ಶಿರ್ವ: ವಿದ್ಯಾರ್ಥಿ ಜೀವನ ಅತ್ಯಂತ ಪ್ರಮುಖ ಘಟ್ಟವಾಗಿದ್ದು, ವ್ಯಕ್ತಿಯ ಭವಿಷ್ಯವನ್ನು ರೂಪಿಸುವ ಮಹತ್ತರ ಹಂತವಾಗಿದೆ. ಹದಿಹರೆಯ ದೈಹಿಕ, ಮಾನಸಿಕ ಬೆಳವಣಿಗೆಯ ಮೇಲೆ ಪರಿಣಾಮ ಬೀರುವ ಸನ್ನಿವೇಶದಲ್ಲಿ ಕುತೂಹಲ ಮತ್ತು ಅನ್ವೇಷಣಾ ಪ್ರವೃತ್ತಿಯಿಂದ ಮಾನಸಿಕ ಚಂಚಲತೆ, ಏಕಾಗ್ರತೆಯ ಕೊರತೆ, ಆಕರ್ಷಣೆಯ ಪರಿಣಾಮ ವಿವಿಧ ದುಶ್ಚಟಗಳಿಗೆ ಬಲಿಯಾಗಿ ಉಜ್ವಲ ಭವಿಷ್ಯಕ್ಕೆ ಮಾರಕವಾಗುತ್ತದೆ.
ಈ ಹಂತದಲ್ಲಿ ಮಾನಸಿಕ ಸುಸ್ಥಿತಿಗೆ ಕೆಲವು ಧನಾತ್ಮಕ ಮೌಲ್ಯಗಳನ್ನು ರೂಢಿಸಿಕೊಂಡಾಗ ಭವಿಷ್ಯಕ್ಕೆ ಭದ್ರ ಬುನಾದಿಯೊಂದಿಗೆ ಸಾಧನೆಗೆ ದಾರಿದೀಪವಾಗುತ್ತದೆ ಎಂದು ಕಾಪು ತಾಲೂಕು ಕಸಾಪ ಅಧ್ಯಕ್ಷ ಹಾಗೂ ಸ್ವಾಸ್ಥ್ಯ ಸಂಕಲ್ಪ ಸಂಪನ್ಮೂಲ ವ್ಯಕ್ತಿ ಬಿ.ಪುಂಡಲೀಕ ಮರಾಠೆ ಹೇಳಿದರು.
ಅವರು ಶಿರ್ವ ಹಿಂದೂ ಪದವಿಪೂರ್ವ ಕಾಲೇಜಿನ ಫೌÅಢ ಶಾಲಾ ವಿದ್ಯಾರ್ಥಿಗಳಿಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ.ಯೋಜನೆ, ಜನಜಾಗೃತಿ ಸಮಿತಿ ಶಿರ್ವ ವಲಯದ ವತಿಯಿಂದ ಏರ್ಪಡಿಸಿದ ಸ್ವಾಸ್ಥ ಸಂಕಲ್ಪ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಪ್ರೌಢ ಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಶಕಿಲಾ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಇಂತಹ ತರಬೇತಿಯ ಅಗತ್ಯತೆ ಇದ್ದು,ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಶಿರ್ವ ವಲಯದ ವತಿಯಿಂದ ವ್ಯವಸ್ಥೆ ಮಾಡಿದ ಬಗ್ಗೆ ಕೃತಜ್ಞತೆ ಸಲ್ಲಿಸಿ, ವಿದ್ಯಾರ್ಥಿಗಳು ಉತ್ತಮ ಮೌಲ್ಯಗಳನ್ನು ರೂಢಿಸಿಕೊಳ್ಳುವಂತೆ ಕರೆ ನೀಡಿದರು.ಕುತ್ಯಾರು ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ಪಾರ್ವತಿ ಸಹಕರಿಸಿದರು. ಶಿಕ್ಷಕರಾದ ಗಣೇಶ್ ಶೆಟ್ಟಿ, ಕೇಶವ, ವಸಂತಿ ಬಾಯಿ, ಸುಪ್ರೀತಾ ಶೆಟ್ಟಿ, ಪವನಾ ಉಪಸ್ಥಿತರಿದ್ದರು.
ಯೋಜನೆಯ ಶಿರ್ವ ವಲಯದ ಮೇಲ್ವಿಚಾರಕಿ ಪಲ್ಲವಿ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಶಿಕ್ಷಕ ವಿನಯಕುಮಾರ್ ಹೆಗ್ಡೆ ವಂದಿಸಿದರು.