ಮೈಸೂರು: ಸಾರ್ವಜನಿಕರಲ್ಲಿ ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನಗರದ ಕೆಎಂಪಿಕೆ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಗುರುವಾರ ಬೈಕ್ ಸವಾರರಿಗೆ ಉಚಿತವಾಗಿ ಹೆಲ್ಮೆಟ್ ವಿತರಿಸುವ ಮೂಲಕ ವಿಶಿಷ್ಟ ರೀತಿಯಲ್ಲಿ ಸಂಚಾರ ಅರಿವು ಮೂಡಿಸಲಾಯಿತು.
ಕೆಎಂಪಿಕೆ ಟ್ರಸ್ಟ್‌ನ 8ನೇ ವಾರ್ಷಿಕೋತ್ಸವದ ಅಂಗವಾಗಿ ನಗರದ ಸಂಸ್ಕೃತ ಪಾಠಶಾಲಾ ವೃತ್ತದಲ್ಲಿ ನಡೆದ ಅರಿವು ಕಾರ್ಯಕ್ರಮದ ವೇಳೆ ಹೆಲ್ಮೆಟ್ ಧರಿಸದೇ ಚಾಲನೆ ಮಾಡುತ್ತಿದ್ದ ಬೈಕ್ ಸವಾರರಿಗೆ ಸಂಚಾರಿ ಪೊಲೀಸರು ಸ್ಥಳದಲ್ಲೇ ದಂಡ ವಿಧಿಸಿದರೆ, ಟ್ರಸ್ಟ್ ವತಿಯಿಂದ ಉಚಿತವಾಗಿ ಹೆಲ್ಮೆಟ್ ವಿತರಿಸಿದರು. ಇದೇ ಸಂದರ್ಭದಲ್ಲಿ ಸಂಚಾರ ನಿಯಮಗಳನ್ನು ಪಾಲಿಸುವ ವಾಹನ ಚಾಲಕರಿಗೆ ಸಿಹಿ ತಿನ್ನಿಸಿ, ಗುಲಾಬಿ ಹೂ ನೀಡಿ ಪ್ರೋತ್ಸಾಹಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ನಗರಾಧ್ಯಕ್ಷ ಡಾ.ಬಿ.ಎಚ್ ಮಂಜುನಾಥ್ ಮಾತನಾಡಿ, ನಗರದಲ್ಲಿ ವಾಹನ ಸಂಚಾರ ಹೆಚ್ಚಾಗಿರುವ ಹಿನ್ನೆಲೆಯಲ್ಲೇ ಅಪಘಾತಗಳು ಹೆಚ್ಚುತ್ತಿದೆ. ನಿತ್ಯವೂ ನೂರಾರು ಮಂದಿ ಅಪಘಾತಕ್ಕೆ ಸಿಲುಕಿ ಆಸ್ಪತ್ರೆಗಳಿಗೆ ದಾಖಲಾಗುತ್ತಿರುವುದು ನೋವಿನ ಸಂಗತಿಯಾಗಿದೆ. ಆದರೆ ವಾಹನ ಚಾಲಕರು ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವುದರಿಂದ ಇಂತಹ ದುರ್ಘಟನೆಗಳನ್ನು ತಪ್ಪಿಸಬಹುದಾಗಿದ್ದು, ಸಾರ್ವಜನಿಕರು ಸ್ವಚ್ಚತಾ ಅಭಿಯಾನಕ್ಕೆ ಕೈಜೋಡಿಸುವಂತೆ ಸಂಚಾರಿ ನಿಯಮ ಪರಿಪಾಲನೆಗೂ ಮುಂದಾಗಬೇಕು ಎಂದರು.
ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂ ಗಾರ್ ಮಾತನಾಡಿ, ಕಳೆದ 10 ವರ್ಷಗಳ ಹಿಂದೆ ತಮ್ಮ ಸಹೋದರ ದಿವಂಗತ ಕೆ.ಎಂ.ಪ್ರವೀಣ್ ಕುಮಾರ್ ರಸ್ತೆ ಅಪಘಾತದಲ್ಲಿ ನಿಧನ ರಾಗಿದ್ದರು. ಅಂದು ಹೆಲ್ಮಟ್ ಧರಿಸಿದ್ದರೆ ಸಾವನ್ನಪ್ಪುತ್ತಿರಲಿಲ್ಲ. ಹೀಗಾಗಿ ಅವರ ಹೆಸರಿನಲ್ಲಿ ಸ್ಥಾಪಿತವಾದ ಕೆಎಂಪಿಕೆ ಟ್ರಸ್ಟ್‌ನಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ಸಾರ್ವಜನಿಕರಿಗೆ ಸಂಚಾರಿ ಅರಿವು ಮೂಡಿಸುವ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ಹೇಳಿದರು.
ಸಮಾಜಸೇವಕ ಕೆ.ರಘುರಾಂ, ಪತ್ರಿಕೋದ್ಯಮಿ ರಾಜಶೇಖರ ಕೋಟಿ, ಬಿಜೆಪಿ ಮುಖಂಡರಾದ ಅಶೋಕ್, ಜೋಗಿಮಂಜು, ಬಿ.ಎಂ.ರಘು, ಅನಿಲ್ ಥಾಮಸ್, ಕೆಎಂಪಿಕೆ ಟ್ರಸ್ಟ್‌ನ ಅಜಯ್ ಶಾಸಿ, ಕಡಕೊಳ ಜಗದೀಶ್, ಆನಂದ್, ಲಕ್ಷ್ಮೀದೇವಿ, ರಾಜಗೋಪಾಲ್, ವಿಜಯಕುಮಾರ್, ಅಪೂರ್ವ ಸುರೇಶ್ ಇನ್ನಿತರರು ಹಾಜರಿದ್ದರು.