Advertisement

ಸಂಭವನೀಯ ಮೂರನೇ ಅಲೆ: 18 ಸಾವಿರ ದಾದಿಯರಿಗೆ ತರಬೇತಿ

05:35 PM Dec 03, 2021 | Team Udayavani |

ಬೆಂಗಳೂರು: 18 ಸಾವಿರ ದಾದಿಯರಿಗೆ ಒಂದು ತಿಂಗಳ ತರಬೇತಿ, ಮಕ್ಕಳ ಐಸಿಯು ಸಿದ್ಧತೆ ಸೇರಿದಂತೆ ಕೋವಿಡ್ ಸಂಭವನೀಯ ಮೂರನೇ ಅಲೆಗೆ ರಾಜ್ಯದ ವೈದ್ಯಕೀಯ ಕಾಲೇಜುಗಳಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಲು ಸೂಚಿಸಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

Advertisement

ವೈದ್ಯಕೀಯ ಕಾಲೇಜುಗಳ ನಿರ್ದೇಶಕರೊಂದಿಗೆ ಆರೋಗ್ಯ ಸೌಧದಲ್ಲಿ ವೀಡಿಯೋ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಜಿಲ್ಲಾಮಟ್ಟದಲ್ಲಿ ತೃತೀಯ ಹಂತದ ಆರೋಗ್ಯ ಸೇವೆ ನೀಡಲು 21 ವೈದ್ಯಕೀಯ ಕಾಲೇಜುಗಳಿದ್ದು, ಸಂಭವನೀಯ ಮೂರನೇ ಅಲೆ ಅಥವಾ ಹೊಸ ಒಮಿಕ್ರಾನ್ ವೈರಾಣು ಸಂಬಂಧಿತ ಚಿಕಿತ್ಸೆ ಸಿದ್ಧತೆ ಕುರಿತು ಚರ್ಚಿಸಲಾಗಿದೆ. ವೈದ್ಯಕೀಯ ಕಾಲೇಜುಗಳ ಎಚ್‍ಒಡಿ, ಪ್ರೊಫೆಸರ್, ಹಿರಿಯ ವೈದ್ಯರು ಸೇರಿದಂತೆ ಪ್ರತಿಯೊಬ್ಬರೂ ಸಮಯೋಚಿತವಾಗಿ ವರ್ತಿಸಬೇಕು. ಗೃಹ ವೈದ್ಯರು, ಅಂತಿಮ ವರ್ಷದ ವೈದ್ಯ ವಿದ್ಯಾರ್ಥಿಗಳು ಸೇರಿ ಪರಿಣಾಮಕಾರಿ ಚಿಕಿತ್ಸೆ ನೀಡಲು ಸೂಚಿಸಲಾಗಿದೆ ಎಂದು ತಿಳಿಸಿದರು.

ಒಂದನೇ ಮತ್ತು ಎರಡನೇ ಅಲೆಯಲ್ಲಿ ಐಸಿಯುನಲ್ಲಿದ್ದ ಸೋಂಕಿತರಿಗೆ ಚಿಕಿತ್ಸೆ ನೀಡಲು ದಾದಿಯರ ಕೊರತೆಯಾಗಿತ್ತು. ಈಗ ಆ ಸಮಸ್ಯೆಗೂ ಪರಿಹಾರ ಕಂಡುಕೊಳ್ಳಲಾಗಿದೆ. ಅಂತಿಮ ವರ್ಷದ ನರ್ಸಿಂಗ್, ಪ್ಯಾರಾ ಮೆಡಿಕಲ್ ನಲ್ಲಿ ಸುಮಾರು 18 ಸಾವಿರ ಮಂದಿ ಇದ್ದಾರೆ. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಸೇರಿದಂತೆ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಅವರಿಗೆ ಒಂದು ತಿಂಗಳ ತರಬೇತಿ ನೀಡಬೇಕು ಎಂದು ಸೂಚನೆ ನೀಡಲಾಗಿದೆ ಎಂದರು.

ಮಕ್ಕಳ ಐಸಿಯು ಸಿದ್ಧ

ಸಚಿವ ಸಂಪುಟ ನಿರ್ಧಾರದಂತೆ ಮಕ್ಕಳ ಐಸಿಯುಗಳ ಸಿದ್ಧತೆಗೆ ಸೂಚಿಸಲಾಗಿದೆ. ಅಗತ್ಯ ಉಪಕರಣಗಳ ಖರೀದಿ ಹಾಗೂ ಇತರ ಎಲ್ಲಾ ವ್ಯವಸ್ಥೆಗಳ ಬಗ್ಗೆ ಸಂಪೂರ್ಣ ವಿವರ ಪಡೆಯಲಾಗಿದೆ. ಸಂಸ್ಥೆಗಳು ಮುಂದಿಟ್ಟ ಸಮಸ್ಯೆಗಳಿಗೂ ಪರಿಹಾರ ಸೂಚಿಸಲಾಗಿದೆ. ಗೃಹ ವೈದ್ಯರ ಕೋವಿಡ್ ರಿಸ್ಕ್ ಭತ್ಯೆ ಬಾಕಿ ಇದ್ದು, ಹಣಕಾಸು ಇಲಾಖೆಯಿಂದ 55 ಕೋಟಿ ರೂ. ಬಿಡುಗಡೆ ಮಾಡಿಸಲಾಗಿದೆ. ಒಟ್ಟಾರೆಯಾಗಿ ಬೇಕಾಗಿದ್ದ 73 ಕೋಟಿ ರೂ. ಅನ್ನು ಒಂದೆರಡು ದಿನಗಳಲ್ಲಿ ಖಾತೆಗೆ ಜಮೆಯಾಗುವಂತೆ ಕ್ರಮ ವಹಿಸಲಾಗಿದೆ. ಪ್ರತಿ ತಿಂಗಳು ವೇತನ ಖಾತೆಗೆ ಜಮೆಯಾಗಲು ತಾಂತ್ರಿಕ ಸಮಸ್ಯೆಗಳಿದ್ದವು. ಎಚ್‍ಆರ್ ಎಂಎಸ್ ನಲ್ಲಿ ನೋಂದಣಿಗೆ ಸಂಸ್ಥೆಗಳು 20 ದಿನಗಳ ಕಾಲ ತೆಗೆದುಕೊಂಡಿವೆ. ಡಿಸೆಂಬರ್ ನಿಂದ ವೇತನ ನೇರವಾಗಿ ಖಾತೆಗೆ ಜಮೆಯಾಗಲಿದೆ ಎಂದು ವಿವರಿಸಿದರು.

Advertisement

ಕೋವಿಡ್ ತಾಂತ್ರಿಕ ಸಮಿತಿ ಸಲಹೆಯ ಆಧಾರದ ಮೇಲೆ  ಒಮಿಕ್ರಾನ್ ಸೋಂಕಿತರಿಗೆ ವಿಶೇಷ ಐಸಿಯು ಹಾಗೂ ವಾರ್ಡ್ ಕಲ್ಪಿಸಲಾಗುವುದು. ಡೆಲ್ಟಾ ಸೋಂಕಿತರಿಗೆ ಪ್ರತ್ಯೇಕ ವಾರ್ಡ್ ನಲ್ಲಿ ಚಿಕಿತ್ಸೆ ನೀಡಲು ನಿರ್ಧರಿಸಲಾಗಿದೆ. ಮುಂದಿನ ದಿನಗಳಲ್ಲಿ ಮೀಸಲಿಡಬೇಕಾದ ಹಾಸಿಗೆ ಹಾಗೂ ಐಸಿಯು ಬಗ್ಗೆ ನಿರ್ಧರಿಸಲಾಗುವುದು ಎಂದರು.

ಆಫ್ರಿಕಾದಿಂದ ಬಂದ 57 ಪ್ರಯಾಣಿಕರ ಪೈಕಿ‌ 10 ಮಂದಿ ಪತ್ತೆ ಆಗದಿರುವ ಬಗ್ಗೆ ಅಧಿಕೃತ ಮಾಹಿತಿ ಪಡೆಯಬೇಕಿದೆ. ಈ ಕುರಿತು ವಿಶೇಷ ಗಮನ ನೀಡಲಾಗಿದೆ. ಈ ಹಿಂದೆ ಪೊಲೀಸ್ ಇಲಾಖೆ ಹೀಗೆ ತಪ್ಪಿಸಿಕೊಂಡವರನ್ನು ಪತ್ತೆಹಚ್ಚಿ ಉತ್ತಮ ಕೆಲಸ ಮಾಡಿತ್ತು. ಈ ಬಾರಿಯೂ ಪೊಲೀಸ್ ಇಲಾಖೆ ದಕ್ಷತೆ ತೋರಲಿದೆ. ಆದರೆ ಈ ರೀತಿ ತಪ್ಪಿಸಿಕೊಳ್ಳುವ ಪ್ರಯಾಣಿಕರು ಸಾಮಾಜಿಕ ಕಳಕಳಿ ಮತ್ತು ಜವಾಬ್ದಾರಿಯಿಂದ ವರ್ತಿಸಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next