಿದ್ಧ: ಉದ್ಧವ್ ಠಾಕ್ರೆ
ಪೋಸ್ಟ್‌ನಲ್ಲಿ “ನರಕ ಕಾಯುತ್ತಿದೆ” ಮತ್ತು “ನೀವು ಬ್ರಾಹ್ಮಣರನ್ನು ದ್ವೇಷಿಸುತ್ತೀರಿ” ಎಂಬ ಪದಗಳು ಹೊಂದಿದ್ದು, ಶಿವಸೇನೆ ಮತ್ತು ಕಾಂಗ್ರೆಸ್‌ನೊಂದಿಗೆ ಮಹಾರಾಷ್ಟ್ರದಲ್ಲಿ ಅಧಿಕಾರವನ್ನು ಹಂಚಿಕೊಂಡಿರುವ ಪವಾರ್ ಅವರನ್ನು ಉಲ್ಲೇಖಿಸಲಾಗಿತ್ತು.
ಜೂನ್ 16 ರಂದು, ನಟಿಗೆ 2020 ರ ದೌರ್ಜನ್ಯ ಪ್ರಕರಣದಲ್ಲಿ ಜಾಮೀನು ನೀಡಲಾಗಿತ್ತು. 25,000 ರೂ.ಗಳ ಸಾಲ್ವೆಂಟ್ ಶ್ಯೂರಿಟಿ ನೀಡುವಂತೆ ಕೇಳಲಾಗಿತ್ತು.