Advertisement

ದಕ್ಷಿಣದ ಧ್ವನಿಯಾಗಲು ಹೊರಟರೇ ಸಿದ್ದರಾಮಯ್ಯ?

11:02 PM Feb 05, 2024 | Team Udayavani |

ಬೆಂಗಳೂರು: ತೆರಿಗೆ ಪಾಲಿನ ವಿಚಾರಕ್ಕೆ ಸಂಬಂಧಪಟ್ಟಂತೆ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಆಯೋಜಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ “ಉತ್ತರದ ವಿರುದ್ಧ ದಕ್ಷಿಣದ ಧ್ವನಿಯಾಗಲು ಹೊರಟಿದ್ದಾರೆಯೇ?’

Advertisement

ಇಂಥದ್ದೊಂದು ಚರ್ಚೆ ಈಗ ಕಾಂಗ್ರೆಸ್‌ ವಲಯದಲ್ಲಿ ಅದರಲ್ಲೂ ವಿಶೇಷವಾಗಿ ಸಿದ್ದರಾಮಯ್ಯ ಪರ ಪಡಸಾಲೆಯಲ್ಲಿ ದಟ್ಟವಾಗಿ ಚರ್ಚೆಯಾಗುತ್ತಿದ್ದು, ಕೇಂದ್ರ ಸರ್ಕಾರ ಹಾಗೂ ಉತ್ತರದ ಲಾಬಿಯ ವಿರುದ್ಧ ದಕ್ಷಿಣ ಭಾರತದ ಪರವಾಗಿ ಮೊಳಗಿಸಬೇಕಾದ ಸ್ವರಕ್ಕೆ ಸಿದ್ದರಾಮಯ್ಯ ಧ್ವನಿಯಾಗಿದ್ದಾರೆ ಎಂದು ವ್ಯಾಖ್ಯಾನಿಸಲಾಗುತ್ತಿದೆ. ದಕ್ಷಿಣ ಭಾರತದಲ್ಲಿ ಮೋದಿ ಅಶ್ವಮೇಧ ಯಾಗದ ಕುದುರೆ ಕಟ್ಟಿ ಹಾಕುವುದಕ್ಕೆ ಈ ಹೋರಾಟ ಒಂದು ಹಂತದಲ್ಲಿ ನೆರವು ನೀಡಬಹುದೆಂಬ ಲೆಕ್ಕಾಚಾರ ಕಾಂಗ್ರೆಸ್‌ನದ್ದಾಗಿದೆ.

ಅಯೋಧ್ಯಾ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆಯ ಬಳಿಕ ಲೋಕಸಭಾ ಚುನಾವಣೆ ಎದುರಿಸುವುದಕ್ಕೆ ಬೇಕಾದ ಪೊಲಿಟಿಕಲ್‌ ನರೇಟಿವ್‌ ನಿರ್ಮಾಣಕ್ಕೆ ಎಲ್ಲ ರಾಜಕೀಯ ಪಕ್ಷಗಳು ವಿಫ‌ಲವಾಗಿವೆ. ರಾಹುಲ್‌ ಗಾಂಧಿಯವರ ಭಾರತ್‌ ಜೋಡೋ ನ್ಯಾಯ ಯಾತ್ರೆ ಉತ್ತರದ ರಾಜ್ಯಗಳಲ್ಲಿ ಮುಗ್ಗರಿಸಿ ಬೀಳುತ್ತಿದೆ. ತೆರಿಗೆ ವಿಚಾರದಲ್ಲಿ ಸಂಸದ ಡಿ.ಕೆ.ಸುರೇಶ್‌ ನೀಡಿದ ಹೇಳಿಕೆ ಕಾಂಗ್ರೆಸ್‌ಗೆ ತಿರುಗು ಬಾಣವಾಗುತ್ತಿದೆ. ಈ ಹಂತದಲ್ಲಿ ಸಿಎಂ ಸಿದ್ದರಾಮಯ್ಯ “ನನ್ನ ತೆರಿಗೆ ನನ್ನ ಹಕ್ಕು’ ಅಭಿಯಾನದ ಹಿಂದೆ ನಿಂತು ರಾಜಕೀಯ ಸಂಕಥನ ಕಟ್ಟುವ ಲೆಕ್ಕ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.

ಆದರೆ, ತಾವು ಉತ್ತರದ ವಿರುದ್ಧ ದಕ್ಷಿಣದ ಧ್ವನಿಯಾಗುವ ಪ್ರಯತ್ನ ನಡೆಸುತ್ತಿದ್ದೇನೆ ಎಂಬುದನ್ನು ಎಲ್ಲಿಯೂ ಬಿಂಬಿಸಿಕೊಳ್ಳದಂತೆ ನಾಜೂಕಾದ ಹೆಜ್ಜೆಯನ್ನು ಸಿದ್ದರಾಮಯ್ಯ ಇಡುತ್ತಿದ್ದಾರೆ. ಈ ವಿಚಾರಕ್ಕೆ ಸಂಬಂಧಪಟ್ಟಂತೆ ದಕ್ಷಿಣದ ಯಾವುದೇ ರಾಜ್ಯಗಳಿಗೆ ಅವರು ಪತ್ರ ಬರೆದಿಲ್ಲ. ನೀವು ಈ ವಿಚಾರದಲ್ಲಿ ದಕ್ಷಿಣದ ರಾಜ್ಯಗಳ ನಾಯಕತ್ವ ವಹಿಸುತ್ತೀರಾ ಎಂದು ಸುದ್ದಿಗಾರರು ಪದೇ ಪದೆ ಪ್ರಶ್ನಿಸಿದರೂ ಅವರು ಉತ್ತರ ನೀಡುವ ಗೊಡವೆಗೆ ಹೋಗಿಲ್ಲ. ಆದರೆ ನಮ್ಮ ರಾಜ್ಯದ ಹೋರಾಟಕ್ಕೆ ಮಾತ್ರ ನಾನೇ ನಾಯಕತ್ವ ವಹಿಸುತ್ತೇನೆಂದು ಸ್ಪಷ್ಟಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next